ನಿರಾಶ್ರಿತರಿಗೆ ಊಟ-ವಸತಿ, ಮನೆ ಮನೆಗೆ ಪಡಿತರ, ಹಣ್ಣು-ತರಕಾರಿ ತಲುಪಿಸಿ ಅಧಿಕಾರಿಗಳಿಗೆ ಸಚಿವ ಸೋಮಣ್ಣ ಸಲಹೆ
ಮೈಸೂರು

ನಿರಾಶ್ರಿತರಿಗೆ ಊಟ-ವಸತಿ, ಮನೆ ಮನೆಗೆ ಪಡಿತರ, ಹಣ್ಣು-ತರಕಾರಿ ತಲುಪಿಸಿ ಅಧಿಕಾರಿಗಳಿಗೆ ಸಚಿವ ಸೋಮಣ್ಣ ಸಲಹೆ

April 2, 2020

ಮೈಸೂರು, ಏ.1(ಎಂಕೆ)- ನಿರಾಶ್ರಿತರಿಗೆ ಊಟ, ವಸತಿ ನೀಡುವುದರ ಜತೆಗೆ ಮನೆ ಮನೆಗೆ ಹಣ್ಣು-ತರಕಾರಿ ಮತ್ತು ಪಡಿತರ ವಿತರಣೆ, ವಾರದಲ್ಲಿ ಮೂರು ದಿನ ಮಟನ್ ಮಾರಾಟಕ್ಕೆ ಅವಕಾಶ ನೀಡುವುದರೊಂದಿಗೆ ಮೈಸೂರು ನಗರದ ಎಲ್ಲಾ ಬಡಾವಣೆಗಳಿಗೂ ರಾಸಾಯ ನಿಕ ಸಿಂಪಡಣೆ ಮೂಲಕ ಸ್ವಚ್ಛತೆ ಕಾಪಾಡಲು ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಮೈಸೂರು ಮಹಾ ನಗರ ಪಾಲಿಕೆ, ಮುಡಾ, ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮನೆಯಿ ಲ್ಲದ ನಿರಾಶ್ರಿತರಿಗಾಗಿ ತೆರೆದಿರುವ ಪುನರ್ ವಸತಿ ಕೇಂದ್ರಗಳಲ್ಲಿ ಊಟ, ವಸತಿ ನೀಡುವುದರ ಜತೆಗೆ ಮನೆ ಮನೆಗೆ ಹಣ್ಣು-ತರಕಾರಿ ಮತ್ತು ಪಡಿತರ ವಿತರಣೆ ಮಾಡುವುದು, ಸೊಳ್ಳೆಗಳು ಮತ್ತು ಕೊರೊನಾ ವೈರಸ್ ಹರಡದಂತೆ ರಾಸಾಯನಿಕ ಸಿಂಪಡಣೆ, ಮಟನ್ ವ್ಯಾಪಾರ, ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆ ಕುರಿತು ಚರ್ಚಿಸಲಾಯಿತು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ಕೊರೊನಾ ವೈರಸ್‍ನಿಂದ ದೇಶದ ಜನತೆ ಆತಂಕದಲ್ಲಿದ್ದಾರೆ. ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿದೆ. ಈ ವೇಳೆ ಎಪಿಎಲ್-ಬಿಪಿಎಲ್ ಕಾರ್ಡುದಾರರು ಎಂದು ಪರಿಗಣಿಸದೆ ಎಲ್ಲರಿಗೂ ಪಡಿತರ ವಿತರಣೆ ಮಾಡಬೇಕು ಎಂದು ಸೂಚಿಸಿದರು.

ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಸಮಾ ಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಜವಾಬ್ದಾರಿ ಯುತವಾಗಿ ಕೆಲಸ ಮಾಡಬೇಕು. ಈ ಪರಿಸ್ಥಿತಿ ಯಲ್ಲಿ ಅಧಿಕಾರಿಗಳು ಸೈನಿಕರಂತೆ ಕರ್ತವ್ಯ ನಿರ್ವ ಹಿಸುವ ಅವಶ್ಯಕತೆಯಿದೆ. ಸರ್ಕಾರಕ್ಕೆ ಜಾತಿ-ಕುಲವಿಲ್ಲ. ಸಮಾಜದ ಅಭಿವೃದ್ಧಿಗಾಗಿ ಕಷ್ಟದಲ್ಲಿರು ವವರ ಪರವಾಗಿ ಮಾತ್ರ ಕೆಲಸ ಮಾಡುವು ದಷ್ಟೇ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮನಸ್ತಾಪ ಬಿಟ್ಟು ಕೆಲಸ ಮಾಡಿ ಎಂದು ಮನವಿ ಮಾಡಿದರು.

ಸ್ವಚ್ಛತೆಗೆ ಆದ್ಯತೆ ನೀಡಿ: ಮಾಜಿ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ಕೊರೊನಾ ವೈರಸ್ ತಡೆಗೆ ಮುಖ್ಯವಾಗಿ ಸಾರ್ವಜನಿಕರು ಮನೆ ಯಿಂದ ಹೊರಗೆ ಬರದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಿರಾಶ್ರಿತರಿಗೆ ವಸತಿ ಕೇಂದ್ರಗಳಲ್ಲಿ ಊಟ-ವಸತಿ ನೀಡಲಾಗುತ್ತಿದೆ. ಜೊತೆಗೆ ಮನೆ ಮನೆಗೆ ಹಣ್ಣು-ತರಕಾರಿ ಮತ್ತು ಪಡಿತರ ವಿತರಣೆ ಮಾಡಿದರೆ ಮನೆಯಿಂದ ಹೊರಬರುವವರ ಸಂಖ್ಯೆ ಕಡಿಮೆಯಾಗುತ್ತದೆ. ಪಡಿತರ ಕಾರ್ಡ್ ಇದ್ದವರಿಗಷ್ಟೇ ಅಲ್ಲದೆ ಇಲ್ಲದವರಿಗೂ ಪಡಿತರ ಅಕ್ಕಿ ವಿತರಣೆ ಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಕೊರೊನಾ ಸೊಂಕು ನಿಯಂತ್ರಣಕ್ಕೆ ಗಲ್ಲಿ ಗಲ್ಲಿಗೂ ರಾಸಾಯನಿಕ ಸಿಂಪಡಣೆಯಾಗಬೇಕು. ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗ ದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಮತ್ತಷ್ಟು ಸಾಂತ್ವನ ಕೇಂದ್ರ: ಶಾಸಕ ಎಲ್.ನಾಗೇಂದ್ರ ಮಾತನಾಡಿ, ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಕಡೆ ಸಾಂತ್ವನ ಕೇಂದ್ರಗಳನ್ನು ತೆರೆಯ ಲಾಗಿದ್ದು, ಮತ್ತಷ್ಟು ಸಾಂತ್ವನ ಕೇಂದ್ರಗಳ ಅಗತ್ಯವಿದೆ. ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ತೆರೆದಿರುವ ಪುನರ್‍ವಸತಿ ಕೇಂದ್ರದಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚಾಗಿದ್ದು, ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಮತ್ತು ನಿರ್ವಹಣೆ ಮಾಡಲು ಕಷ್ಟವಾಗು ತ್ತಿದೆ. ಉಚಿತವಾಗಿ ಊಟ ನೀಡುತ್ತಾರೆಂದು ಕೆಲವರು ನಿರಾಶ್ರಿತರೆಂದು ಹೇಳಿಕೊಂಡು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೇರೆ ಕಡೆಗಳಲ್ಲಿಯೂ ಪುನರ್ ವಸತಿ ಕೇಂದ್ರ ತೆರೆಯಬೇಕು ಎಂದರು.

ಮಟನ್ ವ್ಯಾಪಾರಕ್ಕೆ ಅನುಮತಿ ನೀಡಿರುವುದ ರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಮಟನ್ ಸ್ಟಾಲ್‍ಗಳಲ್ಲಿ ನೂಕು-ನುಗ್ಗಲು ಹೆಚ್ಚಾಗುತ್ತಿದೆ. ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ಪ್ರತಿ ವಾರ್ಡ್‍ನಲ್ಲಿಯೂ ರಾಸಾಯನಿಕ ಸಿಂಪಡಣೆಯಾಗಬೇಕು ಎಂದು ತಿಳಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮತ್ತು ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ ಕೊರೊನಾ ನಿಯಂತ್ರಣ ಕುರಿತು ಕೈಗೊಂಡಿರುವ ಜಾಗೃತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಸಂಸದ ಪ್ರತಾಪ್ ಸಿಂಹ, ಮೇಯರ್ ತಸ್ನಿಂ, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಮುಡಾ ಆಯುಕ್ತ ಕಾಂತರಾಜು ಮತ್ತಿತರರು ಉಪಸ್ಥಿತರಿದ್ದರು.

Translate »