ತೆರವಿಗೆ ವರ್ತಕರ ವಿರೋಧ: ಚಾಮುಂಡಿಬೆಟ್ಟದಲ್ಲಿ ಅಂಗಡಿ ಬಂದ್ ಮಾಡಿದ ವರ್ತಕರು
ಮೈಸೂರು

ತೆರವಿಗೆ ವರ್ತಕರ ವಿರೋಧ: ಚಾಮುಂಡಿಬೆಟ್ಟದಲ್ಲಿ ಅಂಗಡಿ ಬಂದ್ ಮಾಡಿದ ವರ್ತಕರು

September 7, 2019

ಮೈಸೂರು, ಸೆ. 6(ಆರ್‍ಕೆ)- ತೆರವುಗೊಳಿಸಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿರುವ ಚಾಮುಂಡಿಬೆಟ್ಟದ ಅನಧಿಕೃತ ಫುಟ್‍ಪಾತ್ ವ್ಯಾಪಾರಿ ಗಳು, ಇಂದು ಅಂಗಡಿಗಳನ್ನು ಬಂದ್ ಮಾಡಿ ಸಾಂಕೇತಿಕ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಪರಿಶೀಲನೆಗೆಂದು ಚಾಮುಂಡಿಬೆಟ್ಟಕ್ಕೆ ತೆರಳಿದ್ದಾಗ ದಸರಾ ಆರಂಭವಾಗುವುದರೊಳಗಾಗಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು, ಪರವಾನಗಿ ಪಡೆದಿರುವ ಅಂಗಡಿಗಳನ್ನು ಹೊಸದಾಗಿ ನಿರ್ಮಿಸಿರುವ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದ ಮಳಿಗೆಗಳಿಗೆ ಸ್ಥಳಾಂತರಿಸಬೇಕೆಂದು ಮೈಸೂರು ತಹಶೀಲ್ದಾರ್ ಟಿ. ರಮೇಶ್‍ಬಾಬು, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್ ಅವರಿಗೆ ಸೂಚನೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಅಧಿಕಾರಿಗಳು ಬೆಟ್ಟದ ಸರ್ಕಾರಿ ಜಾಗ ವೊಂದನ್ನು ಗುರ್ತಿಸಿದ್ದು, ಅಲ್ಲಿಗೆ ಅನಧಿಕೃತ ಅಂಗಡಿಗಳನ್ನು ಸ್ಥಳಾಂತರಿಸಲು ಮುಂದಾಗಿ ದ್ದಾರೆ. ಆ ವಿಷಯ ತಿಳಿಯುತ್ತಿದ್ದಂತೆಯೇ ಅಸಮಾಧಾನಗೊಂಡ 190ಕ್ಕೂ ಹೆಚ್ಚು ವ್ಯಾಪಾರಸ್ಥರು ಇಂದು ಅಂಗಡಿಗಳನ್ನು ಬಂದ್ ಮಾಡಿ, ಇದರಿಂದ ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಅಂಗಡಿ ಇಲ್ಲದಿದ್ದರೆ ತೊಂದರೆಯಾಗುತ್ತದೆ ಎಂಬುದನ್ನು ತೋರಿಸಲು ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಅಂಗಡಿ ತೆರವುಗೊಳಿಸುವ ಸಂಬಂಧ ನಾಳೆ (ಸೆ.7) ಸಂಜೆ 4 ಗಂಟೆಗೆ ಚಾಮುಂಡಿಬೆಟ್ಟದ ದಾಸೋಹ ಭವನದಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ಕರೆದಿರುವುದರಿಂದ ಇಂದಿನ ಸಾಂಕೇತಿಕ ಬಂದ್ ಮಹತ್ವ ಪಡೆದುಕೊಂಡಿದೆ.

Translate »