ಸಾಗರಕಟ್ಟೆಯಿಂದ ಕೆ.ಆರ್.ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣಕ್ಕೆ ಸಚಿವ ಸಾರಾ ಚಾಲನೆ
ಮೈಸೂರು

ಸಾಗರಕಟ್ಟೆಯಿಂದ ಕೆ.ಆರ್.ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣಕ್ಕೆ ಸಚಿವ ಸಾರಾ ಚಾಲನೆ

August 8, 2018

ಚುಂಚನಕಟ್ಟೆ:  ಸರ್ಕಾರದ ಅನುದಾನದಿಂದ ನಡೆಯುವ ಕಾಮಗಾರಿ ಗಳು ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುವ ಅಭಿವೃದ್ದಿ ಕೆಲಸ ಎಂದು ಅರಿತು ಸರಿಯಾದ ರೀತಿ ಸದ್ಬಳಕೆ ಮಾಡಿದಾಗ ಸರ್ಕಾರದ ಯೋಜನೆಗಳು ಸಮರ್ಪವಾಗಿ ಅನುಷ್ಠಾನಗೊಳ್ಳಲು ಸಾಧ್ಯ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದರು.

ತಾಲೂಕಿನ ಲಾಳಂದೇವನಹಳ್ಳಿ ಗ್ರಾಮದ ಬಳಿ ಮೈಸೂರು ತಾಲೂಕು ಇಲವಾಲದ ಸಾಗರಕಟ್ಟೆಯಿಂದ ಕೆ.ಆರ್.ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿ ಮಾತನಾಡಿದ ಅವರು 5 ಕೋಟಿ ರೂ. ಗಳಲ್ಲಿ ಕೆಆರ್‌ಡಿಸಿಎಲ್‌ ವತಿಯಿಂದ ಈ ರಸ್ತೆ ಡಾಂಬರೀಕರಣ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಾಗರಕಟ್ಟೆ ಸೇತುವೆ ಬಳಿಯಿಂದ ಗ್ರಾಮದ ವೃತ್ತದವರೆಗೆ 5 ಕಿ.ಮೀ ಡಾಂಬರೀಕರಣ ಮಾಡುತ್ತಿದ್ದು, ಇಲ್ಲಿಂದ ಕೆ.ಆರ್.ನಗರ ಪಟ್ಟಣದವರೆಗೆ ಡಾಂಬರೀಕರಣ ಮಾಡುವ 8 ಕೋಟಿ ರೂ.ಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಲೋಕೋಪಯೋಗಿ ಸಚಿವರು ಹಣ ಬಿಡುಗಡೆ ಮಾಡಿಸುವ ಭರವಸೆ ನೀಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡ ಲಾಗುತ್ತದೆ ಎಂದರು.
ಗುತ್ತಿಗೆದಾರರು ಅಂದಾಜು ಪಟ್ಟಿಯಂತೆ ಗ್ರಾಮ ಪರಿಮಿತಿಯ ಎರಡು ಭಾಗದಲ್ಲೂ ಬಾಕ್ಸ್ ಚರಂಡಿ ನಿರ್ಮಾಣ ಮಾಡಿ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚಿಸಿದ ಸಚಿವರು, ಕಾಮಗಾರಿ ನಡೆಯುವ ಸಂದರ್ಭ ದಲ್ಲಿ ಸಾರ್ವಜನಿಕರು ಗುಣಮಟ್ಟ ಪರಿಶೀಲನೆ ಮಾಡಿ ಅನುಮಾನ ಬಂದಲ್ಲಿ ನನಗೆ ತಿಳಿಸಬೇಕು ಎಂದು ಕೋರಿದರು.

ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲೇ ರಸ್ತೆ ಅಭಿವೃದ್ದಿಗಾಗಿ ಹಣವನ್ನು ಮಂಜೂರು ಮಾಡಿಸಲಾಗಿತ್ತು. ಆದರೆ ಚುನಾವಣೆ ಬಂದಿದ್ದರಿಂದ ರಾಜಕೀಯ ಕಾರಣಕ್ಕಾಗಿ ಕಾಮಗಾರಿಯ ಟೆಂಡರ್ ಅನ್ನು ಕಾಂಗ್ರೆಸ್ ಮುಖಂಡರು ಮುಂದೂಡಿಸಿದರು. ಆದರೂ ಕ್ಷೇತ್ರದ ಜನತೆಯ ಆಶಿರ್ವಾದದಿಂದ ನಾನೇ ಕಾಮಗಾರಿಗೆ ಪೂಜೆ ಮಾಡುವಂತಾಗಿದೆ ಎಂದರು.

ರಸ್ತೆಗಳಲ್ಲಿ ಗೇಜ್‍ವೀಲ್ ಓಡಿಸುವ ಬಗ್ಗೆ ಪೊಲೀಸರಿಗೆ ಗ್ರಾಮ ಪಂಚಾಯಿತಿ ಪಿಡಿಒ, ಆರ್‍ಐ ಮತ್ತು ವಿಎಗಳು ದೂರು ನೀಡಬೇಕು. ಇದರ ಬಗ್ಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಅಮಾನತು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ಸಚಿವರು, ಇವರುಗಳು ಎಚ್ಚೆತ್ತಾಗ ಗೇಜ್ ವೀಲ್ ಹೊಡೆಯುವುದು ತಾನಾಗಿಯೇ ಕಡಿಮೆಯಾಗಲಿದೆ ಎಂದು ಹೇಳಿದರು.

ಗ್ರಾಮಸ್ಥರ ಮನವಿಯಂತೆ ಶನಿದೇವರ ದೇವಾಲಯದ ಕಾಂಪೌಂಡ್ ನಿರ್ಮಾಣ, ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆ ಮತ್ತು ಪರಿಶಿಷ್ಟ ಜಾತಿ ಬಡಾವಣೆಯ ರಸ್ತೆಯ ಕಾಂಕ್ರಿಟೀಕರಣ ಮಾಡಿಸಿಕೊಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಆಶ್ರಯ ಮನೆಗಳ ಫಲಾನುಭವಿಗಳ ಆದೇಶ ಪತ್ರಗಳನ್ನು ವಿತರಿಸಲಾಯಿತು.

ತಹಶೀಲ್ದಾರ್ ನಿಖಿತಾ.ಎಂ.ಚಿನ್ನಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ, ಜಿ.ಪಂ. ಮಾಜಿ ಅಧ್ಯಕ್ಷ ಸಿದ್ದಪ್ಪ, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಲೋಕೋಪಯೋಗಿ ಇಲಾಖೆ ಎಇಇ ಟಿ.ಡಿ. ಪ್ರಸಾದ್, ಜಲಸಂಪನ್ಮೂಲ ಇಲಾಖೆಯ ಎಇಇ ಚಂದ್ರಶೇಖರ್, ಇಒ ಲಕ್ಷ್ಮಿಮೋಹನ್, ಮುಖಂಡರಾದ ಬಿ.ಇ.ರವಿಕುಮಾರ್, ನಿಂಗಪ್ಪ, ಮಂಜುನಾಥ್, ವಸಂತ್ ಕುಮಾರ್, ಶಂಭುಲಿಂಗಪ್ಪ, ಸತೀಶ್, ದಿವಾಕರ್, ಮಹೇಶ್, ಯೋಗೀಶ್, ಪ್ರದೀಪ್, ಲೋಕೇಶ್ ಇದ್ದರು.

Translate »