ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಿ: ಅಧಿಕಾರಿಗಳಿಗೆ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ
ಹಾಸನ

ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಿ: ಅಧಿಕಾರಿಗಳಿಗೆ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ

July 9, 2018

ಹಾಸನ:  ಹಾಸನ ಜಿಲ್ಲೆ ಸೇರಿದಂತೆ ಬಯಲುಸೀಮೆಯ ವಿವಿಧ ಭಾಗಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಎತ್ತಿನಹೊಳೆಗೆ ಇಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಕಲೇಶಪುರದ ಎತ್ತಿನಹೊಳೆಯಲ್ಲಿ ಸುರಿವ ಮಳೆಯ ನಡುವೆಯೂ ಈವರೆಗೆ ಆಗಿರುವ ಕಾಮಗಾರಿಗಳು ಹಾಗೂ ಮುಂದೆ ಆಗಬೇಕಿರುವ ಕೆಲಸಗಳ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದ ಸಚಿವರು, ತ್ವರಿತವಾಗಿ ಯೋಜನೆಯ ಲಾಭ ಬಯಲು ಸೀಮೆಯ ಜನರಿಗೆ ತಲುಪುವಂತೆ ಕಾಲ ಮಿತಿಯೊಳಗೆ ಕೆಲಸ ಪೂರ್ಣಗೊಳಿಸಿ ಎಂದು ನಿರ್ದೇಶನ ನೀಡಿದರು.

ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಕಾಮಗಾರಿ ಪೂರ್ಣಗೊಳಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಮಲೆನಾಡಿ ನಲ್ಲಿ ವರ್ಷದಲ್ಲಿ ಆರು ತಿಂಗಳು ಮಳೆಯಾಗುವುದರಿಂದ ನಿರ್ದಿಷ್ಟ ಸಮಯ ದಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು ಹೇಳಿದರು. ಸ್ಥಳಕ್ಕೆ ಭೇಟಿ ನೀಡುವ ಮುನ್ನ ಸಕಲೇಶಪುರದ ಖಾಸಗಿ ಹೋಟೆಲ್‍ನಲ್ಲಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಯನ್ನು ಪಡೆದುಕೊಂಡರು. ಎತ್ತಿನಹೊಳೆ ಸವಾಲಾದ ವಿದ್ಯುತ್, ಪರಿಹಾರ, ಸಂತ್ರಸ್ಥರ ಬೇಡಿಕೆ ಎಲ್ಲವನ್ನು ತಿಳಿಯಲು ಇಲ್ಲಿಗೆ ಬಂದಿದ್ದೇನೆ. ಎತ್ತಿನಹೊಳೆಗೆ 1,800 ಹೆಕ್ಟೇರ್ ನಷ್ಟು ಭೂಮಿ ಬೇಕಾಗುತ್ತದೆ. ಮತ್ತು ಶಾಂತಿಗ್ರಾಮದ ಪವರ್ ಗ್ರೀಡ್‍ನಿಂದ ವಿದ್ಯುತ್ ಸಂಪರ್ಕ ಪಡೆಯಲು ಅನುಮೋದನೆ ಬೇಕಾಗಿದೆ. ಎತ್ತಿನಹೊಳೆ ನೀರನ್ನ ಮಳೆಯಾದಾಗ ಮಾತ್ರ ಬಳಕೆ ಮಾಡಿ ಕೊಳ್ಳಲಾಗುತ್ತದೆ ಎಂದರು. ಕಾಲುವೆ ಮುಖಾಂತರ ನೀರನ್ನು ಕದಿಯುತ್ತಿರುವ ದೂರುಗಳು ಕೇಳಿ ಬರುತ್ತಿವೆ. 13,000 ಕೋಟಿ ರೂ. ದುಬಾರಿ ವೆಚ್ಚದಲ್ಲಿ ಯೋಜನೆ ನಡೆಯುತ್ತಿದ್ದು, ನೀರಿನ ಕಳ್ಳತನ ತಡೆ ಯಲು ಸಾಧ್ಯವಿಲ್ಲವೇ? ಎಂದು ಅಧಿಕಾರಿಗಳಿಗೆ ಪ್ರಶ್ನೆ ಹಾಕಿದ ಡಿಕೆಶಿ, ನೀರನ್ನ ಕದಿಯವವರ ಬಗ್ಗೆ ಗಮನಹರಿಸಿ. ನಿಮ್ಮ ಕೈಲಾಗದಿದ್ದರೆ ನಾನೇ ಪರ್ಯಾಯ ಮಾರ್ಗ ಮಾಡುವೆ ಎಂದು ಎಚ್ಚರಿಸಿದರು. ಈ ವೇಳೆ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳಿದ್ದರು.

Translate »