ಭೂಮಿ-ವಸತಿ ಕಲ್ಪಿಸಲು ಆಗ್ರಹಿಸಿ ಭಾರೀ ಪ್ರತಿಭಟನೆ
ಮಂಡ್ಯ

ಭೂಮಿ-ವಸತಿ ಕಲ್ಪಿಸಲು ಆಗ್ರಹಿಸಿ ಭಾರೀ ಪ್ರತಿಭಟನೆ

January 17, 2019

ಮಂಡ್ಯ: ಜಿಲ್ಲೆಯಲ್ಲಿ ಹಲವು ದಶಕಗಳಿಂದ ವಾಸವಾಗಿರುವ ಹಕ್ಕಿಪಿಕ್ಕಿ ಮತ್ತು ಅಲೆಮಾರಿ ಸಮುದಾಯಕ್ಕೆ ಭೂಮಿ- ವಸತಿ ನೀಡಲು ಆಗ್ರಹಿಸಿ ಕರ್ನಾಟಕ ಜನಶಕ್ತಿ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಭಾರೀ ಪ್ರತಿಭಟನೆ ನಡೆಸಲಾಯಿತು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಪ್ರತಿಭಟನಾ ಮೆರವಣಿಗೆ ಹೊರಟ ಹಕ್ಕಿಪಿಕ್ಕಿ ಸಮುದಾಯದ ನೂರಾರು ಪ್ರತಿಭಟನಾಕಾ ರರು, ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆ ಗೊಂಡು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಿತಿಯ ಸಂಚಾಲಕ ಸಿದ್ದರಾಜು ಮಾತ ನಾಡಿ, ಕಳೆದ ಹಲವು ದಶಕಗಳಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಹಕ್ಕಿಪಿಕ್ಕಿ, ಇತರೆ ಅಲೆಮಾರಿ ಸಮುದಾಯದ ಜನರು ವಾಸ ಮಾಡುತ್ತಿದ್ದಾರೆ. ಶ್ರಮಜೀವಿಗಳಾದ ಇವರಿಗೆ ಇದುವರೆಗೂ ಮೂಲ ಸೌಲಭ್ಯ ಗಳಾಗಲೀ ಸಂವಿಧಾನ ಹಕ್ಕುಗಳಾಗಲಿ ದೊರಕದ ಕಾರಣ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಸ್ವತಂತ್ರ ಬಂದು ಇಷ್ಟು ವರ್ಷಗಳಾದರೂ ಈ ಸಮುದಾಯದ ಜನರು ಒಂದೆಡೆ ನೆಲೆ ನಿಂತು ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಬದುಕನ್ನು ಉತ್ತಮಪಡಿಸುವ ಅವಕಾಶಕ್ಕಾಗಿ ಹೋರಾ ಡುತ್ತಿದ್ದರು. ಸರ್ಕಾರ ಮತ್ತು ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಕ್ಕಿಪಿಕ್ಕಿ ಮತ್ತು ಅಲೆಮಾರಿ ಆದಿವಾಸಿ ಸಮುದಾಯಕ್ಕೆ ಸಿಗಬೇಕಾದ ನ್ಯಾಯಬದ್ಧ ಹಕ್ಕುಗಳನ್ನು ಸರ್ಕಾರ ಈ ಕೂಡಲೇ ಕೊಡಬೇಕು. ನಾಗಮಂಗಲ ತಾಲೂಕು ಶಿಕಾರಿಪುರದಲ್ಲಿ ವಾಸವಾಗಿರುವ ಹಕ್ಕಿ-ಪಿಕ್ಕಿ ಸಮುದಾಯದ ಜನರನ್ನು ಸುತ್ತಮುತ್ತಲ ಗ್ರಾಮಸ್ಥರು ಮತ್ತು ಅಧಿಕಾರಿಗಳು ಮನುಷ್ಯ ರಂತೆ ಕಾಣದೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದಾರೆ ಎಂಬ ಆರೋಪಹೊರಿಸಿ ಹಕ್ಕಿಪಿಕ್ಕಿ ಸಮುದಾಯದವರ ಮೇಲೆ ಕೇಸುಗಳನ್ನು ದಾಖಲಿಸಲಾಗಿದೆ. ಅರಣ್ಯ ಇಲಾಖೆ ಮತ್ತು ಇತರೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಜಿಲ್ಲಾಡಳಿತ ಇದರ ಬಗ್ಗೆ ಗಮನ ಹರಿಸ ಬೇಕು ಎಂದು ಒತ್ತಾಯಿಸಿದರು.

ಮಹಿಳಾ ಮುಖಂಡರಾದ ಪೂರ್ಣಿಮಾ ಮಾತನಾಡಿ, ಹಕ್ಕಿಪಿಕ್ಕಿ ಸಮುದಾಯಕ್ಕೆ ಇದುವರೆಗೂ ಯಾವುದೇ ಮೂಲ ಸೌಲಭ್ಯ ದೊರೆತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವರನ್ನು ಮನುಷ್ಯರೆಂದು ಪರಿಗಣಿಸದೆ ನಿರಂತರವಾಗಿ ಅನ್ಯಾಯ ಮಾಡಿ ಕೊಂಡು ಬರುತ್ತಿದ್ದಾರೆ. ಇನ್ನಾದರೂ ಇವರಿಗೆ ಎಲ್ಲಾ ನಾಗರಿಕ ಸೌಲಭ್ಯಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಮನವಿ ಮಾಡಿದರು.

ಶ್ರಮಿಕ ನಿವಾಸಿಗಳ ಒಕ್ಕೂಟದ ಎಸ್. ಪ್ರಕಾಶ್, ಚಂದ್ರಶೇಖರ್, ಗೋಬಿ ಪ್ರಕಾಶ್, ಈಶ್ವರಿ, ಗೌರಮ್ಮ, ಮಂಜುಳಮ್ಮ, ಹಕ್ಕಿಪಿಕ್ಕಿ ಸಮುದಾಯದ ಕುಷಾ, ರಾಮಸ್, ಕೇಸರಿ, ರಮೇಶ, ಬಿನೇಶ್, ಬಾಲಕೃಷ್ಣ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Translate »