ಕನ್ನಡ ಭಾಷೆ ಉಳಿಸಿ, ಬೆಳೆಸಲು ಸಂಸದ ಪ್ರತಾಪ್ ಸಿಂಹ ಸಲಹೆ
ಮೈಸೂರು

ಕನ್ನಡ ಭಾಷೆ ಉಳಿಸಿ, ಬೆಳೆಸಲು ಸಂಸದ ಪ್ರತಾಪ್ ಸಿಂಹ ಸಲಹೆ

December 3, 2018

ಮೈಸೂರು: ಕನ್ನಡಿಗರಷ್ಟೇ ಅಲ್ಲದೆ ಹೊರಗಿನಿಂದ ಬಂದವರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರಿನ ವಿವೇಕಾನಂದ ವೃತ್ತದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ನಡೆದ ಕರ್ನಾಟಕ ಏಕೀಕರಣ ಮಹೋತ್ಸವ ಹಾಗೂ ಕನ್ನಡ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಕರ್ನಾಟಕ ಎಂಬ ನಾಮಕರಣವಾಗುವುದಕ್ಕಿಂತ ಮುಂಚಿತ ವಾಗಿ ಇದ್ದ ಮೈಸೂರು ರಾಜ್ಯವನ್ನು ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿ ಬೆಳೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟಿಗೂ ಅವರೇ ಕಾರಣ ಎಂದು ನೆನಪಿಸಿದರು.

ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಹಳೆಯ ಇತಿಹಾಸ ಹೊಂದಿದ್ದು, 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಿಂದಲೇ ಕನ್ನಡ ಭಾಷೆಯನ್ನು ಕಲಿಸಬೇಕು. ಪೋಷಕರೂ ಇಂಗ್ಲಿಷ್ ವ್ಯಾಮೋಹವನ್ನು ಮರೆತು ಕನ್ನಡ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.

ಕರುನಾಡು ರಾಜೋತ್ಸವ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ.ಎನ್.ಕೆಂಪೇಗೌಡ, ಪ್ರದೀಪ್ ಕುಮಾರ್, ಎ.ದೇವರಾಜು, ಎಂ.ಡಿ.ಗೋಪಿನಾಥ್, ಕೆ.ಶಶಿಕುಮಾರ್, ಎನ್.ಸುರೇಶ್, ಸಿ.ವೆಂಕಟೇಶ್ ಹಾಗೂ ಧರ್ಮರಾಜ ಅವರಿಗೆ ಕರು ನಾಡು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಕ್ಕೂ ಮುನ್ನ ಶ್ರೀನಿವಾಸ್ ವಿಷ್ಣು ಆರ್ಕೆಸ್ಟ್ರಾ ತಂಡದವರು ಹಾಡಿದ ಜನಪ್ರಿಯ ಸುಮಧುರ ಕನ್ನಡ ಚಿತ್ರಗೀತೆಗಳ ಝೇಂಕಾರ ಕಲಾರಸಿಕರ ಮನಗೆದ್ದವು. ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಾಜೀವ್, ಕರ್ನಾಟಕ ಸೇನಾ ಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ನಗರ ಪಾಲಿಕೆ ಸದಸ್ಯರಾದ ಸುನಂದ ಪಾಲನೇತ್ರ, ಎಂ.ಸಿ.ರಮೇಶ್, ಎಂ.ಗೀತಶ್ರೀ ಯೋಗಾನಂದ್, ಸಮಾಜ ಸೇವಕ ಡಾ. ಸಿ.ವೈ.ಶಿವೇಗೌಡ, ಎಂ.ಎನ್.ದೊರೆಸ್ವಾಮಿ, ತೇಜೇಶ್ ಲೋಕೇಶ್‍ಗೌಡ ಉಪಸ್ಥಿತರಿದ್ದರು.

Translate »