ರೈಲ್ವೆ ಪ್ರಯಾಣಿಕರ ಅನುಕೂಲಕ್ಕೆ ಅನುವು ಮಾಡಿಕೊಡಲು ಸಂಸದ ಪ್ರತಾಪ್ ಸಿಂಹ ಸೂಚನೆ
ಮೈಸೂರು

ರೈಲ್ವೆ ಪ್ರಯಾಣಿಕರ ಅನುಕೂಲಕ್ಕೆ ಅನುವು ಮಾಡಿಕೊಡಲು ಸಂಸದ ಪ್ರತಾಪ್ ಸಿಂಹ ಸೂಚನೆ

July 18, 2019

ಮೈಸೂರು,ಜು.17-ಹಾಸನ ಕಡೆ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿ ಮೈಸೂರಿನ ಕೆಆರ್‍ಎಸ್ ರಿಂಗ್ ರಸ್ತೆ ಜಂಕ್ಷನ್‍ನಲ್ಲಿ ರೈಲು ತಂಗುದಾಣ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಮತ್ತು ಡಿವಿಜನಲ್ ರೈಲ್ವೆ ಮ್ಯಾನೇಜರ್ ಅಪರ್ಣ ಗರ್ಗ್ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪತ್ರ ಬರೆದಿದ್ದಾರೆ. ಇಲ್ಲಿ ತಂಗುದಾಣ ನಿರ್ಮಿಸಿದರೆ ಮೈಸೂರಿನ ಮುಖ್ಯ ರೈಲ್ವೆ ನಿಲ್ದಾಣದ ಮೇಲಿನ ಒತ್ತಡವು ಕಡಿಮೆ ಯಾಗುವುದರ ಜೊತೆಗೆ ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವ ನೆರೆ ಜಿಲ್ಲೆಯ ಕಾರ್ಮಿಕರಿಗೂ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಮೈಸೂರು-ಕಾಚಿಗುಡ ಎಕ್ಸ್‍ಪ್ರೆಸ್ ರೈಲಿನ ವೇಳಾಪಟ್ಟಿ ಬದಲಾಯಿ ಸಲಾಗಿದ್ದು, ಅದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗಿದೆ. ಆದ್ದರಿಂದ ಈ ಹಿಂದಿನ ವೇಳಾಪಟ್ಟಿಯನ್ನೇ ಮುಂದುವರೆಸಬೇಕೆಂದು ಅವರು ಮನವಿ ಮಾಡಿದ್ದಾರೆ. 2018ರ ಅಕ್ಟೋಬರ್‍ನಿಂದ ಮಾಲ್ಗುಡಿ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ರೈಲಿಗೆ 3 ಟೈಯರ್ ಎಸಿ ಕೋಚ್‍ಗಳನ್ನು ಅಳವಡಿಸಲಾಗಿತ್ತು. ಈ ಎಸಿ ಕೋಚ್‍ಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ರೈಲಿಗೆ ಮತ್ತೊಂದು 2 ಟೈಯರ್ ಎಸಿ ಕೋಚ್ ಬೋಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಪ್ರಯಾಣಿಕರಿಂದ ಹೆಚ್ಚಿನ ಅನುಕೂಲವಾಗುವುದರ ಜೊತೆಗೆ ಇಲಾಖೆಗೂ ಆದಾಯ ಹೆಚ್ಚಲಿದೆ ಎಂದು ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ.

Translate »