ಅಪ್ರಾಪ್ತ ಬಾಲಕಿ ಮೇಲೆ  ಗಣ್ಯ ವ್ಯಕ್ತಿಗಳಿಂದ ಅತ್ಯಾಚಾರ
ಮೈಸೂರು

ಅಪ್ರಾಪ್ತ ಬಾಲಕಿ ಮೇಲೆ ಗಣ್ಯ ವ್ಯಕ್ತಿಗಳಿಂದ ಅತ್ಯಾಚಾರ

February 4, 2019

ಹೈಕೋರ್ಟ್ ಆದೇಶದ ಮೇರೆಗೆ ಪ್ರಕರಣ ದಾಖಲು

ಮೈಸೂರು: ಮೈಸೂರಿನ ಅಪ್ರಾಪ್ತ ಬಾಲಕಿಯನ್ನು ಕೆಲಸ ಕೊಡಿಸುವ ನೆಪದಲ್ಲಿ ಮಂಗಳೂರಿಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಡಿ ಮೂವರು ಗಣ್ಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಹೈಕೋರ್ಟ್ ನಿರ್ದೇಶನದಂತೆ ಮೈಸೂರಿನ ಒಬ್ಬರು ಹಾಗೂ ಮಂಗಳೂರಿನ ಇಬ್ಬರ ವಿರುದ್ಧ ನರಸಿಂಹರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ. ನನ್ನ ಪುತ್ರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಲ್ಲದೆ, ಮನೆ ನಿರ್ಮಾಣಕ್ಕೆ ಲಕ್ಷ ರೂ. ನೀಡುವುದಾಗಿ ಮೈಸೂರಿನ ಗಣ್ಯ ವ್ಯಕ್ತಿಯೊಬ್ಬರು ಭರವಸೆ ನೀಡಿದ್ದರು. ಅವರ ಮಾತನ್ನು ನಂಬಿ, ನನ್ನ ಮಗಳನ್ನು ಅವರೊಂದಿಗೆ ಕಳುಹಿಸಿದೆ. ಆದರೆ ಅವರು ಮಂಗಳೂರಿಗೆ ಕರೆದೊಯ್ದು ಮತ್ತಿಬ್ಬರ ಜೊತೆ ಸೇರಿ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೆಸರಲ್ಲಿ ಹೈಕೋರ್ಟ್‍ಗೆ ಅರ್ಜಿ ರವಾನೆಯಾಗಿತ್ತು.

ಅರ್ಜಿ ಪರಿಶೀಲಿಸಿದ ನ್ಯಾಯಾಲಯ, ಈ ಸಂಬಂಧ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ರವಾನಿಸಿತ್ತು. ಆಯುಕ್ತರು ಸಂಬಂಧಪಟ್ಟ ನರಸಿಂಹರಾಜ ಠಾಣೆಗೆ ವರ್ಗಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ನ್ಯಾಯಾಲಯಕ್ಕೆ ದೂರು ನೀಡಿದ್ದ ಮಹಿಳೆಯ ವಿಳಾಸ ಪತ್ತೆಯಾಗಿಲ್ಲ. ಆದರೂ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸುತ್ತಿದ್ದೇವೆ ಎಂದು ಎನ್.ಆರ್. ಉಪ ವಿಭಾಗದ ಎಸಿಪಿ ಗೋಪಾಲ್ ಮೈಸೂರು ಮಿತ್ರನಿಗೆ ತಿಳಿಸಿದ್ದಾರೆ.

Translate »