‘ಬಾಂಬ್‍ಮನ್’ ಹೆಜ್ಜೆ ಗುರುತು…
ಮೈಸೂರು

‘ಬಾಂಬ್‍ಮನ್’ ಹೆಜ್ಜೆ ಗುರುತು…

January 21, 2020

ಮಂಗಳೂರು, ಜ.20(ಎಸಿಪಿ)-ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗುತ್ತಿದ್ದಂತೆಯೇ ಮಂಗಳೂರು ನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಬಾಂಬ್ ಇರಿಸಿದ ಶಂಕಿತನ ಹೆಜ್ಜೆ ಜಾಡು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ಯನ್ನು ಬೆಂಗಳೂರಿನಿಂದ ಆಗಮಿಸಿದ್ದ ತಂಡ ನಡೆಸುತ್ತಿದ್ದರೆ, ಇತ್ತ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಎ.ಹರ್ಷ, ದುಷ್ಕರ್ಮಿಯ ಪತ್ತೆಗಾಗಿ 3 ತಂಡಗಳನ್ನು ರಚಿಸಿದ್ದರು. ಒಂದು ತಂಡ ನಾಕಾಬಂದಿ ನಿರ್ಮಿಸಿ ವಾಹನ ತಪಾಸಣೆಯಲ್ಲಿ ತೊಡಗಿದ್ದರೆ, ಮತ್ತೊಂದು ತಂಡ ಸೂಕ್ಷ್ಮ ಪ್ರದೇಶಗಳಲ್ಲಿ ಬಂದೋಬಸ್ತ್‍ನಲ್ಲಿ ನಿರತವಾಗಿತ್ತು. ತಾಂತ್ರಿಕ ಪೊಲೀಸ್ ತಂಡವು ಸಿಸಿ ಕ್ಯಾಮರಾಗಳ ಫುಟೇಜ್‍ಗಳನ್ನು ಪರಿಶೀಲಿಸಲು ಆರಂಭಿಸಿತು.

ಬೆಳಿಗ್ಗೆ 8.59ರ ವೇಳೆಯಲ್ಲಿ ವಿಮಾನ ನಿಲ್ದಾಣದ ಎಕ್ಸಿಟ್ ಟರ್ಮಿನಲ್ ಬಳಿ ಆಟೋವೊಂದರಿಂದ ವ್ಯಕ್ತಿಯೋರ್ವ ಬ್ಯಾಗ್‍ನೊಂದಿಗೆ ಇಳಿದು ವಿಮಾನ ನಿಲ್ದಾಣಕ್ಕೆ ತೆರಳುತ್ತಿರುವುದು ಹಾಗೂ ಆತ ಹಿಂತಿರುಗಿ ಬಂದಾಗ ಬ್ಯಾಗ್ ಇಲ್ಲದೇ ಬರೀಗೈಯಲ್ಲಿ ಬರುತ್ತಿರುವುದು ಮತ್ತು ತನ್ನ ಮುಖ ಚಹರೆ ಮರೆ ಮಾಚುವ ಉದ್ದೇಶದಿಂದ ಕ್ಯಾಪ್ ಧರಿಸಿ, ತಲೆ ಬಗ್ಗಿಸಿ ನಡೆಯುತ್ತಿರುವ ದೃಶ್ಯವನ್ನು ವಿಮಾನ ನಿಲ್ದಾಣದಲ್ಲಿ ಅಳವಡಿಸಿ ರುವ ಸಿಸಿ ಕ್ಯಾಮರಾ ಫುಟೇಜ್‍ನಲ್ಲಿ ಕಾಣುತ್ತಿದ್ದಂತೆಯೇ ಪೊಲೀಸರು ಚುರುಕಾದರು. ತಾಂತ್ರಿಕ ತಂಡ ನೀಡಿದ ಮಾಹಿತಿ ಆಧರಿಸಿ ಮತ್ತೊಂದು ತಂಡ ಆಟೋ ಚಾಲಕನನ್ನು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿತು. ಆತ ನೀಡಿದ ಮಾಹಿತಿ ಆಧರಿಸಿ ಸುಮಾರು 12 ಸಿಸಿ ಕ್ಯಾಮರಾಗಳ ಫುಟೇಜ್‍ಗಳನ್ನು ಪರಿಶೀಲಿಸಿದಾಗ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ವ್ಯಕ್ತಿ ಆತನೇ ಇರಬಹುದು ಎಂಬ ಶಂಕೆ ಬಲವಾಗಿದೆ.

ಹೆಜ್ಜೆ ಜಾಡು: ಶಂಕಿತ ವ್ಯಕ್ತಿಯು ಮಂಗಳೂರು ಖಾಸಗಿ ಬಸ್ ನಿಲ್ದಾಣದಲ್ಲಿ ರಾಜ್‍ಕುಮಾರ್ ಎಂಬ ಬಸ್ ಹತ್ತಿ ಶ್ರೀದೇವಿ ಕಾಲೇಜು ಬಳಿ ಸ್ಟಾಪ್‍ನಲ್ಲಿ ಇಳಿ ದಿದ್ದಾನೆ. ಆಗ ಆತನ ಬಳಿ ಎರಡು ಬ್ಯಾಗ್‍ಗಳಿದ್ದವು. ಕಾಲೇಜು ಸಮೀಪದ ಕಾಂಪ್ಲೆಕ್ಸ್‍ನಲ್ಲಿರುವ ಸಲೂನ್‍ಗೆ ಆತ ತೆರಳಿದ್ದಾನೆ. ಸಲೂನ್‍ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಸಿಬ್ಬಂದಿಯನ್ನು ಸಂಪರ್ಕಿಸಿ, ಒಂದು ಬ್ಯಾಗ್‍ನ್ನು ಸಲೂನ್‍ನಲ್ಲಿ ಇರಿಸಿ, ಸ್ವಲ್ಪ ಸಮಯದ ನಂತರ ತೆಗೆದುಕೊಂಡು ಹೋಗುವುದಾಗಿ ಕೇಳಿದ್ದಾನೆ. ಅದರೆ, ಸಲೂನ್ ಸಿಬ್ಬಂದಿ, ಅದಕ್ಕೆ ನಿರಾಕರಿಸಿ ಬೇಕಾದರೆ ಸಲೂನ್‍ನಿಂದ ಹೊರಗೆ ಬ್ಯಾಗ್ ಅನ್ನು ಇಟ್ಟು ಹೋಗಿ. ಒಳಗಂತೂ ಇರಿಸಿಕೊಳ್ಳುವುದಿಲ್ಲ ಎಂದು ಹೇಳಿದಾಗ, ಶಂಕಿತ ವ್ಯಕ್ತಿಯು ಸಲೂನ್ ಹೊರಗೆ ಬ್ಯಾಗ್ ಇಟ್ಟು ಅದನ್ನು ನೋಡಿಕೊಳ್ಳುವಂತೆ ತಿಳಿಸಿ, ತೆರಳಿದ್ದಾನೆ.

ಶ್ರೀದೇವಿ ಕಾಲೇಜು ಬಳಿಯೇ ಆಟೋ ಹತ್ತಿದ ಶಂಕಿತ ತನಗೆ ವಿಮಾನ ನಿಲ್ದಾಣ ದಲ್ಲಿ 5 ನಿಮಿಷ ಕೆಲಸವಿದ್ದು, ಅಲ್ಲಿ ವೇಟ್ ಮಾಡಬೇಕಾಗುತ್ತದೆ ಎಂದು ಆಟೋ ಚಾಲಕನಿಗೆ ತಿಳಿಸಿಯೇ ಪ್ರಯಾಣ ಬೆಳೆಸಿದ್ದಾನೆ. ವಿಮಾನ ನಿಲ್ದಾಣದ ಎಕ್ಸಿಟ್ ಟರ್ಮಿನಲ್ ಬಳಿ ಆಟೋದಿಂದ ಇಳಿದ ಆತ, ಮತ್ತೆ ವಾಪಸ್ ಬಂದು ಅದೇ ಆಟೋ ದಲ್ಲಿ ಶ್ರೀದೇವಿ ಕಾಲೇಜು ಬಳಿಗೆ ಬಂದು ಸಲೂನ್ ಮುಂದೆ ತಾನು ಇರಿಸಿದ್ದ ಬ್ಯಾಗ್‍ನ್ನು ತೆಗೆದುಕೊಂಡು ಹೋಗಿದ್ದಾನೆ. ಈತನ ಈ ಎಲ್ಲಾ ಚಲನವಲನಗಳಿರುವ ಸಿಸಿ ಕ್ಯಾಮರಾ ಫುಟೇಜ್‍ಗಳನ್ನು ಸಂಗ್ರಹಿಸಿರುವ ಮಂಗಳೂರು ನಗರ ಪೊಲೀಸರು, ಆಟೋ ಚಾಲಕ ಮತ್ತು ಸಲೂನ್ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.

ವಿಮಾನ ನಿಲ್ದಾಣದಲ್ಲಿ ಇಟ್ಟ ಬ್ಯಾಗ್‍ನಲ್ಲಿ ಬಾಂಬ್ ಇರಿಸಿದ್ದ ಶಂಕಿತನ ಸಲೂನ್ ಮುಂದೆ ಇಟ್ಟಿದ್ದ ಬ್ಯಾಗ್‍ನಲ್ಲಿ ಮತ್ತೊಂದು ಬಾಂಬ್ ಇತ್ತೆ ಅಥವಾ ಬೇರೆ ಏನಾದರೂ ವಸ್ತುಗಳಿತ್ತೆ ಎಂಬುದು ದೃಢಪಡಬೇಕಾಗಿದೆ. ಸಿಸಿ ಕ್ಯಾಮರಾ ಫುಟೇಜ್‍ಗಳನ್ನು ಪರಿಶೀಲಿಸಿ ದಾಗ, ಈತ ಬೆಳಿಗ್ಗೆ 8.59ರ ಸುಮಾರಿನಲ್ಲಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದಾನೆ. ಆದರೆ ಬಾಂಬ್ ಪತ್ತೆಯಾಗಿರುವುದು 10 ಗಂಟೆಗೆ. ಅದೂ ದೃಢಪಟ್ಟು ಪೊಲೀಸರು ಕಾರ್ಯಾಚರಣೆಗಿಳಿಯುವಷ್ಟರಲ್ಲಿ 11 ಗಂಟೆಯಾಗಿತ್ತು. ಈ ಅವಧಿಯಲ್ಲಿ ಶಂಕಿತ ಮಂಗಳೂರಿನಿಂದ ಹೊರ ಹೋಗಿದ್ದಾನೆಯೇ, ಅಥವಾ ಮಂಗಳೂರಿನಲ್ಲೇ ಎಲ್ಲಾದರೂ ಆಶ್ರಯ ಪಡೆದಿದ್ದಾನೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

Translate »