ಆಹಾರ ನಂತರ ಅರಣ್ಯ ಆಯ್ತು ಈಗ ಮತ್ತಾವುದೋ…!
ಮೈಸೂರು

ಆಹಾರ ನಂತರ ಅರಣ್ಯ ಆಯ್ತು ಈಗ ಮತ್ತಾವುದೋ…!

February 15, 2020

ಬೆಂಗಳೂರು, ಫೆ. 14(ಕೆಎಂಶಿ)- ಆಹಾರ ಮತ್ತು ನಾಗರಿಕ ಪೂರೈಕೆ ಆಯಿತು, ಈಗ ಅರಣ್ಯ ಖಾತೆ, ಮುಂದೆ ಯಾವ ಖಾತೆ ಎಂಬ ಪೇಚಿಗೆ ಸಚಿವ ಆನಂದ್ ಸಿಂಗ್ ಸಿಲುಕಿದ್ದು, ಸದ್ಯದಲ್ಲೇ ಅವರ ಖಾತೆ ಮತ್ತೆ ಬದಲಾಗ ಲಿದೆ. ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣಗಳನ್ನು ಎದುರಿಸುತ್ತಿರುವ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿರುವುದನ್ನೇ ದಾಳ ಮಾಡಿಕೊಂಡು ಕಾಂಗ್ರೆಸ್ ಈಗಾಗಲೇ ರಾಜಕೀಯ ದಾಳಿ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಬೇರೊಂದು ಖಾತೆ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರ ಚಿಂತನೆ ನಡೆಸಿದ್ದಾರೆ.

ಆನಂದ್ ಸಿಂಗ್ ಸಹ ವಿಪಕ್ಷಗಳ ದಾಳಿಯಿಂದ ಪಾರಾಗಲು ಮತ್ತೆ ಖಾತೆ ಬದಲಾಯಿಸುವಂತೆ ಮುಖ್ಯಮಂತ್ರಿ ಅವರಿಗೆ ದುಂಬಾಲು ಬಿದ್ದಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿನ ಮುಖ್ಯಮಂತ್ರಿ ನಿವಾಸ ಧವಳಗಿರಿಗೆ ದೌಡಾಯಿಸಿದ ಆನಂದ್ ಸಿಂಗ್ ಈ ಸಂಬಂಧ ಮಾತುಕತೆ ನಡೆಸಿದರು. ತಮ್ಮ ಮೇಲಿನ ಪ್ರಕರಣಗಳಲ್ಲಿ ನ್ಯಾಯಾ ಲಯ ತಡೆಯಾಜ್ಞೆ ನೀಡಿದೆ, ಕಾಂಗ್ರೆಸ್‍ನಲ್ಲಿದ್ದಾಗ ದಾಖಲಾಗಿದ್ದ ಪ್ರಕರಣಗಳು ಮುಂದುವರೆದಿವೆ. ನ್ಯಾಯಾಲಯ ತೀರ್ಪು ಏನು ಬರುವುದೋ ಗೊತ್ತಿಲ್ಲ, ಸದ್ಯ ಖಾತೆ ಬದಲಾವಣೆ ವಿಚಾರ ನಿಮಗೆ ಬಿಟ್ಟಿದ್ದು, ಬಳ್ಳಾರಿ ಜಿಲ್ಲಾ ಉಸ್ತು ವಾರಿ ನೀಡಿ ಎಂಬ ಬೇಡಿಕೆ ಇಟ್ಟಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಇಂತಹುದೇ ಖಾತೆ ನೀಡಬೇಕೆಂಬ ಬೇಡಿಕೆ ಇಟ್ಟಿರಲಿಲ್ಲ, ಮುಖ್ಯಮಂತ್ರಿ ಅವರು ಅರಣ್ಯ ಖಾತೆ ಕೊಟ್ಟಿದ್ದಾರೆ. ಅದನ್ನೂ ಬದಲಾವಣೆ ಮಾಡುವು ದಾದರೆ ಮಾಡಲಿ, ಬೇರೆ ಖಾತೆ ಕೊಟ್ಟರೂ ಅಭ್ಯಂತರವಿಲ್ಲ ಎಂದಿದ್ದಾರೆ. ತಮ್ಮ ವಿರುದ್ಧ ರಾಜಕೀಯ ಪ್ರೇರಿತ ಅನಗತ್ಯ ಆರೋಪಗಳನ್ನು ಮಾಡಲಾಗುತ್ತಿದೆ. ಅಕ್ರಮ ಗಣಿಗಾರಿಕೆ ಆರೋಪ ಇದೆ. ಆದರೆ, ಅದು ಸಾಬೀತಾಗಿಲ್ಲ. ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ರಾಜಕೀಯ ಹುನ್ನಾರದಿಂದ ಗ್ರೂಪ್ ಅಫೆನ್ಸ್‍ನಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಲಾಗಿದೆ, ನೇರವಾಗಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ, ಅರಣ್ಯ ಕಾಯ್ದೆಯಡಿ ಯಾವ ಪ್ರಕರಣವನ್ನೂ ಎದುರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

Translate »