ಸಚಿವ ವೆಂಕಟರಮಣಪ್ಪ, ಸಂಸದ ಪ್ರತಾಪ್ ಸಿಂಹ ಜಟಾಪಟಿ
ಮೈಸೂರು

ಸಚಿವ ವೆಂಕಟರಮಣಪ್ಪ, ಸಂಸದ ಪ್ರತಾಪ್ ಸಿಂಹ ಜಟಾಪಟಿ

November 29, 2018

ಮೈಸೂರು:  ಇಎಸ್‍ಐ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿ ನೇಮಕ ವಿಚಾರವಾಗಿ ಸಚಿವ ವೆಂಕಟರಮಣಪ್ಪ ಮತ್ತು ಸಂಸದ ಪ್ರತಾಪ್ ಸಿಂಹ ವೇದಿಕೆಯಲ್ಲೇ ಜಟಾಪಟಿ ನಡೆಸಿದ ಪ್ರಸಂಗ ಇಂದು ನಡೆಯಿತು.

ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿ ನಿರ್ಮಿಸಿರುವ 35 ಕೋಟಿ ರೂ. ವೆಚ್ಚದ ಇಎಸ್‍ಐ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉಭಯ ನಾಯಕರ ನಡುವೆ ಆಸ್ಪತ್ರೆಗೆ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಒದಗಿಸಬೇಕೆಂಬ ವಿಷಯದ ಸಂಬಂಧ ಪರಸ್ಪರ ವಾಕ್ಸಮರ ನಡೆಯಿತು. ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡ ಸಂಸದ ಪ್ರತಾಪ್ ಸಿಂಹ ಅವರು ಮೊದಲು ಮಾತನಾಡಿದರು. 2011ರಲ್ಲೇ ಅಂದಿನ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಶಂಕುಸ್ಥಾಪನೆ ಮಾಡಿದ್ದ ಇಎಸ್‍ಐ ಆಸ್ಪತ್ರೆ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಹಾಗೂ ಗೋಲ್‍ಮಾಲ್ ನಡೆದ ಕಾರಣಕ್ಕಾಗಿ ಸ್ಥಗಿತಗೊಂಡಿತ್ತು ಎಂದರು.

ಬಿಜೆಪಿ ಸರ್ಕಾರ ಬಂದ ನಂತರ ನಾನು 9 ಕೋಟಿ ರೂ. ಹೆಚ್ಚುವರಿ ಅನುದಾನ ತಂದು ಆಸಕ್ತಿ ವಹಿಸಿ ಕಾಮಗಾರಿ ಪೂಣಗೊಳಿಸಿದ್ದೇವೆ. ಕೇವಲ ಕಟ್ಟಡ ನಿರ್ಮಿಸಿದರೆ ಸಾಲದು. ವೈದ್ಯರು, ಸಿಬ್ಬಂದಿ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಪೂರೈಸಿದರೆ ಮಾತ್ರ ಕಾರ್ಮಿಕರಿಗೆ ಆರೋಗ್ಯ ಸೇವೆ ಸಿಗಲು ಸಾಧ್ಯ. ಅದನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.

ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯ ಬೇಕು. ಒಂದು ವೇಳೆ ಸರಿಯಾಗಿ ನಿರ್ವಹಿಸಲಾಗದಿದ್ದರೆ ಬೆಂಗಳೂರಿನ ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿರುವಂತೆ ಮೈಸೂರು ಆಸ್ಪತ್ರೆಯನ್ನೂ ಒಪ್ಪಿಸಿದಲ್ಲಿ ನಾವೇ ನೋಡಿಕೊಂಡು ಉತ್ತಮ ಆರೋಗ್ಯ ಸೇವೆ ಪೂರೈಸುತ್ತೇವೆ ಎಂದು ಸಂಸದರು ನುಡಿದರು.

ರಾಜ್ಯ ಸರ್ಕಾರ ವೈದ್ಯರು, ಸಿಬ್ಬಂದಿಗಳ ಖಾಲಿ ಹುದ್ದೆ ತುಂಬದೆ, ಸಾಲ ಸೌಲಭ್ಯವನ್ನೂ ಕೊಡದ ಕಾರಣ ಇಎಸ್‍ಐ ಆಸ್ಪತ್ರೆಗಳು ಕೇವಲ ರೆಫರಲ್ ಆಸ್ಪತ್ರೆಗಳಾಗಿವೆ. ಕಾರ್ಮಿಕರು ಇಲ್ಲಿ ಸೌಲಭ್ಯ ಇಲ್ಲದ ಕಾರಣ, ಚೀಟಿ ಪಡೆದುಕೊಂಡು ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಾಪ್ ಸಿಂಹ ಟೀಕಿಸಿದರು.

ನಂತರ ಮಾತನಾಡಿದ ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು, ಕಾರ್ಮಿಕರ ವಿಮಾ ಆಸ್ಪತ್ರೆಯಲ್ಲಿ ಖಾಲಿ ಇರುವ 150 ತಜ್ಞ ವೈದ್ಯರು, 73 ಫಾರ್ಮಾಸಿಸ್ಟ್‍ಗಳು ಹಾಗೂ 100 ಸ್ಟಾಫ್ ನರ್ಸ್ ಹುದ್ದೆಗಳ ಭರ್ತಿಗಾಗಿ ಕೆಪಿಎಸ್‍ಸಿಗೆ ಪತ್ರ ಬರೆದಿದ್ದೇವೆ. ನಮ್ಮ ಸರ್ಕಾರ ಕಾರ್ಮಿಕ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದು ಸುಧಾರಣೆ ಮಾಡಲು ಶ್ರಮಿಸುತ್ತಿದೆ ಎಂದರು. ವೈದ್ಯರು, ಸಿಬ್ಬಂದಿಗಳನ್ನು ನೇರ ನೇಮಕ ಮಾಡಲಾಗದು. ಅದಕ್ಕೆಂದೇ ಕೇಂದ್ರದ ನೀತಿ-ರಿವಾಜುಗಳಿವೆ. ಬದಲಿಸಬೇಕೆಂದರೆ ಕೇಂದ್ರ ಸರ್ಕಾರವೇ ನಿಯಮ ಬದಲಿಸಬೇಕು ಎಂದ ಸಚಿವರು, ಅದಕ್ಕಾಗಿಯೇ ಕೆಪಿಎಸ್‍ಸಿ ಮೂಲಕ ಆಯ್ಕೆ ಮಾಡಲು ಸೂಚಿಸಲಾಗಿದೆ ಎಂದರು.

ವೇದಿಕೆ ಮೇಲೆ ಭಾಷಣ ಮಾಡಿದರೆ ಸಾಲದು ಅದನ್ನು ಕಾರ್ಯರೂಪಕ್ಕೆ ತರಬೇಕು. ಆಗ ಮಾತ್ರ ನುಡಿದಂತೆ ನಡೆಯಲು ಸಾಧ್ಯ. ಪ್ರತಾಪ್ ಸಿಂಹ ಒಳ್ಳೆಯ ಭಾಷಣ ಮಾಡುತ್ತಾರೆ ನಿಜ. ಆದರೆ ಅದನ್ನು ಕಾರ್ಯರೂಪಕ್ಕೆ ತನ್ನಿ ಎಂದು ವೆಂಕಟರಮಣಪ್ಪ ಟಾಂಗ್ ನೀಡಿದರು.

ಸಚಿವರು ಭಾಷಣ ಮುಗಿಸುತ್ತಿದ್ದಂತೆಯೇ ಗರಂ ಆದ ಪ್ರತಾಪ್ ಸಿಂಹ, ಎದ್ದು ಮೈಕ್ ಬಳಿ ಹೋಗಿ, ನಾನು ಹೇಳಿದಂತೆ ಮಾಡಿದ್ದೇನೆ. ಮೈಸೂರಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ತಂದಿದ್ದೇನೆ, ಬ್ರಾಂಡ್ ನ್ಯೂ ಏರ್‍ಪೋರ್ಟ್ ನಿರ್ಮಾಣಕ್ಕೆ 700 ಕೋಟಿ ರೂ. ಅನುದಾನ ತಂದಿದ್ದೇನೆ, ಮೈಸೂರು-ಬೆಂಗಳೂರು ಹೆದ್ದಾರಿ ಅಗಲೀಕರಣ ಯೋಜನೆ ಮಂಜೂರು ಮಾಡಿಸಿದ್ದೇನೆ, ಸೆಟಲೈಟ್ ರೈಲ್ವೇ ಸ್ಟೇಷನ್, ರೈಲ್ವೇ ಗೂಡ್ಸ್ ಟರ್ಮಿನಲ್ ಹೀಗೆ ಹಲವು ಮಹತ್ತರ ಯೋಜನೆಗಳನ್ನು ಕೇಂದ್ರ ಸರ್ಕಾರ ಮೈಸೂರಿಗೆ ಕೊಟ್ಟಿದೆ ಎಂದು ಪ್ರತ್ಯುತ್ತರ ನೀಡಿದರು. ಅವುಗಳನ್ನು ಸಾಕಾರಗೊಳಿಸುತ್ತೇನೆಂದು ನಾನು ಹೇಳಿದ್ದೆ. ಅದರಂತೆಯೇ ಮಾಡಿದ್ದೇನೆ. ಕೇಂದ್ರದ ಅನುದಾನದಲ್ಲಿ ಕೈಗೆತ್ತಿ ಕೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರ ಭೂಮಿ ಕೊಡಿ ಸಾಕು ಎಂದು ವೆಂಕಟರಮಣಪ್ಪ ಅವರಿಗೆ ಪ್ರತಾಪ್ ಸಿಂಹ ಇದೇ ವೇಳೆ ತಿರುಗೇಟು ನೀಡಿದರು.

ಮೈಸೂರಲ್ಲಿ ಬಂಗಲೆ ಕಟ್ಟಲು, ಕೊಡಗಿನಲ್ಲಿ ಎಸ್ಟೇಟ್ ಖರೀದಿಸಲು ನಾನು ಬಂದಿಲ್ಲ. ಇಎಸ್‍ಐ ಆಸ್ಪತ್ರೆ ಅಥವಾ ಇನ್ನಾವುದೇ ಕಚೇರಿಗೆ ಪ್ರತಾಪ್ ಸಿಂಹನಿಂದ ಫೋನ್ ಹೋದರೆ ಅದು ಅಭಿವೃದ್ಧಿ ವಿಚಾರಕ್ಕಾಗಿಯೇ ಇರುತ್ತದೆ ಹೊರತು, ಕಮಿಷನ್‍ಗಾಗಿ ಅಲ್ಲ ಎಂದು ಸಂಸದರು ವೇದಿಕೆಯಲ್ಲೇ ಖಾರವಾಗಿ ನುಡಿದರು.

Translate »