ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಲ್ಲಿ ಬೃಹತ್ ಪ್ರತಿಭಟನಾ ಸಭೆ
ಮೈಸೂರು

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಲ್ಲಿ ಬೃಹತ್ ಪ್ರತಿಭಟನಾ ಸಭೆ

December 25, 2019

ಮೈಸೂರು, ಡಿ.24(ಪಿಎಂ)- `ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)’ ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ)’ ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆ ಗಳ ವತಿಯಿಂದ ಮೈಸೂರಿನ ಪುರಭವನದ ಆವ ರಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಸಭೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಸ್ವರಾಜ್ ಇಂಡಿಯಾ, ದಲಿತ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ, ಸಿಪಿಐ, ಸಿಪಿಐ (ಎಂ), ಎಸ್‍ಯುಸಿಐ (ಸಿ), ಎಸ್‍ಟಿ-ಎಸ್‍ಸಿ ವಕೀಲರ ಸಂಘ, ಪಿಯುಸಿ ಎಲ್, ಸಂಶೋಧನಾ ವಿದ್ಯಾರ್ಥಿಗಳ ಬಳಗ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಸೇರಿದಂತೆ ನಾನಾ ಸಂಘ ಟನೆಗಳ ಆಶ್ರಯದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಸಿಎಎ ಹಾಗೂ ಎನ್‍ಆರ್‍ಸಿ ವಿರೋಧಿಸಿದರು. ಧರ್ಮಾಧಾರಿತವಾಗಿ ಪೌರತ್ವ ನೀಡುವ ಸಿಎಎ ರದ್ದಾಗಲಿ… ಬಡವರು, ಆದಿ ವಾಸಿಗಳು, ಅಲೆಮಾರಿಗಳು, ವಲಸೆ ಕಾರ್ಮಿ ಕರು, ದಲಿತರು, ಭೂಹೀನ ರೈತರು, ಅಲ್ಪ ಸಂಖ್ಯಾತರು ಮೊದಲಾದವರಿಗೆ ಮಾರಕ ವಾಗುವ ಎನ್‍ಆರ್‍ಸಿ ಬೇಡವೇ ಬೇಡ… ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಹಿರಿಯ ಸಾಹಿತಿ ದೇವನೂರ ಮಹಾದೇವ ಮಾತ ನಾಡಿ, ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ `ಕಾ…ಕಾ…’ ಕೂಗಿಗೆ ದೇಶ ಬೆಚ್ಚಿ ಬಿದ್ದಿದೆ. ಪೌರತ್ವ ತಿದ್ದುಪಡಿ ಕಾಯ್ದೆಯೇ `ಕಾ (ಸಿಎಎ)’ ಆಗಿದ್ದು, ಕಾಗೆಯ ಕೂಗು ದೇಶಕ್ಕೆ ದುಃಖತರಿಸಿದೆ. ಭಾರತೀಯರಿಗೆ ಕಾಗೆಯ ಕೂಗು ಅಪಶಕುನ ಹಾಗೂ ಕೇಡಿನ ಸಂಕೇತ ಎಂದು ಕಿಡಿಕಾರಿದರು.

ಸಿಎಎ ಮೂಲಕ ಸಂವಿಧಾನದ ಶೀಲಕ್ಕೆ ಕೈ ಹಾಕಲಾಗಿದೆ. ಸಂವಿಧಾನದ ಶೀಲ ಎಂದರೆ ಜಾತ್ಯತೀತ ಹಾಗೂ ಧರ್ಮಾತೀತ ಮೌಲ್ಯಗಳು. ಈ ಮೌಲ್ಯ ದಿಂದಾಗಿ ಜಾಗತಿಕವಾಗಿ ಭಾರತದ ಗೌರವ ಹೆಚ್ಚಾಗಿದೆ. ಆಡಳಿತದಲ್ಲಿ ಧರ್ಮದ ಹಸ್ತಕ್ಷೇಪ ಇರಬಾರದು ಎಂಬುದು ನಮ್ಮ ಸಂವಿಧಾನದ ಆಶಯ. ಪರೋಕ್ಷ ವಾಗಿ ಸಂವಿಧಾನವನ್ನು ಮುಳುಗಿಸುವ ಹುನ್ನಾರವೇ ಸಿಎಎ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಮಿತ್ ಷಾ ಅವರು ಎನ್‍ಆರ್‍ಸಿ ದೇಶಾದ್ಯಂತ ವಿಸ್ತರಿಸಲಾಗುವುದು ಎನ್ನುತ್ತಾರೆ. ಆದರೆ ನರೇಂದ್ರ ಮೋದಿ ಇಲ್ಲ ಎನ್ನುತ್ತಾರೆ. ಇದರಿಂದ ಯಾರನ್ನು ನಂಬುವುದು ಎನ್ನುವಂತಾಗಿದೆ. ಇವರು ದೇಶದ ಜನಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ದೇಶ ದಲ್ಲಿ ಶೇ.8ರಷ್ಟು ಮಾತ್ರವೇ ಮೂಲ ನಿವಾಸಿಗಳಿದ್ದಾರೆ ಎಂದು ಈ ಹಿಂದೆಯೇ ಪ್ರಕರಣವೊಂದರ ಸಂಬಂಧ ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲನಿವಾಸಿಗಳು ಈಗಲೂ ಅರಣ್ಯದಂಚಿನಲ್ಲಿ ಜೀವನ ಕಂಡುಕೊಂಡಿದ್ದು, ಎನ್‍ಆರ್‍ಸಿ ಜಾರಿಗೊಂಡರೆ ಇವರದು ಅರಣ್ಯ ರೋಧನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಛತ್ತೀಸ್‍ಗಢ್‍ನ ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಎನ್‍ಆರ್‍ಸಿ ನಮ್ಮ ರಾಜ್ಯದಲ್ಲಿ ಜಾರಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನು ಜಾರಿ ಗೊಳಿಸಿದರೆ ರಾಜ್ಯದ ಶೇ.50ರಷ್ಟು ಜನಕ್ಕೆ ತಮ್ಮ ಪೌರತ್ವ ಸಾಬೀತು ಅಸಾಧ್ಯ. ಏಕೆಂದರೆ ಅರ್ಧಕ್ಕಾರ್ಧ ಜನರು ಭೂಹೀನರು ಎಂದಿದ್ದಾರೆ. ಎನ್‍ಆರ್‍ಸಿ ಹಾಗೂ ಸಿಎಎ ವಿರುದ್ಧ ಹೋರಾಟ ವಿದ್ಯಾರ್ಥಿ ಸಮೂಹ ದಿಂದಲೂ ನಡೆಯುತ್ತಿದ್ದು, ಯಾರು ಸಂಯಮ ಕಳೆದುಕೊಳ್ಳದೇ ಶಾಂತಿಯುತ ಹೋರಾಟ ಮಾಡಬೇಕು. ಜೊತೆಗೆ ಚಳವಳಿ ಒಳಗೆ ಸಮಾಜ ಘಾತುಕರು ನುಸುಳುವ ಅಪಾಯವೂ ಇದೆ. ಮುಸಲ್ಮಾನರ ಸೋಗಿನಲ್ಲಿ ಬಿಜೆಪಿ ಕಾರ್ಯಕರ್ತರು ರೈಲಿಗೆ ಕಲ್ಲು ತೂರಿ ಸಿಕ್ಕಿ ಬಿದ್ದಿದ್ದಾರೆ. ಹೀಗಾಗಿ ವಿದ್ಯಾರ್ಥಿ ಸಮೂಹ ಅತ್ಯಂತ ಜಾಗ್ರತೆಯಿಂದ ಚಳವಳಿ ನಡೆಸಬೇಕು. ಇದೇ ಹೋರಾಟದಲ್ಲಿ ನಿರುದ್ಯೋಗ ಸಮಸ್ಯೆ, ಆರ್ಥಿಕ ಹಿಂಜರಿತ, ಬೆಲೆ ಏರಿಕೆ ಬಗ್ಗೆಯೂ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತ ಕೃಷ್ಣಪ್ರಸಾದ್ ಮಾತನಾಡಿ, ನಮ್ಮ ಪ್ರಧಾನಿಗಳು, ಧರಿಸಿರುವ ಬಟ್ಟೆ ನೋಡಿ ಯಾವ ಧರ್ಮದವರು ಎಂದು ಗುರುತಿಸಬಹುದು ಎಂದು ಹೇಳಿದ್ದಾರೆ. ಇವರು ಸಮಾಜದ ಸಾಮರಸ್ಯ ಕೆಡಿಸಲು ಹೊರಟಿದ್ದಾರೆ. ನಮ್ಮ ಪ್ರಧಾನಿಗಳಿಗೆ ಸುಳ್ಳು ಹೇಳು ವುದು ಬೇಜಾರೇ ಆಗುವುದಿಲ್ಲ. ಎನ್‍ಆರ್‍ಸಿ ಹಾಗೂ ಸಿಎಎ ವಿರುದ್ಧ ಈಗಲೇ ತೀವ್ರ ಹೋರಾಟ ಮಾಡದಿ ದ್ದರೆ ಭವಿಷ್ಯ ಇನ್ನೂ ಕಠಿಣವಾಗಲಿದೆ. ಸಿಎಎ ಅನ್ನು ವಿರೋಧ ಪಕ್ಷಗಳು ತೀವ್ರವಾಗಿ ಏಕೆ ವಿರೋಧಿಸಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಜೊತೆಗೆ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಅಷ್ಟು ಆಸಕ್ತಿ ತೋರು ತ್ತಿಲ್ಲ ಎಂಬುದು ನೋವಿನ ಸಂಗತಿ ಎಂದರು.

ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಎಸ್.ಆರ್.ಹಿರೇಮಠ್ ಮಾತನಾಡಿ, ಸಂಶಯವೇ ಬೇಡ, ಈ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ. ಮೊನ್ನೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಎನ್‍ಆರ್‍ಸಿ ಹಾಗೂ ಸಿಎಎ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಭಾಷಣ ಮಾಡಿದ್ದಾರೆ ಎಂದು ದೂರಿದರು. ಸಿಪಿಐನ ಹೆಚ್.ಆರ್. ಶೇಷಾದ್ರಿ ಮಾತನಾಡಿ, ಲಕ್ಷಾಂತರ ಮಂದಿ ಕಾರ್ಮಿಕರು ನಿರುದ್ಯೋಗಿಗಳಾಗುತ್ತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಲೆ ಏರಿಕೆ ಯಿಂದ ಜನ ತತ್ತರಿಸಿದ್ದಾರೆ. ಇಂತಹ ಸಮಸ್ಯೆಗಳ ಕುರಿತು ತುರ್ತಾಗಿ ಗಮನ ನೀಡುವುದನ್ನು ಬಿಟ್ಟು ಸಿಎಎ ಅನ್ನು ಅವಸರವಾಗಿ ಜಾರಿಗೊಳಿಸುತ್ತಿ ದ್ದಾರೆ ಎಂದು ಟೀಕಿಸಿದರು.

ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ಬಿಜೆಪಿ ವಿರೋಧ ಪಕ್ಷಗಳೇ ಇರದಂತೆ ಮಾಡುವ ಹುನ್ನಾರ ನಡೆಸುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಪಸಂಖ್ಯಾತರ ವಿರುದ್ಧದ ಮತ್ತಷ್ಟು ಕಾನೂನುಗಳನ್ನು ಜಾರಿಗೊಳಿಸುವ ಅಪಾಯ ಮುಂದಿನ ದಿನಗಳಲ್ಲಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮಾಜಿ ಮೇಯರ್ ಪುರಷೋತ್ತಮ್, ದಸಂಸ ಮುಖಂಡ ಬೆಟ್ಟಯ್ಯ ಕೋಟೆ, ಚಿಂತಕ ಪ್ರೊ.ಮಹೇಶ್‍ಚಂದ್ರಗುರು, ವಿವಿಧ ಸಂಘಟನೆಗಳ ಮುಖಂಡರಾದ ಬಡಗಲಪುರ ನಾಗೇಂದ್ರ, ಶಬೀರ್ ಮುಸ್ತಾಫ, ಕೆ.ಎಸ್.ಶಿವರಾಮು, ಶಾಂತರಾಜು, ಕೆ.ಬಸವರಾಜು ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಡಿ.26ರಂದು ಮತ್ತೆ ಪ್ರತಿಭಟನೆ… ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನರು ಸೇರುವ ನಿರೀಕ್ಷೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಲಾಠಿ ಹಾಗೂ ರಕ್ಷಣಾ ಕವಚ ಧರಿಸಿದ ಪೊಲೀಸರನ್ನು ಸ್ಥಳಕ್ಕೆ ನಿಯೋಜಿಸಲಾ ಗಿತ್ತು. ಡಿ.26ರಂದು ಇದೇ ಸ್ಥಳದಲ್ಲಿ ಬೆಳಿಗ್ಗೆ 11ಕ್ಕೆ ಸಿಎಎ ಹಾಗೂ ಎನ್‍ಆರ್‍ಸಿ ವಿರುದ್ಧ ಮತ್ತೆ ಪ್ರತಿಭಟನೆ ನಡೆ ಸುವುದಾಗಿ ಪ್ರತಿಭಟನಾ ಸಭೆಯಲ್ಲಿ ಪ್ರಕಟಿಸಲಾಯಿತು.

Translate »