ಮೈಸೂರು ರಿಂಗ್ ರಸ್ತೆ ಬೀದಿ ದೀಪ ಇನ್ನು ಮೂರು ತಿಂಗಳ ಕಾಲ ಮುಡಾ ನಿರ್ವಹಣೆ
ಮೈಸೂರು

ಮೈಸೂರು ರಿಂಗ್ ರಸ್ತೆ ಬೀದಿ ದೀಪ ಇನ್ನು ಮೂರು ತಿಂಗಳ ಕಾಲ ಮುಡಾ ನಿರ್ವಹಣೆ

July 6, 2018
  • ಸಂಸದ ಪ್ರತಾಪ್ ಸಿಂಹ ನೇತೃತ್ವದ ಮುಡಾ, ಪಾಲಿಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ, ನಿರ್ಧಾರ

ಮೈಸೂರು: ಮೈಸೂರಿನ ರಿಂಗ್ ರಸ್ತೆಯ ಬೀದಿ ದೀಪ ನಿರ್ವಹಣೆಯನ್ನು ಮೂರು ತಿಂಗಳ ಅವಧಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಹಿಸಿಕೊಳ್ಳಲು ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಲಾಗಿದ್ದು, ಸದ್ಯ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ.

ವರ್ಷದ ಹಿಂದೆಯಷ್ಟೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ತನ್ನ ಉಸ್ತುವಾರಿಯಲ್ಲಿದ್ದ ಮೈಸೂರು ರಿಂಗ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‍ಹೆಚ್‍ಎ) ಹಸ್ತಾಂತರ ಮಾಡಿತ್ತು. ಇದಾದ ಕೆಲವೇ ದಿನಗಳಲ್ಲಿ ಇಲ್ಲಿನ ಬೀದಿ ದೀಪಗಳ ನಿರ್ವಹಣೆ ಇಲ್ಲದಾಗಿತ್ತು. ಪರಿಣಾಮ ದೀಪಗಳು ಬೆಳಗದೆ ರಿಂಗ್ ರಸ್ತೆ ಕತ್ತಲು ಮಯವಾಗಿತ್ತು. ಈ ಸಂಬಂಧ ಜು.4ರಂದು `ಮೈಸೂರು ಮಿತ್ರ’ ವರದಿ ಪ್ರಕಟಿಸುವ ಮೂಲಕ ಆಡಳಿತ ವರ್ಗದ ಗಮನ ಸೆಳೆದಿತ್ತು.

ಈ ಹಿನ್ನೆಲೆಯಲ್ಲಿ ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಮುಡಾ, ಮೈಸೂರು ಮಹಾನಗರ ಪಾಲಿಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂಸದ ಪ್ರತಾಪ್ ಸಿಂಹ, ಸುದೀರ್ಘವಾಗಿ ಚರ್ಚಿಸಿ ಅಂತಿಮವಾಗಿ ಮುಂದಿನ ಮೂರು ತಿಂಗಳ ಅವಧಿಗೆ ವಿದ್ಯುತ್ ಬಿಲ್ ಪಾವತಿ ಸೇರಿದಂತೆ ನಿರ್ವಹಣೆಯ ಹೊಣೆಯನ್ನು ಮುಡಾಗೆ ನೀಡಿದರು.
ಸಭೆಯ ಆರಂಭದಲ್ಲಿ ಸಂಸದರಿಗೆ ಮಾಹಿತಿ ನೀಡಿದ ಮುಡಾ ಅಧೀಕ್ಷಕ ಅಭಿಯಂತರ ಸುರೇಶ್‍ಬಾಬು, ರಿಂಗ್ ರಸ್ತೆಯನ್ನು ಮುಡಾದಿಂದ ಎನ್‍ಹೆಚ್‍ಎಗೆ ಹಸ್ತಾಂತರಿಸಿ ವರ್ಷದ ಮೇಲೆ ತಿಂಗಳು ಪೂರ್ಣಗೊಂಡಿದೆ. ಇದರ ವಿದ್ಯುತ್ ದೀಪ ನಿರ್ವಹಣೆಗೆ ವಿದ್ಯುತ್ ಶುಲ್ಕ ಒಳಗೊಂಡಂತೆ ವಾರ್ಷಿಕವಾಗಿ ಸುಮಾರು 2.7 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ಪಾಲಿಕೆ ವ್ಯಾಪ್ತಿಯ ಬೀದಿ ದೀಪಗಳ ವಿದ್ಯುತ್ ಶುಲ್ಕವನ್ನು ರಾಜ್ಯ ಸರ್ಕಾರವೇ ಪಾವತಿ ಮಾಡುವ ವ್ಯವಸ್ಥೆ ಇದ್ದು, ಹೀಗಾಗಿ ಪಾಲಿಕೆಗೆ ಇದರ ಹೊಣೆಗಾರಿಕೆ ನೀಡುವುದು ಸೂಕ್ತ ಎಂದರು.

ಈ ಸಂಬಂಧ ಸಭೆಗೆ ಉತ್ತರಿಸಿದ ಪಾಲಿಕೆ ಇಇ (ವಿದ್ಯುತ್) ಲಕ್ಷ್ಮಣೇಗೌಡ, ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಸದರಿ ವಿಷಯ ಪ್ರಸ್ತಾಪಿಸಬೇಕಾಗುತ್ತದೆ. ಆ ಬಳಿಕ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗೆ ಕಾಲಾವಕಾಶದ ಅಗತ್ಯವಿದೆ ಎಂದು ತಿಳಿಸಿದರು. ಅಂತಿಮವಾಗಿ ತಾತ್ಕಾಲಿಕ ಪರಿಹಾರವಾಗಿ ಮೂರು ತಿಂಗಳ ಅವಧಿಗೆ ಮುಡಾ ವತಿಯಿಂದ ನಿರ್ವಹಣೆ ಮಾಡಲು ತೀರ್ಮಾನಿಸಲಾಯಿತು.

ಸೋಲಾರ್ ಲೈಟ್ ಕೈಬಿಟಿದ್ದೇಕೆ? ಸಭೆಯ ಆರಂಭದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, 2016-17ನೇ ಸಾಲಿನಲ್ಲಿ ರಿಂಗ್ ರಸ್ತೆಯಲ್ಲಿ ಸೋಲಾರ್ ಬೀದಿ ದೀಪ ಅಳವಡಿಸುವ ಸಂಬಂಧ ಮುಡಾದಿಂದ ಟೆಂಡರ್ ಕರೆಯಲಾಗಿತ್ತು. ಇದಕ್ಕೆ ಟೆಂಡರ್ ಅವಾರ್ಡ್ ಸಹ ಮಾಡಿದ್ದೀರಿ. ಇದು ನೆನೆಗುದಿಗೆ ಬಿದ್ದಿರುವುದೇಕೆ? ಎಂದು ಮುಡಾ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸುರೇಶ್‍ಬಾಬು, ಎನ್‍ಹೆಚ್‍ಎಗೆ ಹಸ್ತಾಂತರ ಮಾಡಿದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಲಾಯಿತು ಎಂದು ತಿಳಿಸಿದರು.

ನಾಯಿಕೊಡೆಗಳಂತೆ ಇರುವ ಬಾರ್‍ಗಳು: ರಿಂಗ್ ರಸ್ತೆಯ ಬೀದಿ ದೀಪ ನಿರ್ವಹಣೆ ಸಂಬಂಧ ಮುಡಾ ಹಾಗೂ ಪಾಲಿಕೆ ಅಧಿಕಾರಿಗಳು ಅಳೆದು ತೂಗಿ ಮಾತನಾಡುತ್ತಿದ್ದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಸಂಸದ ಪ್ರತಾಪ್ ಸಿಂಹ, ಈ ಸಂಬಂಧ ಕೂಡಲೇ ಪರಿಹಾರ ಕಂಡುಕೊಳ್ಳಬೇಕಿದೆ. ಇಲ್ಲವಾದರೆ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳ 500 ಮೀ. ಅಂತರದೊಳಗೆ ಮದ್ಯದಂಗಡಿಗಳು ಇರಬಾರದೆಂಬ ಸುಪ್ರೀಂಕೋರ್ಟ್ ಆದೇಶವಿದ್ದರೂ ಮೈಸೂರಿನ ರಿಂಗ್ ರಸ್ತೆಗಳಲ್ಲಿ ಮದ್ಯದಂಗಡಿಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇಲ್ಲಿಗೆ ಬರುವ ಮದ್ಯಪಾನಿಗಳು ರಿಂಗ್ ರಸ್ತೆಯ ಸೇವಾ ರಸ್ತೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಈ ನಡುವೆ ಬೀದಿ ದೀಪಗಳು ಇಲ್ಲದೆ ಕತ್ತಲು ಆವರಿಸಿದ ಕಾರಣ ಅಪಘಾತಗಳು ಸಂಭವಿಸುವುದನ್ನು ತಳ್ಳಿ ಹಾಕಲಾಗದು ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರಿ ಸಂಸ್ಥೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ ವತಿಯಿಂದ ರಿಂಗ್ ರಸ್ತೆಯ ಜವಾಬ್ದಾರಿ ಹೊತ್ತುಕೊಂಡಿದೆ. ಬೀದಿ ದೀಪಗಳ ನಿರ್ವಹಣೆಯ ಹೊಣೆಗಾರಿಕೆಯನ್ನೂ ನಿಭಾಯಿಸಿದರೆ ಹೆಚ್ಚಿನ ಹೊರೆ ಬೀಳಲಿದೆ. ಕೇಂದ್ರ ಸರ್ಕಾರದಿಂದಲೇ ಮೈಸೂರು-ಬೆಂಗಳೂರು ನಡುವೆ 8 ಪಥದ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಅನೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ನಮ್ಮ ವ್ಯಾಪ್ತಿಗೆ ಬಂದಿದ್ದು, ಎಲ್ಲವನ್ನೂ ನಾವೇ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಾಪ್ ಸಿಂಹ, ಕಮಿಷನ್ ತೆಗೆದುಕೊಳ್ಳುವ ರಾಜಕಾರಣಿಗಳು ಇರುವವರೆಗೂ ಅಧಿಕಾರಿಗಳು ಹದ್ದುಬಸ್ತಿನಲ್ಲಿ ಇರುವುದಿಲ್ಲ ಎಂದು ಕಿಡಿಕಾರಿದರು.

ಸ್ಮಾರ್ಟ್ ಸಿಟಿ ತಪ್ಪಿದ್ದೇಕೆ?: ಪಾಲಿಕೆಯಲ್ಲಿ 2011ರಿಂದ ಲೆಕ್ಕ ಪರಿಶೋಧನೆಯನ್ನೇ ಮಾಡಿಲ್ಲ. ಇದೇ ಕಾರಣದಿಂದ ಮೈಸೂರು ನಗರಕ್ಕೆ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಕೈತಪ್ಪಿತು ಎಂದು ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದರಲ್ಲದೆ, ರಿಂಗ್ ರಸ್ತೆಯ ಬೀದಿ ದೀಪ ನಿರ್ವಹಣೆ ಸಂಬಂಧ ಮೂರು ತಿಂಗಳ ಅವಧಿಯೊಳಗೆ ಪಾಲಿಕೆ ವತಿಯಿಂದ ನಿರ್ವಹಿಸಲು ಅಗತ್ಯವಾಗಿರುವ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಅವಧಿ ಮುಗಿದ ಬಳಿಕವೂ ಸಬೂಬು ಹೇಳಬಾರದು ಎಂದು ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ರಿಂಗ್ ರಸ್ತೆಯಲ್ಲಿ ಪೊಲೀಸ್ ಗಸ್ತು ವಾಹನ ಸಂಚಾರ ಪರಿಣಾಮಕಾರಿಯಾಗಿ ನಡೆಯಲು ಪೊಲೀಸ್ ಇಲಾಖೆಯೊಂದಿಗೆ ವ್ಯವಹರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಚಂದ್ರಪ್ಪ ಅವರಿಗೆ ಪ್ರತಾಪ್ ಸಿಂಹ ಇದೇ ವೇಳೆ ಸೂಚನೆ ನೀಡಿದರು. ಪಾಲಿಕೆ ಸದಸ್ಯ ಶಿವಕುಮಾರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಚಂದ್ರಪ್ಪ, ಮುಡಾ ಎಇಇಗಳಾದ ಮಹೇಶ್‍ಬಾಬು, ಸತೀಶ್, ಪಾಲಿಕೆ ಎಇ ಕವನ್ ಸೇರಿದಂತೆ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಾಕಿ ಇದ್ದ ರಿಂಗ್ ರಸ್ತೆ ಹಸ್ತಾಂತರ

ನಂಜನಗೂಡು ರಸ್ತೆಯ ಬಂಡಿಪಾಳ್ಯ ಸಮೀಪದ ಜಂಕ್ಷನ್‍ನಿಂದ ಹೆಚ್‍ಡಿ ಕೋಟೆ ರಸ್ತೆಯ ಜಂಕ್ಷನ್‍ವರೆಗಿನ 4.3 ಕಿ.ಮೀ. ರಿಂಗ್ ರಸ್ತೆಯನ್ನು ಮುಡಾ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಯಿತು. ಈ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿ ಬಾಕಿ ಉಳಿದಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಹಸ್ತಾಂತರವಾಗಿರಲಿಲ್ಲ. ಗುರುವಾರ ಸಂಸದ ಪ್ರತಾಪ್‍ಸಿಂಹ ಅವರ ಸಮ್ಮುಖದಲ್ಲಿ ಹಸ್ತಾಂತರಕ್ಕೆ ಸಂಬಂಧಿಸಿದ ಕಡತವನ್ನು ಮುಡಾ ಅಧೀಕ್ಷಕ ಅಭಿಯಂತರ ಸುರೇಶ್ ಬಾಬು ರಾಷ್ಟ್ರೀಯ ಹೆದ್ದಾರಿ ಎಇಇ ಚಂದ್ರಪ್ಪ ಅವರಿಗೆ ನೀಡುವ ಮೂಲಕ ಹಸ್ತಾಂತರ ಪ್ರಕ್ರಿಯೆ ಪೂರೈಸಿದರು.

Translate »