ಗ್ರಂಥಾಲಯ ಕರ ಪಾವತಿಸದ ಸ್ಥಳೀಯ ಸಂಸ್ಥೆಗಳ  ಪಟ್ಟಿಯಲ್ಲಿ ಮೈಸೂರು ಪಾಲಿಕೆಗೆ ಮೊದಲ ಸ್ಥಾನ
ಮೈಸೂರು

ಗ್ರಂಥಾಲಯ ಕರ ಪಾವತಿಸದ ಸ್ಥಳೀಯ ಸಂಸ್ಥೆಗಳ ಪಟ್ಟಿಯಲ್ಲಿ ಮೈಸೂರು ಪಾಲಿಕೆಗೆ ಮೊದಲ ಸ್ಥಾನ

December 4, 2018

ಮೈಸೂರು: ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಕಾಯ್ದೆ 1984ರ ಪ್ರಕಾರ ಎಲ್ಲಾ ಸ್ಥಳೀಯ ಸಂಸ್ಥೆಗಳು ಶೇ.6ರಷ್ಟು ಗ್ರಂಥಾಲಯ ಕರ ವನ್ನು ವಸೂಲಿ ಮಾಡುತ್ತವೆ. ಆ ಹಣದಲ್ಲಿಯೇ ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳ ಎಲ್ಲಾ ಅಗತ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಆದರೆ ಸ್ಥಳೀಯ ಸಂಸ್ಥೆಗಳು ವಸೂಲಿ ಮಾಡಿರುವ ಗ್ರಂಥಾಲಯ ಕರವನ್ನು ಇಲಾ ಖೆಗೆ ಪಾವತಿಸದಿದ್ದರೆ ಸಾರ್ವಜನಿಕ ಗ್ರಂಥಾಲಯ ಗಳ ಅಭಿವೃದ್ಧಿ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ.

ಗ್ರಂಥಾಲಯಗಳ ಶ್ರೇಯೋಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರಿಂದ ಸಂಗ್ರಹಿಸುವ ಶೇ.6ರಷ್ಟು ತೆರಿಗೆ ಯನ್ನು ಶಾಸನಬದ್ಧವಾಗಿ ಗ್ರಂಥಾಲಯಗಳ ಅಭಿ ವೃದ್ಧಿಗೆ ವಿನಿಯೋಗಿಸಬೇಕಿದೆ. ಆದರೆ ಗ್ರಂಥಾಲಯ ಕರವನ್ನು ಸಂಗ್ರಹಿಸುವ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಉದಾಸೀನ ಧೋರಣೆಯಿಂದ ಕಾಲ ಕಾಲಕ್ಕೆ ಪಾವತಿಯಾಗುತ್ತಿಲ್ಲ ಎಂಬ ದೂರುಗಳು ಹಿಂದಿನಿಂದಲೂ ಇದ್ದೇ ಇದೆ.

ಮೈಸೂರು ಮಹಾನಗರಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾ ಯಿತಿಗಳು ಸಂಗ್ರಹಿಸುವ ಗ್ರಂಥಾಲಯ ಕರವನ್ನು ಪಾವತಿಸುತ್ತಿಲ್ಲ. ಇದರಿಂದ ಸಾರ್ವಜನಿಕ ಗ್ರಂಥಾ ಲಯಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

ಗ್ರಂಥಾಲಯ ತೆರಿಗೆ ಬಾಕಿ ಉಳಿಸಿಕೊಂಡಿರುವ ಮೈಸೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪಟ್ಟಿಯಲ್ಲಿ ಮೈಸೂರು ನಗರಪಾಲಿಕೆ ಮೊದಲ ಸ್ಥಾನದಲ್ಲಿದೆ. 7-8 ವರ್ಷಗಳಿಂದ ಒಟ್ಟಾರೆ 17 ಕೋಟಿ ರೂ. ಉಳಿಸಿ ಕೊಂಡಿರುವ ಮೈಸೂರು ಪಾಲಿಕೆಗೆ ಈ ಕುರಿತು ಅನೇಕ ಬಾರಿ ಪತ್ರ ಬರೆದಿದ್ದರೂ ಅದಕ್ಕೆ ಅಧಿಕಾರಿ ಗಳು ಕಿಂಚಿತ್ತೂ ಮನ್ನಣೆ ನೀಡುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮೈಸೂರು ಜಿಲ್ಲಾ ಉಪ ನಿರ್ದೇಶಕ ಬಿ.ಮಂಜುನಾಥ್.

ಸುಮಾರು ವರ್ಷಗಳಿಂದ ಬಾಕಿ ಉಳಿದಿದ್ದು, ಕೇಳಿದಾಗ 50-60 ಸಾವಿರವನ್ನು ನೀಡಿ ಸುಮ್ಮನಾಗುವ ಮೈಸೂರು ನಗರಪಾಲಿಕೆ ಅಧಿಕಾರಿಗಳು, ಉಳಿದ ಬಾಕಿ ಪಾವತಿಸುವ ವಿಚಾರದಲ್ಲಿ ಮೌನ ವಹಿಸಿದೆ ಎನ್ನುವ ಗ್ರಂಥಾಲಯ ಅಧಿಕಾರಿಗಳು, ಈ ಹಣದಿಂ ದಲೇ ನಾವು ಗ್ರಂಥಾಲಯಗಳ ಮೂಲ ಸೌಲಭ್ಯ, ಕಟ್ಟಡ ಬಾಡಿಗೆ, ವಿದ್ಯುತ್, ದೂರವಾಣಿ, ನೀರು, ಪುಸ್ತಕ ಮತ್ತು ವಾರ್ತಾ ಪತ್ರಿಕೆಗಳ ಖರೀದಿ, ಕಟ್ಟಡ ನಿರ್ಮಾಣ, ಗ್ರಂಥಾಲಂiÀದ ಇತರೆ ಖರ್ಚು ವೆಚ್ಚಗಳನ್ನು ನಿರ್ವಹಿಸುತ್ತೇವೆ. ಇವೆಲ್ಲದರ ಬಗ್ಗೆ ಅರಿವಿದ್ದರೂ ಪಾಲಿಕೆ ಅಧಿಕಾರಿಗಳು ಬಾಕಿ ಹಣ ನೀಡಲು ಮುಂದೆ ಬರುತ್ತಿಲ್ಲ. ಈ ಬಗ್ಗೆ ರಾಜ್ಯ ಗ್ರಂಥಾಲಯ ಇಲಾಖೆ ಹಿರಿಯ ಅಧಿಕಾರಿಗಳಿಂದ ಹಾಗೂ ಮುಖ್ಯ ಕಾರ್ಯದರ್ಶಿ ಅವರಿಂದಲೂ ಆದೇಶವಾಗಿದ್ದರೂ, ಬಾಕಿ ಉಳಿಸಿ ಕೊಂಡಿರುವ ಹಣವನ್ನು ಪಾವತಿಸಲು ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಗ್ರಂಥಾಲಯ ಇಲಾಖೆ ಅಧಿಕಾರಿಗಳ ದೂರು.

ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಂದಲೂ ಬಾಕಿ: ಮೈಸೂರು ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳಿಂದ 60 ಲಕ್ಷ ರೂ. ಗ್ರಂಥಾ ಲಯ ಕರ ಬಾಕಿ ಇದೆ. ಜಿಲ್ಲೆಯ 268 ಗ್ರಾಮ ಪಂಚಾ ಯಿತಿಗಳಿಂದ ಒಟ್ಟಾರೆ 7 ಕೋಟಿ ಬಾಕಿ ಬರಬೇಕಿದೆ. ಈ ಪೈಕಿ ನಂಜನಗೂಡು 10 ಲಕ್ಷ ರೂ., ಹುಣಸೂರು 29 ಲಕ್ಷ ರೂ. ಈ ಸಂಬಂಧ ಮೈಸೂರು ಜಿಲ್ಲಾ ಗ್ರಂಥಾ ಲಯ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗಳ ಗಮನ ಸೆಳೆಯಲಾಗಿದೆ. ಅಲ್ಲದೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ ಲಕ್ಷಾಂತರ ರೂ. ಗ್ರಂಥಾಲಯ ಕರ ಬಾಕಿ ಬರಬೇಕಿದ್ದು, ಎಷ್ಟೆಂಬ ಬಗ್ಗೆ ನಿಖರವಾಗಿ ತಿಳಿದಿಲ್ಲ. ಈ ಬಗ್ಗೆ ಡಿಸಿಬಿ (ಡಿಮ್ಯಾಂಡ್ ಕಲೆಕ್ಷನ್ ಅಂಡ್ ಬ್ಯಾಲೆನ್ಸ್)ನ ಮಾಹಿತಿಯನ್ನು ಅವರು ಸಲ್ಲಿಸಿಲ್ಲ ಎಂದು ಉಪ ನಿರ್ದೇಶಕರು ದೂರಿದರು.

ರಾಜಕುಮಾರ್ ಭಾವಸಾರ್

Translate »