ಮಳೆ ಹಾನಿಗೆ ಸರ್ಕಾರ ತುರ್ತಾಗಿ ಸ್ಪಂದಿಸುವಂತೆ ಎಂಎಲ್‍ಸಿ ಸುನೀಲ್ ಸುಬ್ರಮಣಿ ಆಗ್ರಹ
ಕೊಡಗು

ಮಳೆ ಹಾನಿಗೆ ಸರ್ಕಾರ ತುರ್ತಾಗಿ ಸ್ಪಂದಿಸುವಂತೆ ಎಂಎಲ್‍ಸಿ ಸುನೀಲ್ ಸುಬ್ರಮಣಿ ಆಗ್ರಹ

August 10, 2018

ಮಡಿಕೇರಿ: ತೀವ್ರ ಮಳೆ ಯಿಂದಾಗಿ ಕೊಡಗು ಜಿಲ್ಲೆಗೆ ಭಾರೀ ನಷ್ಟ ಸಂಭವಿಸಿದ್ದು, ರಾಜ್ಯ ಸರಕಾರ ಜಿಲ್ಲೆಯ ನೆರವಿಗೆ ಧಾವಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಆಗ್ರಹಿಸಿದ್ದಾರೆ.

ಮಳೆಯಿಂದ ಹಾನಿಗೊಳಗಾದ ಮಂಗಳದೇವಿ ನಗರ, ಮಂಗಳೂರು ರಸ್ತೆ, ಮೇಕೇರಿ-ಮೂರ್ನಾಡು ಬೈ ಪಾಸ್ ರಸ್ತೆಯಲ್ಲಿ ವಾಹನ ಸಂಚಾರದ ಸ್ಥಿತಿಗತಿಗಳ ಕುರಿತು ಸುನೀಲ್ ಸುಬ್ರಮಣಿ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ ಅಧಿ ಕಾರಿಗಳೊಂದಿಗೆ ಚರ್ಚಿಸಿದ ಸುನೀಲ್ ಸುಬ್ರಮಣಿ, ರಸ್ತೆಯ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದರು.

ಮಂಗಳೂರು ರಸ್ತೆ ಕುಸಿದಿರುವ ಸ್ಥಳ ದಲ್ಲಿ ತ್ವರಿತವಾಗಿ ದುರಸ್ಥಿ ಕಾರ್ಯ ನಡೆಸಿ ಲಘು ವಾಹನ ಸಂಚರಿಸಲು ಅನುವು ಮಾಡಿಕೊಡುವಂತೆ ಅಧಿ ಕಾರಿಗಳಿಗೆ ಸಲಹೆ ನೀಡಿದ ಸುನೀಲ್ ಸುಬ್ರಮಣಿ, ವಸ್ತು ಸ್ಥಿತಿಯನ್ನು ಸರಕಾರಕ್ಕೆ ವರದಿ ಮಾಡುವಂತೆ ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ನಗರಾಡಳಿತ, ಜಿಲ್ಲಾಡಳಿತದ ಅಧಿಕಾರಿಗಳು ಮಳೆ ಹಾನಿಯ ವಿಪತ್ತು ತಡೆಯಲು ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಾದ ಹಾನಿಯ ಕುರಿತು ಅಧಿಕಾರಿಗಳು ಸರಕಾರಕ್ಕೆ ವರದಿ ನೀಡಿದ್ದು, ಸರಕಾರ ಕೂಡ ಸ್ಪಂದಿಸ ಬೇಕಿದೆ ಎಂದು ಆಗ್ರಹಿಸಿದರು. ತಾವು ಕೂಡ ಶಾಸಕರೊಡಗೂಡಿ ಜಿಲ್ಲೆಯ ಲ್ಲಾಗುತ್ತಿರುವ ಪ್ರಕೃತಿ ವಿಕೋಪ ಮತ್ತು ಹಾನಿಯ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು. ಈ ಸಂದರ್ಭ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ, ಸದಸ್ಯ ಕೆ.ಎಸ್. ರಮೇಶ್ ಹಾಜರಿದ್ದರು.

Translate »