ಹಾಸನ ‘ಗೌಡರ’ ಮತ್ತೊಬ್ಬ ಮೊಮ್ಮಗ ನಿಖಿಲ್ ಮಂಡ್ಯ ಮಡಿಲಿಗೆ
ಮೈಸೂರು

ಹಾಸನ ‘ಗೌಡರ’ ಮತ್ತೊಬ್ಬ ಮೊಮ್ಮಗ ನಿಖಿಲ್ ಮಂಡ್ಯ ಮಡಿಲಿಗೆ

March 15, 2019

ಮಂಡ್ಯ: ಮಂಡ್ಯದ ಅಭಿವೃದ್ಧಿ ದೃಷ್ಟಿಯಿಂದ ನನ್ನ ಮಗ ನಿಖಿಲ್‍ನನ್ನು ಅಭ್ಯರ್ಥಿ ಮಾಡ ಲಾಗಿದೆಯೇ ಹೊರತು ಅಧಿಕಾರದ ಲಾಲಸೆಯಿಂದ ಅಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗನನ್ನು ಅಭ್ಯರ್ಥಿ ಮಾಡಿದ್ದನ್ನು ಸಮರ್ಥಿಸಿಕೊಂಡರು.

ನಗರದ ಸಿಲ್ವರ್‍ಜ್ಯುಬಿಲಿ ಪಾರ್ಕ್‍ನಲ್ಲಿ ಇಂದು ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಮಗ ನಿಖಿಲ್‍ನನ್ನು ಚುನಾವಣೆಗೆ ನಿಲ್ಲಿಸಬೇಕೆಂಬ ಯೋಚನೆಯೇ ನನಗಿರ ಲಿಲ್ಲ. ರವೀಂದ್ರ ಶ್ರೀಕಂಠಯ್ಯನವರು ಮೊದಲು ನಿಖಿಲ್ ಹೆಸರನ್ನು ಹೇಳಿದಾಗ ಅವರ ಮಾತನ್ನು ಕೇಳಿ ನನಗೆ ನಡುಕ ಬಂತು. ಆ ನಂತರ ಮಂಡ್ಯ ಜನರ ಒತ್ತಾಯದ ಮೇರೆಗೆ ನಿಖಿಲ್ ರಾಜಕೀಯಕ್ಕೆ ಕಾಲಿಟ್ಟಿದ್ದಾನೆ. ಆತ ಅಧಿಕಾರ ಅನುಭವಿಸಬೇಕೆಂಬ ಆಸೆಯಿಂದ ಇಲ್ಲಿಗೆ ಬಂದಿಲ್ಲ. ಮಂಡ್ಯ ಜನರ ಸೇವೆ ಮಾಡಲು ಬಂದಿದ್ದಾನೆ ಎಂದರು. ವಿಧಾನಸಭೆಯಲ್ಲಿ ನಾನು ಬಜೆಟ್ ಮಂಡಿಸುವಾಗ ಬಿಜೆಪಿಯವರು ‘ಗೋ ಬ್ಯಾಕ್’ ಎಂದು ಆರಂಭಿಸಿದ್ದರು.

ಈಗ ನಿಖಿಲ್ ಹೆಸರು ಪ್ರಸ್ತಾಪವಾಗು ತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ‘ಗೋ ಬ್ಯಾಕ್’ ಎಂದು ಹರಿಬಿಡುತ್ತಿದ್ದಾರೆ. ಯಾರೋ ಎಂಟು ಜನ ಗೋ ಬ್ಯಾಕ್ ಎಂದಾಕ್ಷಣ ಹೆದರಿ ಓಡುವವ ರಲ್ಲ ನಾವು. ಮಂಡ್ಯದ ಜನರು ನಮ್ಮ ಮೇಲೆ ಅಭಿ ಮಾನ ಇಟ್ಟಿದ್ದಾರೆ. ಅವರು ನಮಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ 2004ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದೆ. ಆಗಲೂ ನನ್ನನ್ನು ಮಂಡ್ಯ ಜನ ಬೆಂಬಲಿಸಿದ್ದರು. ಈಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸುವ ಮೂಲಕ ಮತ್ತೆ ನಾನು ಮುಖ್ಯಮಂತ್ರಿಯಾಗಲು ಆಶೀರ್ವಾದ ಮಾಡಿದ್ದೀರಿ. ಈ ಮೂಲಕ ನನಗೆ ಎರಡನೇ ಜನ್ಮ ನೀಡಿದ ನಿಮ್ಮ ಋಣ ತೀರಿಸಲು ಇಲ್ಲಿಗೆ ಬಂದಿದ್ದೇನೆ. ನೀವು ನನ್ನನ್ನು ನಿಮ್ಮ ಮನೆ ಮಗನಂತೆ ಬೆಳೆಸಿದ್ದೀರಿ. ಅದೇ ರೀತಿ ನಿಮ್ಮ ಸೇವೆ ಮಾಡುವ ಕನಸು ಹೊತ್ತು ಬಂದಿರುವ ನನ್ನ ಮಗನಿಗೂ ಪ್ರೀತಿ, ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಮಂಡ್ಯ ಅಭಿವೃದ್ಧಿಗಾಗಿ 8 ಸಾವಿರ ಕೋಟಿಗೂ ಹೆಚ್ಚು ಹಣ ಮೀಸಲಿಟ್ಟು ಯೋಜನೆಗಳನ್ನು ರೂಪಿ ಸಿದ್ದೇನೆ. ಪಾಂಡವಪುರ ತಾಲೂಕಿನಲ್ಲಿ ಬಸ್ ದುರಂತದಲ್ಲಿ ಮಕ್ಕಳು ಸತ್ತಾಗ ಅವರನ್ನು ನೆನೆದು ಕಣ್ಣೀರಾಕಿದ್ದೇನೆ. ಆಗೆಲ್ಲಾ ನನ್ನ ಮಗನನ್ನು ಇಲ್ಲಿ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಕನಸು-ಮನಸಲ್ಲೂ ನೆನೆಸಿರಲಿಲ್ಲ. ರಾಜಕೀಯ ಲಾಭಕ್ಕಾಗಿ ಮಂಡ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿಲ್ಲ. ನಿಮ್ಮ ಮೇಲಿನ ಅಭಿಮಾನದಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ ಎಂದರು.

ಅಂಬರೀಶ್ ಮತ್ತು ನನ್ನ ನಡುವಿನ ಬಾಂಧವ್ಯ ಗೊತ್ತಿಲ್ಲದವರು ಸಾಮಾಜಿಕ ಜಾಲತಾಣದಲ್ಲಿ ಮನಬಂದಂತೆ ಟ್ರೋಲ್ ಮಾಡುತ್ತಿದ್ದಾರೆ. ಅಂಬರಿ ೀಶ್ ಅವರ ಪಾರ್ಥೀವ ಶರೀರವನ್ನು ಮಂಡ್ಯಗೆ ಕೊಂಡೊಯ್ಯುವುದು ಬೇಡ ಎಂದು ಹೇಳಿದವರೆಲ್ಲ ಈಗ ಇಲ್ಲಿಗೆ ಬಂದು ಋಣ ತೀರಿಸುತ್ತೇವೆ ಎಂದು ಹೇಳುತ್ತಾ ತಿರುಗುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು. ಲಕ್ಷ್ಮೀ ಅಶ್ವಿನಿಗೌಡರಿಗೆ ಮೋಸ ಮಾಡಿ ನಿಖಿಲ್‍ಗೆ ಟಿಕೆಟ್ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವುದನ್ನು ಗಮನಿಸಿದ್ದೇನೆ. ಮಳವಳ್ಳಿ ಜೆಡಿಎಸ್ ಅಧ್ಯಕ್ಷ ಕೆಂಚಪ್ಪನವರ ಪುತ್ರಿ ನಾಗಮಂಗಲದ ಸೊಸೆ ಲಕ್ಷ್ಮೀ ಅಶ್ವಿನಿಗೌಡ ಅವರು ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ದಿಂದ ಸ್ಪರ್ಧಿಸಬೇಕೆಂದು ಬಂದಿದ್ದರು. ಆಗಲೇ ನನಗೆ ಅವರ ಪರಿಚಯವಾಗಿದ್ದು. ಅವರ ಪತಿ ಐಆರ್‍ಎಸ್ ಅಧಿಕಾರಿಯಾಗಿದ್ದು, ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಸ್ವಯಂ ನಿವೃತ್ತಿ ಪಡೆದಿರುವ ಲಕ್ಷ್ಮೀ ಅಶ್ವಿನಿಗೌಡ ಅವರು ಕೂಡ ಕೆಲಸಕ್ಕೆ ಮರು ಸೇರ್ಪಡೆಯಾಗಲು ಕೇಳು ತ್ತಿದ್ದು, ಅವರಿಗೆ ಅವಕಾಶ ನೀಡಿ ಎಂದು ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇನೆ. ದೇವೇ ಗೌಡರ ಕುಟುಂಬ ಯಾವುದೇ ಹೆಣ್ಣುಮಗಳಿಗೆ ಮೋಸ ಮಾಡಿಲ್ಲ. ಹೆಣ್ಣು ಮಕ್ಕಳನ್ನು ಗೌರವಿಸುವ ಸ್ಥಳದಲ್ಲಿ ದೇವರು ನಡೆದಾಡುತ್ತಾನೆ ಎಂಬ ಮಾತನ್ನು ನಂಬಿರುವವರು ನಾವು. ಆದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳಿಂದ ಮನಸ್ಸಿಗೆ ನೋವಾಗುತ್ತಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಮತ್ತು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳ ಮುಂದೆ ಇನ್ನೂ ಜೆಡಿಎಸ್ ಇರುವುದಕ್ಕೆ ಕಾರಣ ಹೆಚ್.ಡಿ. ದೇವೇಗೌಡರು ಎಂಬುದನ್ನು ಎಷ್ಟು ಜನ ಅರಿತಿದ್ದಾರೆ. ಪಕ್ಷಕ್ಕಾಗಿ ಅವರು ಮಾಡಿ ರುವ ತ್ಯಾಗ ಮತ್ತು ಹೋರಾಟವನ್ನು ಗಮನಿಸದೆ ಅವರ ಬಗ್ಗೆ ಟೀಕೆ ಮಾಡುತ್ತಿರುವುದು ಮನಸ್ಸಿಗೆ ನೋವನ್ನುಂಟು ಮಾಡಿದೆ. ಅವರು ಪ್ರಧಾನಿ ಯಾಗಿದ್ದಾಗ ಕೈಗೊಂಡಿದ್ದ ಜನಪರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸ್ಮರಿಸಬೇಕಾಗಿದೆ ಎಂದರು.

ಸಮಾವೇಶದಲ್ಲಿ ಸಚಿವರುಗಳಾದ ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಸಾ.ರಾ. ಮಹೇಶ್, ಶಾಸಕರುಗಳಾದ ಎಂ. ಶ್ರೀನಿವಾಸ್, ಸುರೇಶ್‍ಗೌಡ, ನಾರಾಯಣಗೌಡ, ರವೀಂದ್ರ ಶ್ರೀಕಂಠಯ್ಯ, ಪಕ್ಷದ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್, ಮಧುಬಂಗಾ ರಪ್ಪ, ಸಂಸದ ಎಲ್.ಆರ್. ಶಿವರಾಮೇಗೌಡ, ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಸಂತೋಷ್ ತಮ್ಮಣ್ಣ ಮುಂತಾದವರಿದ್ದರು.

ಬಿಜೆಪಿ ಸಂಸದರ ಸಂಖ್ಯೆ ನಾಲ್ಕೈದಕ್ಕೆ ಇಳಿಸುವ ಗುರಿ: ಗೌಡರ ಶಪಥ

ಮಂಡ್ಯ: ರಾಜ್ಯದಲ್ಲಿ ಬಿಜೆಪಿ ಸಂಸದರ ಸಂಖ್ಯೆಯನ್ನು ನಾಲ್ಕರಿಂದ ಐದಕ್ಕೆ ಇಳಿಸುವುದೇ ನನ್ನ ಗುರಿಯಾಗಿದ್ದು, ಕಾಂಗ್ರೆಸ್‍ನವರು ಪ್ರಚಾರಕ್ಕಾಗಿ ಎಲ್ಲಿಗೆ ಕರೆದರೂ ಹೋಗುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು. ಸಮಾ ವೇಶದಲ್ಲಿ ಮಾತನಾಡಿದ ಅವರು, ನನ್ನ ಮಗ ಕುಮಾರ ಸ್ವಾಮಿ 2 ಸರ್ಜರಿ ಮಾಡಿಸಿಕೊಂಡು ಕಷ್ಟದಲ್ಲಿದ್ದಾಗ ಆಗ ತಾನೇ ತನ್ನ ಮೊದಲ ಚಿತ್ರ ಜಾಗ್ವಾರ್‍ನಲ್ಲಿ ನಟಿಸುತ್ತಿದ್ದ ನನ್ನ ಮೊಮ್ಮಗ ನಿಖಿಲ್ ತನ್ನ ಅಪ್ಪನ ಸಹಾಯಕ್ಕೆ ಬಂದ. ಕಷ್ಟದಲ್ಲಿರುವ ಅಪ್ಪನ ಜೊತೆ ಸೇರಿ ಪಕ್ಷವನ್ನು ಸಂಘಟಿಸುತ್ತೇನೆ ಎಂದು ಓಡಾಡಿದ. ಪಕ್ಷದ ಬಗ್ಗೆ ಅವನಿಗೆ ಇದ್ದ ಕಾಳಜಿಯನ್ನು ನೋಡಿ ಆತನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೇನೆ ಹೊರತು ಮೊಮ್ಮಗ ಎಂಬ ಕಾರಣಕ್ಕಾಗಿ ಅಲ್ಲ ಎಂದರು. ನಾನು ದೇವರನ್ನು ನಂಬುತ್ತೇನೆ. ನಾನು ಮುಖ್ಯಮಂತ್ರಿಯಾಗಿ ದ್ದಾಗ ಪ್ರಧಾನಿಯಾಗಬೇಕೆಂಬ ಆಸೆಯೇ ನನಗೆ ಇರಲಿಲ್ಲ. ನಮ್ಮ ಪಕ್ಷವು ಹೆಚ್ಚೇನೂ ಸ್ಥಾನಗಳನ್ನು ಹೊಂದಿರಲಿಲ್ಲ.

ಆದರೂ ನನ್ನನ್ನು ಬಲವಂತವಾಗಿ ಎಳೆದೊಯ್ದು ಪ್ರಧಾನಿ ಮಾಡಿದರು. ಈಗಲೂ ಅಷ್ಟೇ ಕೇವಲ 37 ಸ್ಥಾನ ಹೊಂದಿದ್ದ ನಮ್ಮ ಬಳಿಗೆ ಕಾಂಗ್ರೆಸ್‍ನವರು ಬಂದು ನಿಮ್ಮ ಮಗನೇ ಮುಖ್ಯಮಂತ್ರಿಯಾಗಬೇಕು ಎಂದರು. ನಾನು ಒಪ್ಪಿರಲಿಲ್ಲ. ಅಲ್ಲೇ ಇದ್ದ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದ್ದೆ. ಕುಮಾರಸ್ವಾಮಿಯನ್ನು ಸಿಎಂ ಮಾಡಿ ಎಂದು ಹೇಳಿದಾಗ ಅವರ ಆರೋಗ್ಯದ ಬಗ್ಗೆ ನಾನು ಹೆದರಿದ್ದೆ. ಆದರೆ ಕಾಂಗ್ರೆಸ್‍ನವರು ಹಠ ಹಿಡಿದು ಕುಮಾರಸ್ವಾಮಿಯನ್ನು ಸಿಎಂ ಮಾಡಿದರು ಎಂದು ಹೇಳುವ ಮೂಲಕ ದೇವರ ಅನುಗ್ರಹದಿಂದಲೇ ತಾವು ಪ್ರಧಾನಿ ಹಾಗೂ ತಮ್ಮ ಮಗ ಮುಖ್ಯಮಂತ್ರಿಯಾದದ್ದು ಎಂಬುದನ್ನು ಪರೋಕ್ಷವಾಗಿ ಹೇಳಿದರು.

ನಾನು ಪ್ರಧಾನಿಯಾಗಿದ್ದಾಗ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಅದಾವುದನ್ನು ಯಾರೂ ಪತ್ರಿಕೆಗಳಲ್ಲಿ ಬರೆಯಲಿಲ್ಲ. ಆದರೆ ಈಗ ಏನೇನೋ ಬರೆಯುತ್ತಿದ್ದಾರೆ. ಟಿವಿಗಳಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ. ಗೋ ಬ್ಯಾಕ್ ಎಂದು ಹೇಳುತ್ತಿದ್ದಾರೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದರು. ಬಿಜೆಪಿ ದುರಾಡಳಿತಕ್ಕೆ ಈಗಾಗಲೇ ಜನರು ಉತ್ತರ ನೀಡಿದ್ದಾರೆ. 13 ಉಪಚುನಾವಣೆಗಳಲ್ಲಿ ಒಂದನ್ನು ಮಾತ್ರ ಬಿಜೆಪಿ ಗೆದ್ದಿದ್ದು ಮತ್ತು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಇದಕ್ಕೆ ಸಾಕ್ಷಿಯಾಗಿದೆ.

ಜ್ಯೋತಿಷಿಗಳಿಂದ ಮುಹೂರ್ತ ಫಿಕ್ಸ್!

ಮಂಡ್ಯ: ಜ್ಯೋತಿಷ್ಯದ ಮೇಲೆ ಅಪಾರ ನಂಬಿಕೆ ಇಟ್ಟಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇಂದು ಮಂಡ್ಯ ಲೋಕ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಘೋಷಣೆ ಮಾಡಲು ಕೂಡ ಶುಭ ಘಳಿಗೆಯನ್ನು ಆಯ್ಕೆ ಮಾಡಿಕೊಂಡರು. ಮಂಡ್ಯದ ಸಿಲ್ವರ್‍ಜ್ಯುಬಿಲಿ ಪಾರ್ಕ್‍ನಲ್ಲಿ ಇಂದು ನಡೆದ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸ್ವತಃ ದೇವೇಗೌಡರೇ ತಮ್ಮ ಮೊಮ್ಮಗನನ್ನು ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆ ಮಾಡಬೇಕಾಗಿತ್ತು. ಆದರೆ ಅವರು ಶುಭ ಘಳಿಗೆ ವೇಳೆಗೆ ವೇದಿಕೆಗೆ ಬರಲು ಸಾಧ್ಯವಾಗದ ಕಾರಣ ಸಚಿವ ಸಿ.ಎಸ್. ಪುಟ್ಟರಾಜು ಅವರಿಂದ ಶುಭ ಘಳಿಗೆಯಲ್ಲೇ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಜೆಡಿಎಸ್ ಅಭ್ಯರ್ಥಿಯೆಂದು ಘೋಷಣೆ ಮಾಡಿಸಿದರು.

ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ವೇದಿಕೆ ಏರುವ ಮುನ್ನವೇ ಶುಭ ಘಳಿಗೆ ಮೀರಿ ಹೋಗುತ್ತದೆ ಎಂಬ ಕಾರಣದಿಂದಲೇ ಏನೋ ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ಸಿ.ಎಸ್. ಪುಟ್ಟ ರಾಜು ಅವರು ಕಾರ್ಯಕರ್ತರ ಕರಘೋಷದ ನಡುವೆ ನಿಖಿಲ್‍ಕುಮಾರ್ ಜೆಡಿಎಸ್ ಅಭ್ಯರ್ಥಿ ಯೆಂದು ಘೋಷಿಸಿದರು. ವೇದಿಕೆಯ ಕೆಳಗೆ ಇದ್ದ ನಿಖಿಲ್ ಒಂದು ನಿಮಿಷದ ನಂತರ ವೇದಿಕೆ ಏರಿದರು. ಅಭ್ಯರ್ಥಿ ಘೋಷಣೆಯೂ ಜ್ಯೋತಿಷಿಗಳ ಸಲಹೆಯಂತೆ ಶುಭ ಘಳಿಗೆಯಲ್ಲೇ ಮಾಡಲಾಗಿದೆ ಎಂಬುದು ಮಾಜಿ ಪ್ರಧಾನಿ ದೇವೇಗೌಡರು ಭಾಷಣ ಮಾಡುವ ವೇಳೆ ದೃಢಪಡಿಸಿ ದಂತಿತ್ತು. ಅವರು ಮಾತನಾಡುತ್ತಾ, ‘ನಿಖಿಲ್ ಅವರನ್ನು ಮಧ್ಯಾಹ್ನ 12 ಗಂಟೆಯೊಳಗೆ ಅಭ್ಯರ್ಥಿಯೆಂದು ಘೋಷಣೆ ಮಾಡಲು ನಿರ್ಧರಿಸಿದ್ದೆವು.

Translate »