ಮೈಸೂರಿನ ಎಂ.ಜಿ.ರಸ್ತೆ ಅಭಿವೃದ್ಧಿ ಕಾಮಗಾರಿ – 1.40 ಕೋಟಿ ರೂ. ಅವ್ಯವಹಾರ : ಸತ್ಯ ಶೋಧನಾ ಸಮಿತಿಯಿಂದ ತನಿಖೆ ಆರಂಭ
ಮೈಸೂರು

ಮೈಸೂರಿನ ಎಂ.ಜಿ.ರಸ್ತೆ ಅಭಿವೃದ್ಧಿ ಕಾಮಗಾರಿ – 1.40 ಕೋಟಿ ರೂ. ಅವ್ಯವಹಾರ : ಸತ್ಯ ಶೋಧನಾ ಸಮಿತಿಯಿಂದ ತನಿಖೆ ಆರಂಭ

February 12, 2019

ಮೈಸೂರು: ಮೈಸೂರಿನ ಎಂ.ಜಿ.ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ 1.40 ಕೋಟಿ ರೂ. ಅವ್ಯವಹಾರ ಪ್ರಕರಣ ಸಂಬಂಧ ಪಾಲಿ ಕೆಯ ಸತ್ಯಶೋಧನಾ ಸಮಿತಿ ಸದಸ್ಯರು ತನಿಖೆ ಆರಂಭಿಸಿದ್ದಾರೆ.

ಸಯ್ಯಾಜಿರಾವ್ ರಸ್ತೆಯ ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಇಂದು ಸಭೆ ನಡೆಸಿದ ಸಮಿತಿ ಅಧ್ಯಕ್ಷರಾದ ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ ಸದಸ್ಯರು, ದೂರುದಾರರಾದ ಕಾರ್ಪೊರೇಟರ್ ಬಿ.ವಿ. ಮಂಜುನಾಥ್ ಅವರಿಂದ ಆರೋಪಗಳ ಬಗ್ಗೆ ವಿವರಣೆ ಪಡೆದು ದಾಖಲಿಸಿಕೊಂಡರು.

ಈ ಕುರಿತು ಸಭೆಗೆ ಸಮಗ್ರ ಮಾಹಿತಿ ನೀಡಿದ ಮಂಜುನಾಥ್, ಬೇರೆ ಬೇರೆ ಅನುದಾನದಲ್ಲಿ ಕೋರ್ಟ್ ಮುಂಭಾಗ ದಿಂದ ಎಂಆರ್‍ಸಿ ಸರ್ಕಲ್‍ನ ರಾಷ್ಟ್ರೀಯ ಹೆದ್ದಾರಿ 212 ಕೂಡುವ ಸ್ಥಳದವರೆಗೆ ನಡೆಸಿದ್ದ ಕಾಮಗಾರಿಗೆ ಎರಡು ಹಂತ ದಲ್ಲಿ ಬಿಲ್ ಸಲ್ಲಿಸಿ ಹಿರಿಯ ಅಧಿಕಾರಿಗಳು ಅನುಮೋದಿಸಿ ಸಹಿ ಮಾಡಿದ ನಂತರ ಗುತ್ತಿಗೆದಾರನಿಗೆ 1,40,68,859 ರೂ. ಹಣ ವನ್ನು ಚೆಕ್ ಮೂಲಕ ಪಾವತಿಸಿರುವುದಕ್ಕೆ ಮೂಲ ಕಡತದಲ್ಲಿ ದಾಖಲೆಗಳಿವೆ ಎಂದರು.

ಅದೇ ಎಂ.ಜಿ. ರಸ್ತೆ ಕಾಮಗಾರಿಗೆ ಅಸ್ಪಾಲ್ಟಿಂಗ್, ಸರ್ಕಲ್‍ಗಳ ಅಭಿವೃದ್ಧಿ, ಬೀದಿ ದೀಪ, ರಿಫ್ಲೆಕ್ಟಿಂಗ್ ಲೈಟ್‍ಗಳನ್ನು ಅಳವಡಿಸಲಾಗಿದೆ ಎಂದು 4 ತಿಂಗಳ ನಂತರ ಮತ್ತೆ ಬಿಲ್ ಸಲ್ಲಿಸಿ ಎರಡನೇ ಭಾರಿಯೂ 1.40 ಕೋಟಿ ರೂ.ಗಳನ್ನು ಪಡೆಯಲಾಗಿದೆ ಎಂದು ಮಂಜುನಾಥ ಅವರು ಇಂದು ಸಭೆ ಮುಂದೆ ಹಾಜರಾಗಿ ದಾಖಲೆಗಳ ಮೂಲಕ ವಿವರಣೆ ನೀಡಿದರು.

ಈ ಕಾಮಗಾರಿಯಲ್ಲಿ ಭಾರೀ ಹಗರಣ ನಡೆದಿದ್ದು, ಪಾಲಿಕೆ ವಲಯ ಕಚೇರಿ-1ರ ವಲಯ ಆಯುಕ್ತ ಸುನೀಲ್ ಬಾಬು, ಕಿರಿಯ ಇಂಜಿನಿಯರ್ ಎಂ.ಎನ್. ಮೋಹನ್ ಕುಮಾರಿ ಹಾಗೂ ಗುತ್ತಿಗೆ ದಾರ ಕರೀಗೌಡ ಅವರು ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿ ಸಿಕೊಂಡು ವಂಚಿಸಿರುವುದರಿಂದ ಕೂಲಂಕುಷವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊ ಳ್ಳುವ ಜತೆಗೆ ನಷ್ಟವನ್ನು ಅವರಿಂದ ವಸೂಲಿ ಮಾಡಬೇಕೆಂದೂ ಬಿ.ವಿ. ಮಂಜುನಾಥ್ ಆಗ್ರಹಿಸಿದರು.

ನಂತರ ಅವರ ಹೇಳಿಕೆಯನ್ವಯ ಮೂಲ ಕಡತದಲ್ಲಿನ ದಾಖಲೆ ಪತ್ರ ಗಳನ್ನು ಪರಿಶೀಲಿಸಿದ ಸಮಿತಿ ಸದಸ್ಯರಿಗೆ ಮೇಲ್ನೋಟಕ್ಕೆ ಹಣದ ಅವ್ಯವಹಾರ ನಡೆದಿರುವುದು ಕಂಡು ಬಂದಿರುವುದ ರಿಂದ ನಾಳೆ (ಫೆ. 12) ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸಿದ ನಂತರ ಎಂ.ಜಿ. ರಸ್ತೆಗೆ ತೆರಳಿ ಖುದ್ದಾಗಿ ಕಾಮಗಾರಿಯನ್ನು ಪರಿ ಶೀಲಿಸಿ, ವಸ್ತುಸ್ಥಿತಿ ಅಧ್ಯಯನ ಮಾಡಿ ಪಾಲಿಕೆ ಕೌನ್ಸಿಲ್ ಸಭೆಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.

ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈ ಗೊಂಡು ನಂತರ ವರದಿಯನ್ನು ಶಿಫಾ ರಸ್ಸಿನೊಂದಿಗೆ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ ಎಂದರು.

ಸಭೆಯಲ್ಲಿ ಸತ್ಯ ಶೋಧನಾ ಸಮಿತಿ ಸದಸ್ಯ ಕಾರ್ಯದರ್ಶಿಯಾದ ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ಆರ್. ರಂಗ ಸ್ವಾಮಿ, ಸದಸ್ಯರಾದ ಉಪಮೇಯರ್ ಶಫಿ ಅಹಮದ್, ಕೆ.ವಿ.ಪ್ರಕಾಶ್, ಲಕ್ಷ್ಮಿ, ಹೆಚ್.ಎಂ. ಶಾಂತಕುಮಾರಿ, ಆಯೂಬ್ ಖಾನ್, ಪ್ರೇಮ, ಶಿವಕುಮಾರ್, ಮಾ.ವಿ. ರಾಮಪ್ರಸಾದ್ ಅವರು ಹಾಜರಿದ್ದರು.ನಾಳೆ (ಫೆ.12) ಹಗರಣ ಆರೋಪ ಹೊತ್ತಿ ರುವವರನ್ನೂ ಕರೆದು ಸಮಿತಿ ಸದಸ್ಯರು ವಿಚಾರಣೆ ನಡೆಸುವರೆಂದು ತಿಳಿದುಬಂದಿದೆ.

Translate »