ಮಾಸ್ಟರ್ ಹಿರಣ್ಣಯ್ಯ ಚಿಂತನೆ ಆದರ್ಶಪ್ರಾಯ
ಮೈಸೂರು

ಮಾಸ್ಟರ್ ಹಿರಣ್ಣಯ್ಯ ಚಿಂತನೆ ಆದರ್ಶಪ್ರಾಯ

May 5, 2019

ಮೈಸೂರು: ರಂಗ ಭೂಮಿ ಕ್ಷೇತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ ‘ಲಂಚಾವತಾರ’ ನಾಟಕ ಒಂದು ವಿಸ್ಮಯ ಎಂದು ಹಿರಿಯ ಸಾಹಿತಿ ಪೆÇ್ರ. ಎಂ.ಕೃಷ್ಣೇಗೌಡ ಅಭಿಪ್ರಾಯಿಸಿದರು.

ಜಿಲ್ಲಾ ಕಸಾಪ ವತಿಯಿಂದ ವಿಜಯ ನಗರ ಮೊದಲ ಹಂತದಲ್ಲಿರುವ ಕಸಾಪ ಭವನದಲ್ಲಿ ಆಯೋಜಿಸಿದ್ದ ಹಿರಿಯ ರಂಗಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಂಚಾವತಾರ ನಾಟಕ 10 ಸಾವಿರಕ್ಕಿಂತ ಹೆಚ್ಚು ಪ್ರದರ್ಶನ ಕಂಡಿದೆ. ಇದರಿಂದ ಭ್ರಷ್ಟಾಚಾರ ನಿಂತಿದೆಯೇ ಎಂದು ಮಾಸ್ಟರ್ ಹಿರಣ್ಣಯ್ಯ ಅವರನ್ನು ಕೇಳಿದಾಗ ‘ಹೌದು, ಸಮಾಜದಲ್ಲಿ ಶಾಶ್ವತವಾಗಿ ನಿಂತಿದೆ. ಅದನ್ನು ಸಮಾಜದಿಂದ ಕಿತ್ತುಹಾಕಲು ಸಾಧ್ಯವಿಲ್ಲ’ ಎಂದಿದ್ದರು. ವೇದಿಕೆಯ ಮೇಲೆ ನಿಂತು ಹರಿತವಾಗಿ ಮಾತನಾಡುತ್ತಿದ್ದ ಅವರು, ಅಪಾರ ಸ್ನೇಹ ಬಳಗವನ್ನು ಹೊಂದಿದ್ದರು. ಅವರ ವಿನಯ, ಸಮಾಜಮುಖಿ ಚಿಂತನೆ ಎಲ್ಲರಿಗೂ ಆದರ್ಶವಾಗಿದೆ ಎಂದರು.

ಗಾಂಧೀವಾದಿ ಕೆ.ಟಿ.ವೀರಪ್ಪ ಮಾತನಾಡಿ, ಮಾಸ್ಟರ್ ಹಿರಣ್ಣಯ್ಯ ಅವರ ಆದರ್ಶಗಳನ್ನು ಪ್ರತಿಕ್ಷಣವೂ ನೆನೆಯಬೇಕಾಗುತ್ತದೆ. ರಂಗದ ಮೇಲೆ ನಿಂತು ನೇರವಾಗಿ ರಾಜಕಾರಣಿಗಳ ವಿರುದ್ಧ ಮಾತನಾಡುತ್ತಿದ್ದರು. ಅವರ ಆ ಮಾತಿನಲ್ಲಿದ್ದ ಸಮಾಜಮುಖಿ ಕಾಳಜಿ ಯಿಂದಾಗಿ ಯಾರೂ ಅವರ ವಿರುದ್ಧ ಮಾತನಾಡುತ್ತಿರಲಿಲ್ಲ ಎಂದರು.

ರಂಗಭೂಮಿಯ ಭೀಷ್ಮರಂತೆ ಕೆಲಸ ಮಾಡಿದ್ದಾರೆ. ನಿಜಲಿಂಗಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ ಅವರ ಎದುರಿಗೆ ನಿಂತು ಅವರನ್ನೇ ಕುರಿತು ಮಾತನಾಡುತ್ತಿದ್ದರು. ನಿಜಲಿಂಗಪ್ಪ ಅವರು ಕೋಪಗೊಳ್ಳದೇ ನಗು ನಗುತ್ತಲೆ ನಾಟಕ ನೋಡುತ್ತಿದ್ದರು ಎಂದು ಸ್ಮರಿಸಿದರು. ಹಿರಣ್ಣಯ್ಯ ಅವರಲ್ಲಿ ಇಡೀ ಪ್ರಪಂಚವನ್ನು ಸುತ್ತುವ ಕಲೆ ಇತ್ತು. ಸಮಾಜ ತಿದ್ದುವ ಕಾರ್ಯದಲ್ಲಿ ಅವರು ಎಂದೂ ಎಡವಿಲ್ಲ. ತೀಕ್ಷ್ಣ ಮಾತಿನ ಮೂಲ ಕವೇ ಜನರನ್ನು, ರಾಜಕಾರಣಿಗಳನ್ನು ಜಾಗೃತ ಗೊಳಿಸುತ್ತಿದ್ದರು. ಅವರ ಬದುಕು ನಮ್ಮೆಲ್ಲ ರಿಗೂ ಆದರ್ಶವಾಗಿ ನಿಲ್ಲುತ್ತದೆ ಎಂದರು.

ಸಾಹಿತಿ ಡಾ.ಸಿ.ವಿ. ಶ್ರೀಧರಮೂರ್ತಿ ಮಾತನಾಡಿ, ಹಿರಣ್ಣಯ್ಯ ಕನ್ನಡ ನಾಡಿನ ನಾಲಗೆಯಾಗಿದ್ದರು. ಸಾಹಿತ್ಯದಲ್ಲಿ ಮಹಾ ಕವಿ ಕುವೆಂಪು, ನಟನೆಯಲ್ಲಿ ಡಾ.ರಾಜ್ ಕುಮಾರ್ ಅವರಂತೆ ರಂಗಭೂಮಿಯಲ್ಲಿ ಮಾಸ್ಟರ್ ಹಿರಣ್ಣಯ್ಯ ಪೂರ್ಣಚಂದ್ರರಾಗಿ ಮೆರೆದಿದ್ದಾರೆ. ಹಿರಣ್ಣಯ್ಯ ಬಗ್ಗೆ ಮಾತನಾ ಡಲು ರಂಗಭೂಮಿಯ ಇತಿಹಾಸವನ್ನೇ ತಿರುವಿ ಹಾಕಬೇಕಾಗುತ್ತದೆ. ಆಚಾರವಂತ, ವಿಚಾರವಂತ, ಗುಣವಂತ, ವಿನಯವಂತ ರಾಗಿದ್ದ ಹಿರಣ್ಣಯ್ಯ ನಾಟಕಕ್ಕೆ ಗಟ್ಟಿತನ ತಂದುಕೊಟ್ಟವರು ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ರಾಜಶೇಖರ ಕದಂಬ, ಮೂಗೂರು ನಂಜುಂಡಸ್ವಾಮಿ, ಎಂ.ಚಂದ್ರಶೇಖರ್, ಡಾ.ಜಯಪ್ಪ ಹೊನ್ನಾಳಿ, ಕೆ. ರಘುರಾಂ ವಾಜಪೇಯಿ, ಡಾ.ತಿಮ್ಮೇ ಗೌಡ, ನಾಗರಾಜ್ ಉಪಸ್ಥಿತರಿದ್ದರು.

Translate »