ಲಕ್ಷಾಂತರ ರೂ. ವಂಚನೆ:  ವ್ಯಕ್ತಿ ವಿರುದ್ಧ ಪ್ರಕರಣ ದಾಖಲು
ಮೈಸೂರು

ಲಕ್ಷಾಂತರ ರೂ. ವಂಚನೆ: ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

February 26, 2019

ಮೈಸೂರು: ಪಾಲುದಾರಿಕೆಯಲ್ಲಿ ನಿವೇಶನ ಖರೀದಿಸಿ, ನಂತರ ಅದನ್ನು ಹೆಚ್ಚು ಮೌಲ್ಯಕ್ಕೆ ಮಾರಾಟ ಮಾಡಿ, ಹಣ ಹಂಚಿಕೊಳ್ಳೋಣವೆಂದು ನಂಬಿಸಿ ಸುಮಾರು 21 ಲಕ್ಷ ರೂ. ಹಣ ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೈಸೂರಿನ ಬೋಗಾದಿ ನಿವಾಸಿ ಎಸ್.ನಾಗರಾಜು ಅವರು, ಬಿ.ಆರ್.ಆನಂದ್ ಕುಮಾರ್ ವಿರುದ್ಧ ದೂರು ನೀಡಿದ್ದಾರೆ. ದುಬೈನಲ್ಲಿ ನೆಲೆಸಿರುವ ತಮ್ಮ ಪುತ್ರ ಎಸ್.ಎನ್.ಸುಹಾಸ್, ಈ ಹಿಂದೆ ಆನಂದ್‍ಕುಮಾರ್ ಅವರ ವಿದ್ಯಾರ್ಥಿ. ಪಾಲುದಾರಿಕೆ ಯಲ್ಲಿ ನಿವೇಶನ ಖರೀದಿಸಲೆಂದು 4 ವರ್ಷದ ಹಿಂದೆ ತಮ್ಮ ಪುತ್ರನಿಂದ ಹಣ ಪಡೆದು ವಂಚಿಸಿದ್ದಾರೆಂದು ಆರೋಪಿಸಿದ್ದಾರೆ. ವಿಜಯನಗರ 4ನೇ ಹಂತದಲ್ಲಿ ಸುಮಾರು 70 ಲಕ್ಷ ರೂ. ಮೌಲ್ಯದ ನಿವೇಶನವಿದೆ. ಅದರ ಮಾಲೀಕರಿಗೆ ತುರ್ತು ಹಣದ ಅವಶ್ಯಕತೆ ಇರುವುದರಿಂದ ಕೇವಲ 40 ಲಕ್ಷ ರೂ.ಗೆ ಮಾರಾಟ ಮಾಡುತ್ತಿ ದ್ದಾರೆ. ನಾವಿಬ್ಬರೂ ಪಾಲುದಾರಿಕೆಯಲ್ಲಿ ಖರೀದಿಸಿ, ನಂತರ 70 ಲಕ್ಷ ರೂ.ಗೆ ಮಾರಾಟ ಮಾಡಿ, ಹಣ ಹಂಚಿಕೊಳ್ಳಬಹುದು. ಇಬ್ಬರಿಗೂ ತಲಾ 15 ಲಕ್ಷ ರೂ. ಲಾಭ ಸಿಗುತ್ತದೆ ಎಂದು ನಂಬಿಸಿದ್ದ ಆನಂದ್‍ಕುಮಾರ್ ಖಾತೆಗೆ ನನ್ನ ಪುತ್ರ ಸುಹಾಸ್ 21 ಲಕ್ಷ ರೂ. ಹಣವನ್ನು ವರ್ಗಾಯಿಸಿದ್ದ. ಹಣ ಪಡೆದು 2 ವರ್ಷಗಳಾದರೂ ಯಾವುದೇ ಪ್ರಕ್ರಿಯೆ ನಡೆಯದ ಹಿನ್ನೆಲೆಯಲ್ಲಿ ಸುಹಾಸ್‍ನಿಂದ ನಾನು ಜಿಪಿಎ ಪಡೆದು, ಹಣ ನೀಡುವಂತೆ ಆನಂದ್‍ಕುಮಾರ್‍ನನ್ನು ಒತ್ತಾಯಿಸಿದೆ. 5 ತಿಂಗಳ ಹಿಂದೆ ನೋಟರಿ ಸಮಕ್ಷಮದಲ್ಲಿ ಸುಹಾಸ್‍ನಿಂದ ಪಡೆದಿದ್ದ 21 ಲಕ್ಷ ರೂ. ಹಾಗೂ ಲಾಭಾಂಶದ 15 ಲಕ್ಷ ರೂ. ಸೇರಿದಂತೆ ಒಟ್ಟು 36 ಲಕ್ಷ ರೂ. ಹಣ ನೀಡಲು ಒಪ್ಪಿ, 3 ಚೆಕ್‍ಗಳನ್ನು ನೀಡಿದ್ದರು. ಆದರೆ ಎಲ್ಲಾ ಚೆಕ್‍ಗಳು ಬೌನ್ಸ್ ಆಗಿದ್ದು, ವಂಚಿಸಿರುವ ಆನಂದ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾಗರಾಜು ದೂರಿನಲ್ಲಿ ತಿಳಿಸಿದ್ದಾರೆ.

Translate »