ಸದ್ಯದಲ್ಲೇ ಮೇಯರ್, ಉಪ ಮೇಯರ್ ಚುನಾವಣಾ ದಿನಾಂಕ ಪ್ರಕಟ
ಮೈಸೂರು

ಸದ್ಯದಲ್ಲೇ ಮೇಯರ್, ಉಪ ಮೇಯರ್ ಚುನಾವಣಾ ದಿನಾಂಕ ಪ್ರಕಟ

December 11, 2019

ಮೈಸೂರು, ಡಿ.10(ಆರ್‍ಕೆಬಿ)- ಹಾಲಿ ಮೇಯರ್, ಉಪ ಮೇಯರ್ ಒಂದು ವರ್ಷದ ಅವದಿ ನ.16ಕ್ಕೇ ಮುಗಿದಿದ್ದರೂ ವಿಧಾನಸಭಾ ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೈಸೂರು ಮಹಾನಗರಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಮುಂದೂಡಿಕೆ ಯಾಗಿತ್ತು. ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫೀ ಆಹಮದ್ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ಸಿಕ್ಕಿದ್ದು, ಈಗ ಉಪ ಚುನಾವಣೆ ಮುಗಿದಿದೆ. ಸದ್ಯದಲ್ಲೇ ಮೇಯರ್, ಉಪ ಮೇಯರ್ ಆಯ್ಕೆಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.

ಈಗ ಉಪ ಚುನಾವಣೆಗಳು ಮುಗಿದು ಫಲಿತಾಂಶವೂ ಹೊರ ಬಿದ್ದಿದ್ದು, ಇನ್ನು ಕೆಲವೇ ದಿನಗಳಲ್ಲಿ ನೂತನ ಮೇಯರ್, ಉಪ ಮೇಯರ್ ಆಯ್ಕೆಗೆ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಜೊತೆಗೆ ಯಾವ ವರ್ಗಕ್ಕೆ ಮೇಯರ್, ಉಪಮೇಯರ್ ಸ್ಥಾನ ಎಂಬುದು ಘೋಷಣೆಯಾಗಲಿದೆ.

65 ವಾರ್ಡ್‍ಗಳ ಮೈಸೂರು ಮಹಾನಗರಪಾಲಿಕೆಯಲ್ಲಿ ಬಿಜೆಪಿ -22, ಕಾಂಗ್ರೆಸ್-19, ಜೆಡಿಎಸ್- 18, ಬಿಎಸ್‍ಪಿ-1 ಮತ್ತು ಪಕ್ಷೇತರರು- 5 ಸದಸ್ಯರಿದ್ದಾರೆ. ಕಳೆದ ನವೆಂಬರ್ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮೇಯರ್ ಸ್ಥಾನ ಕಾಂಗ್ರೆಸ್‍ನ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಸ್ಥಾನ ಜೆಡಿಎಸ್‍ನ ಶಫೀ ಅಹಮದ್ ಅವರಿಗೆ ಲಭಿಸಿತ್ತು. ಅವರ ಒಂದು ವರ್ಷದ ಅವಧಿ ನ.16ರಂದೇ ಮುಕ್ತಾಯಗೊಂಡಿದೆ.

Translate »