ಮಳೆ ಸಂತ್ರಸ್ತರಿಗೆ ಮಾದರಿ ಮನೆ ನಿರ್ಮಾಣ: ಸಂತ್ರಸ್ತರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ
ಕೊಡಗು

ಮಳೆ ಸಂತ್ರಸ್ತರಿಗೆ ಮಾದರಿ ಮನೆ ನಿರ್ಮಾಣ: ಸಂತ್ರಸ್ತರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ

September 25, 2018

ಮಡಿಕೇರಿ: ಮಹಾಮಳೆಯಿಂದ ಮನೆ ಕಳೆದುಕೊಂಡು ಸಂತ್ರಸ್ತರಾದ ಕುಟುಂಬಗಳಿಗೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಮನೆ ನಿರ್ಮಿಸಿಕೊಡಲು ಮುಂದಾಗಿದೆ.

ಜಿಲ್ಲೆಯ ವಿವಿಧೆಡೆ ಈಗಾಗಲೇ 110 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ನಿವೇಶನಗಳಿಗಾಗಿ ಜಾಗ ಸಮತಟ್ಟುಗೊಳಿಸುವ ಕೆಲಸ ಮಾಡಲಾಗು ತ್ತಿದೆ. ಮಡಿಕೇರಿ ನಗರದ ಹೊರವಲ ಯದ ಆರ್‍ಟಿಓ ಕಛೇರಿ ಪಕ್ಕದಲ್ಲೇ 4.65 ಎಕರೆ ಪ್ರದೇಶದಲ್ಲಿ 3 ಮಾದರಿ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ.

ರಾಜೀವ್ ಗಾಂಧಿ ವಸತಿ ನಿಗಮದ ಅಂಗ ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಹೆಬಿಟೇಟ್ ಸೆಂಟರ್, ಸೊಸೈಟಿ ಫಾರ್ ಡೆವಲಪ್‍ಮೆಂಟ್ ಆಫ್ ಟೆಕ್ನಾಲಜಿ ಪಾರ್ಕ್ ಮೂಲಕ ನೇತಾಜಿ ವೆಲ್‍ಫೇರ್ ಅಸೋಸಿಯೇಷನ್ ಹಾಗೂ ಬರ್ಡ್ ಎಂಬ 3 ಖಾಸಗಿ ಸಂಸ್ಥೆಗಳು ವಿದೇಶಿ ತಂತ್ರಜ್ಞಾನದ ಆಧುನಿಕ ಮಾದರಿ ಮನೆಗಳನ್ನು ನಿರ್ಮಿಸುತ್ತಿದ್ದು, ಅಂತಿಮ ಹಂತದಲ್ಲಿದೆ. ಈ 3 ಮಾದರಿ ಮನೆಗಳು ಭೂಕಂಪ, ಅಗ್ನಿ ಅವಘಡ ನಿರೋಧಕ ವ್ಯವಸ್ಥೆಯನ್ನು ಹೊಂದಿರುವುದಲ್ಲದೆ. ಪರಿಸರ ಪ್ರೇಮಿ ಮನೆಗಳಾಗಿ ರೂಪುಗೊಳ್ಳುತ್ತಿವೆ.

3 ಮಾದರಿ ಮನೆಗಳು ತಲಾ 307 ಚದರ, 415 ಮತ್ತು 500 ಚದರ ಅಡಿಗಳಲ್ಲಿ ಕಟ್ಟಲಾಗುತ್ತಿದ್ದು, 1 ಬೆಡ್ ರೂಂ, ಬೆಡ್ ರೂಂ, ವ್ಯವಸ್ಥೆ ಯಾಗಿ ನಿರ್ಮಿಸಲಾಗುತ್ತಿದೆ. 1 ಬೆಡ್ ರೂಂ ಮನೆಗೆ 6.6 ಲಕ್ಷ ಹಾಗೂ 2 ಬೆಡ್ ರೂಂ ಮನೆಗೆ 10 ಲಕ್ಷ ರೂ. ವೆಚ್ಚ ಮಾಡಲಾಗು ತ್ತಿದೆ. ಮಾತ್ರವಲ್ಲದೆ, ಈ ಮನೆಗಳ ಮೇಲೆ ತಲಾ 2 ಅಂತಸ್ತನ್ನು ಕೂಡ ನಿರ್ಮಿಸ ಬಹುದಾಗಿದ್ದು, ಹವಾನಿಯಂತ್ರಿತ ವ್ಯವಸ್ಥೆಯನ್ನು ಒಳಗೊಂಡಿರುವುದು ಮತ್ತೊಂದು ವಿಶೇಷವಾಗಿದೆ.

ಕರ್ನಾಟಕ ಸ್ಟೇಟ್ ಹೆಬಿಟೇಟ್ ಸೆಂಟರ್ ನಿರ್ಮಿಸುತ್ತಿರುವ 1 ಬೆಡ್ ರೂಂ ಮನೆ ಸಂಪೂರ್ಣ ಕಾಂಕ್ರೀಟ್ ಗೋಡೆಗಳನ್ನು ಒಳಗೊಂಡಿದ್ದು, ಗೋಡೆಗಳ ಒಳಗೆ ನೀರಿನ ಪೈಪುಗಳು ಮತ್ತು ಕರೆಂಟ್ ಲೈನ್‍ಗಳ ಪೈಪುಗಳನ್ನು ಅಳವಡಿಸಲಾಗುತ್ತಿದೆ. ಪ್ರತಿ ಕೊಠಡಿಯಲ್ಲಿ 2 ರಿಂದ 4 ಕರೆಂಟ್ ಪಾಯಿಂಟ್ ಸೇರಿದಂತೆ ವಿದ್ಯುತ್ ಚಾಲಿತ ಪರಿಕರಗಳ ಬಳಕೆಗೆ ಅಗತ್ಯವಿರುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕಿಟಕಿ ಗಳನ್ನು ಸಿಪಿವಿಸಿ ಪ್ಲಾಸ್ಟಿಕ್ ಮೋಲ್ಡಿಂಗ್ ನಿಂದ ತಯಾರಿಸಲಾಗಿದ್ದು, ಬಾಗಿಲುಗಳನ್ನು ಜಿಲ್ಲಾಡಳಿತ ಅಂತಿಮಗೊಳಿಸಲಿದೆ. ಸೊಸೈಟಿ ಫಾರ್ ಡೆವಲಪ್‍ಮೆಂಟ್ ಸಂಸ್ಥೆ ಗ್ಯಾಲನೆಸ್ ಸ್ಟೀಲ್ ಫ್ಯಾಬ್ರಿಕ್ ತಂತ್ರಜ್ಞಾನದ ಮೂಲಕ ಮನೆಗಳನ್ನು ನಿರ್ಮಿಸುತ್ತಿದೆ. ಸ್ಟೀಲ್ ಫ್ಯಾಬ್ರಿಕ್‍ನ ಒಳಭಾಗ ಥರ್ಮ ಕೋಲುಗಳನ್ನು ಅಳವಡಿಸ ಲಾಗಿದ್ದು, ತುಕ್ಕು ಮತ್ತು ಬೆಂಕಿ ಅವಘಡ ರಹಿತ ಮನೆಯಾಗಿ ರೂಪುಗೊಳ್ಳುತ್ತಿದೆ.

ಬರ್ಡ್ ಸಂಸ್ಥೆ ಕೂಡ ವಿದೇಶಿ ತಂತ್ರ ಜ್ಞಾನದ ಗ್ಯಾಲನೆಸ್ ಮೆಶ್ ಮತ್ತು ಥರ್ಮಾ ಕೋಲು ಬಳಸಿ ಮನೆಗಳನ್ನು ನಿರ್ಮಿಸುತ್ತಿದೆ. ಗೋಡೆಗಳಿಗೆ ಕಾಂಕ್ರಿಟ್ ಪ್ಲಾಸ್ಟರಿಂಗ್ ಮಾಡಲಾಗುತ್ತಿದ್ದು, 3 ಮನೆಗಳೂ ಕೂಡ ಟೈಲ್ಸ್ ವ್ಯವಸ್ಥೆ ಹೊಂದಿರಲಿದೆ. 10 ರಿಂದ 30 ದಿನಗಳ ಅವಧಿಯಲ್ಲಿ ಈ ಮನೆಗಳನ್ನು ನಿರ್ಮಿಸಬಹುದಾಗಿದ್ದು, ವಿವಿಧ ಹಂತಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಮಾದರಿ ಮನೆಗಳ ನಿರ್ಮಾಣ ವಾದ ಬಳಿಕ ಜಿಲ್ಲಾಡಳಿತ ಮನೆ ಕಳೆದು ಕೊಂಡವರ ಅಭಿಪ್ರಾಯ ಸಂಗ್ರಹಿಸಿ ಅವರ ಆಯ್ಕೆಗೆ ಅನುಗುಣವಾಗಿ ಮನೆಗಳ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಲಿದೆ.

Translate »