ಮೀನುಪೇಟೆಯಲ್ಲಿ ಅದ್ಧೂರಿ ಮುತ್ತಪ್ಪ ತೆರೆ ಉತ್ಸವ
ಕೊಡಗು

ಮೀನುಪೇಟೆಯಲ್ಲಿ ಅದ್ಧೂರಿ ಮುತ್ತಪ್ಪ ತೆರೆ ಉತ್ಸವ

March 22, 2019

ವಿರಾಜಪೇಟೆ: ವಿರಾಜಪೇಟೆ ಮೀನುಪೇಟೆ ಯಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದ [ಕೋಲ] ತೆರೆ ಮಹೋತ್ಸವವು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಯಿತು.

ಮಾ.19 ರಂದು ಗಣಪತಿ ಹೋಮ ಹಾಗೂ ಧ್ವಜಾ ರೋಹಣದೊಂದಿಗೆ ಪ್ರಾರಂಭಗೊಂಡ ತೆರೆ ಮಹೋತ್ಸವ ಮುತ್ತಪ್ಪ ವೆಳ್ಳಾಟಂ, ವೇದಿಕೆ ಉದ್ಘಾಟನೆ ಬಳಿಕ ಸಂಜೆ ಕಣ್ಣೂರ್ ಮೆಲೋಡಿಸ್ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯ ಕ್ರಮ ನಡೆಯಿತು. ಮಾ.20 ರಂದು ಕಲಶ ವಿಶೇಷ ತಾಲಪಪೊಲಿ ಪಟ್ಟಣದ ಸುಂಕದಕಟ್ಟೆಯಿಂದ ಮಯೂರ ನೃತ್ಯ ಹಾಗೂ ಸಿಂಗಾರಿ ಮೇಳದೊಂದಿಗೆ ತೆಲುಗರ ಬೀದಿ, ಜೈನರ ಬೀದಿ, ದೊಡ್ಡಟ್ಟಿ ಚೌಕಿಗಾಗಿ ಮುಖ್ಯ ರಸ್ತೆಯಲ್ಲಿ ಗಡಿಯಾರ ಕಂಬದ ಮಾರ್ಗ ವಾಗಿ ಮೀನುಪೇಟೆ ಶ್ರೀ ಮುತ್ತಪ್ಪ ದೇವಾಲಯದವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು. ಬಳಿಕ ರಾತ್ರಿ ಶ್ರೀ ಮುುತ್ತಪ್ಪ ವೆಳ್ಳಾಟಂ, ಕುಟ್ಟಿಚಾತನ್, ಗುಳಿಗನ್, ವಸೂರಿಮಾಲ, ಪೋದಿ, ವಿಷ್ಣುಮೂರ್ತಿ ವೆಳ್ಳಾಟಂ ನಂತರ ಅನ್ನಸಂತರ್ಪಣೆ ನಡೆಯಿತು. ಮಧ್ಯರಾತ್ರಿ ಸಿಡಿಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು.

ಮಾ.21 ರಂದು ಬೆಳಿಗ್ಗೆ ಶಾಸ್ತಪನ್ ಹಾಗೂ ಗುಳಿಗನ ಕೋಲ, ತಿರುವಪ್ಪ ಭಗವತಿ[ಪೋದಿ] ಮತ್ತು ವಸೂರಿಮಾಲ ತೆರೆ, ವಿಷ್ಣು ಮೂರ್ತಿ ಕೋಲದೊಂದಿಗೆ ತೆರೆ ಮಹೋತ್ಸವ ಮುಕ್ತಾಯ ಗೊಂಡಿತು. ಈ ಸಂದರ್ಭ ದೇವಾಲಯದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು. ತೆರೆ ಮಹೋತ್ಸವ ದಲ್ಲಿ ನೆಹರು ನಗರ, ಪಂಜರುಪೇಟೆ, ಕಲ್ಲುಬಾಣೆಯಿಂದ ಚಂಡೆ ಮದ್ದಾಳೆಯೊಂದಿಗೆ ಮುತ್ತಪ್ಪ ದೇವಸ್ಥಾನದ ವರೆಗೆ ಮುಖ್ಯ ರಸ್ತೆಯಲ್ಲಿ ಕಳಸ ಮೆರವಣಿಗೆ ನಡೆಯಿತು. ತೆರೆ ಮಹೋತ್ಸವದಲ್ಲಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಿಂದಲೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು.

Translate »