ಒಂದೇ ದಿನದಲ್ಲಿ ಮೀಟರ್ ಕಡ್ಡಿಗಳಿಗೆ ಮುದ್ರೆ ಹಾಕಿಸಿಕೊಂಡ 125ಕ್ಕೂ ಹೆಚ್ಚು ವರ್ತಕರು
ಮೈಸೂರು

ಒಂದೇ ದಿನದಲ್ಲಿ ಮೀಟರ್ ಕಡ್ಡಿಗಳಿಗೆ ಮುದ್ರೆ ಹಾಕಿಸಿಕೊಂಡ 125ಕ್ಕೂ ಹೆಚ್ಚು ವರ್ತಕರು

September 6, 2019

ಮೈಸೂರು, ಸೆ.5(ಆರ್‍ಕೆಬಿ)- ಮೈಸೂರು ಜವಳಿ ಮತ್ತು ಸಿದ್ಧ ಉಡುಪುಗಳ ವರ್ತಕರ ಸಂಘದ ಆಶ್ರಯ ದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ವತಿಯಿಂದ ಗುರುವಾರ ಮೈಸೂರಿನ ದೇವರಾಜ ಅರಸು ರಸ್ತೆ ಶಿವಾಯನ ಮಠ ರಸ್ತೆಯ ಸಂಘದ ಕಚೇರಿಯಲ್ಲಿ ಜವಳಿ ವರ್ತಕರು ಬಳಸುವ ಮೀಟರ್ ಅಳತೆ ಕಡ್ಡಿಗಳಿಗೆ ಅಧಿಕೃತ ಮುದ್ರೆ ಹಾಕುವ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಶಿಬಿರದಲ್ಲಿ 125ಕ್ಕೂ ಹೆಚ್ಚು ಜವಳಿ ವರ್ತಕರು ತಮ್ಮ ಅಂಗಡಿಯ ಮೀಟರ್ ಅಳತೆ ಕಡ್ಡಿಗಳನ್ನು ಕಚೇರಿಗೆ ತಂದು ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಈ ಸಾಲಿನ ಅಧಿಕೃತ ಮುದ್ರೆ ಹಾಕಿಸಿಕೊಂಡರು. ಕಾನೂನು ಮಾಪನ ಶಾಸ್ತ್ರ ಇಲಾಖೆ ಇನ್ಸ್‍ಪೆಕ್ಟರ್‍ಗಳಾದ ಕೆ.ಎಂ.ಮಹದೇವ ಸ್ವಾಮಿ, ಬಿ.ಎಸ್.ಸುಮಾರಾಣಿ, ಮೈಸೂರು ಜವಳಿ ಮತ್ತು ಸಿದ್ಧ ಉಡುಪುಗಳ ವರ್ತಕರ ಸಂಘದ ಕಚೇರಿ ಕಾರ್ಯ ದರ್ಶಿ ರಾಜಪ್ಪ, ಇಲಾಖೆಯ ಮುದ್ರೆ ಸಿಬ್ಬಂದಿಗಳಾದ ವೈರಮುಡಿ, ರಾಜೇಂದ್ರ ಇನ್ನಿತರರು ಉಪಸ್ಥಿತರಿದ್ದರು.

ಜವಳಿ ಅಂಗಡಿಗಳಲ್ಲಿ ಬಟ್ಟೆ ಖರೀದಿಸಲು ಬರುವ ಗ್ರಾಹಕರಿಗೆ ಬಟ್ಟೆಗಳನ್ನು ಕತ್ತರಿಸಿಕೊಡುವ ಮುನ್ನ ಅಳತೆ ಗಾಗಿ ಈ ಮೀಟರ್ ಕಡ್ಡಿಗಳನ್ನು ಬಳಸಲಾಗುತ್ತದೆ. ಇಂತಿಷ್ಟೇ ಮೀಟರ್ ಬಟ್ಟೆ ಎಂದು ಕೇಳುವ ಗ್ರಾಹಕರಿಗೆ ಯಾವುದೇ ಮೋಸ ಇಲ್ಲದಂತೆ ಬಟ್ಟೆಗಳನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕೃತ ಮುದ್ರೆ ಇರುವ ಮೀಟರ್ ಅಳತೆ ಕಡ್ಡಿಗಳನ್ನೇ ಬಳಸಬೇಕಾಗುತ್ತದೆ.

ಸಾಮಾನ್ಯವಾಗಿ ಬಟ್ಟೆ ಅಂಗಡಿಗಳಲ್ಲಿ ಬಳಸುವ ಮೀಟರ್ ಅಳತೆ ಕಡ್ಡಿಗಳು ಅಧಿಕೃತ ಮುದ್ರೆ ಇಲ್ಲದೆ ಬಳಸುವುದು ಕಂಡು ಬಂದರೆ ಅಂಥ ಅಂಗಡಿ ಮಾಲೀಕರಿಗೆ ಇಲಾಖೆ ಅಧಿಕಾರಿಗಳು ದಂಡ ವಿಧಿಸಬಹುದಾಗಿದೆ. ಒಮ್ಮೆ ಮೀಟರ್ ಅಳತೆ ಕಡ್ಡಿಗಳಿಗೆ ಇಲಾಖೆಯಿಂದ ಅಧಿಕೃತ ಗುರುತಿನ ಮುದ್ರೆ ಹಾಕಿಸಿದರೆ ಅದು ಮುಂದಿನ ಎರಡು ವರ್ಷಗಳ ವರೆಗೆ ಚಾಲ್ತಿಯಲ್ಲಿರುತ್ತದೆ. ನಿಗದಿತ ಅವಧಿ ಮುಗಿದ ಬಳಿಕ ಮುಂದಿನ 2 ವರ್ಷಗಳ ಅವಧಿಗೆ ಮತ್ತೆ ಮುದ್ರೆ ಹಾಕಿಸಬೇಕಾಗುತ್ತದೆ ಎಂದು ಇಲಾಖೆಯ ಇನ್ಸ್‍ಪೆಕ್ಟರ್ ಬಿ.ಎಸ್.ಸುಮಾರಾಣಿ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಮೈಸೂರಿನ ಶ್ರೀರಾಂಪುರದಲ್ಲಿ ಅಶ್ವಿನಿ ಕಲ್ಯಾಣ ಮಂಟ ಪದ ಹಿಂಭಾಗದಲ್ಲಿ ಮಾಪನ ಭವನ ಇದ್ದು, ಜವಳಿ ವರ್ತ ಕರು ಪ್ರತಿ ಸೋಮವಾರ ಭೇಟಿ ನೀಡಿ ತಮ್ಮ ಅಂಗಡಿಯ ಬಟ್ಟೆ ಅಳೆಯುವ ಮೀಟರ್ ಅಳತೆ ಕಡ್ಡಿಗಳಿಗೆ ಇಲಾಖೆಯ ಮುದ್ರೆ ಹಾಕಿಸಿಕೊಳ್ಳುವ ಮೂಲಕ ಅಧಿಕೃತಗೊಳಿಸಿ ಕೊಳ್ಳಬೇಕು ಎಂದು ಹೇಳಿದರು.

Translate »