ಜೆ.ಪಿ.ನಗರದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ಜೆ.ಪಿ.ನಗರದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ರಾಮದಾಸ್ ಚಾಲನೆ

December 6, 2018

ಮೈಸೂರು: ಮೈಸೂರಿನ ಜೆ.ಪಿ.ನಗರ `ಡಿ’ ಬ್ಲಾಕ್‍ನಲ್ಲಿ 40 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಬುಧವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಜೆ.ಪಿ.ನಗರ `ಡಿ’ ಬ್ಲಾಕ್‍ನ 8 ರಸ್ತೆಗಳ ಡಾಂಬರೀಕರಣ ನಡೆಯಲಿದೆ. ಜೆ.ಪಿ.ನಗರವು ಸುಮಾರು 30 ವರ್ಷಗಳಷ್ಟು ಹಳೆಯ ಬಡಾವಣೆಯಾದರೂ, ಅಭಿವೃದ್ಧಿ ಕಾರ್ಯಗಳು ನಡೆಯದಿರುವುದು ಶೋಚನೀಯ ಎಂದು ತಿಳಿಸಿದರು.

ಜೆ.ಪಿ.ನಗರದ ಎರಡೂ ವಾರ್ಡ್‍ಗಳಲ್ಲಿಯೂ ಮೊದಲ ಬಾರಿಗೆ ಬಿಜೆಪಿ ಕಾರ್ಪೊ ರೇಟರ್‍ಗಳು ಆಯ್ಕೆಯಾಗಿರುವುದು ಸಂತೋಷದ ವಿಷಯ. ಶಾರದಮ್ಮ ಈಶ್ವರ್ ಅವರು ಕಾರ್ಪೊರೇಟರ್ ಆಗಿ ಜಯ ಗಳಿಸಿ ಸತತವಾಗಿ ಅಭಿವೃದ್ಧಿ ಕಾರ್ಯ ಮಾಡುತ್ತಾ, ಜನರ ಸಮಸ್ಯೆ ಬಗೆಹರಿಸುತ್ತಿದ್ದಾರೆ ಎಂದು ಶಾಸಕರು ಹೇಳಿದರು.

ಕಸ ವಿಲೇವಾರಿ ಸಮಸ್ಯೆ ಬಗೆಹರಿಸುವ ಸಲುವಾಗಿ ರಾಯನಕೆರೆ ಭಾಗದಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪನೆಗೆ ಈಗಾಗಲೇ 100 ಎಕರೆ ಜಾಗ ತೆಗೆದುಕೊಳ್ಳಲಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರದಿಂದ ಬೇಕಾದ ಹಣವನ್ನು ಈ ತಿಂಗಳ ಅಧಿವೇಶನ ಮುಗಿದ ಕೂಡಲೇ ಮಂಜೂರಾತಿ ಮಾಡಿಸುತ್ತೇನೆ ಎಂದು ರಾಮದಾಸ್ ಹೇಳಿದರು. ಈ ವೇಳೆ ಕಾರ್ಪೊರೇಟರ್ ಶಾರದಮ್ಮ ಈಶ್ವರ್, ಅಭಿವೃದ್ಧಿ ಅಧಿಕಾರಿ ಓಂಕಾರಪ್ಪ, ಕಿರಿಯ ಇಂಜಿನಿಯರ್ ದಯಾನಂದ, ಗುತ್ತಿಗೆದಾರರಾದ ಧನಂಜಯ್, ದೇವರಾಜೇಗೌಡ, ಮಹದೇವಸ್ವಾಮಿ, ಗುರುಬಸಪ್ಪ, ವೀರಭದ್ರಯ್ಯ, ರೇವತಿ, ಭಾಗ್ಯಮ್ಮ ಇನ್ನಿತರರಿದ್ದರು.

Translate »