ಪೌರಾಡಳಿತ ಸಚಿವ ಶಿವಳ್ಳಿ ನಿಧನ
ಮೈಸೂರು

ಪೌರಾಡಳಿತ ಸಚಿವ ಶಿವಳ್ಳಿ ನಿಧನ

March 23, 2019

ಬೆಂಗಳೂರು: ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ (57) ತೀವ್ರ ಹೃದಯಾಘಾತ ದಿಂದ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಿಗ್ಗೆ ಅವ ರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಕೂಡಲೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಧಾರವಾಡದಲ್ಲಿ ಸಂಭವಿಸಿದ ಕಟ್ಟಡ ಕುಸಿತದ ಅವಶೇಷಗಳಡಿ ಸಿಲುಕಿದ್ದ ಜನರನ್ನು ರಕ್ಷಿಸುವ ಕಾರ್ಯಾ ಚರಣೆಯಲ್ಲಿ ಕಳೆದ ಎರಡು ದಿನಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಕೋಟಾದಡಿ ಸಚಿವರಾಗಿ ಶಿವಳ್ಳಿ ಅಧಿಕಾರ ವಹಿಸಿಕೊಂಡಿದ್ದರು. ಚೆನ್ನಬಸಪ್ಪ ಸತ್ಯಪ್ಪ ಶಿವಳ್ಳಿ, 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಕುಂದಗೋಳ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್ ಪಕ್ಷ ಸೇರಿ 2013, 2018ರಲ್ಲಿ ಶಾಸಕರಾದರು. ಮೂರು ಬಾರಿಗೆ ಕುಂದಗೋಳ ಕ್ಷೇತ್ರದಿಂದ ಶಾಸಕರಾಗಿ ಪ್ರಸ್ತುತ ಪೌರಾಡಳಿತ ಸಚಿವರಷ್ಟೇ ಅಲ್ಲದೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. 1962, ನವೆಂಬರ್ 12 ರಂದು ಜನಿಸಿದ ಶಿವಳ್ಳಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದು ಅನುಭವ ಪಡೆದಿದ್ದರು. ಯರಗುಪ್ಪಿ ಗ್ರಾಮದ ಸತ್ಯಪ್ಪ ಹುಚ್ಚಪ್ಪ ಶಿವಳ್ಳಿ ಅವರ ಹಿರಿಯ ಪುತ್ರರಾಗಿದ್ದ ಶಿವಳ್ಳಿ ಅವರು ಕುಂದಗೋಳದಲ್ಲಿ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘ ಕಟ್ಟಿ ಅದರ ಅಧ್ಯಕ್ಷರಾಗಿದ್ದರು. ಪ್ರತಿ ವರ್ಷ ಬಸವ ಜಯಂತಿಯಂದು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

Translate »