ರಂಗಭೂಮಿಯೇ ನನ್ನ ಅಜೆಂಡಾ: ಅಡ್ಡಂಡ ಕಾರ್ಯಪ್ಪ
ಮೈಸೂರು

ರಂಗಭೂಮಿಯೇ ನನ್ನ ಅಜೆಂಡಾ: ಅಡ್ಡಂಡ ಕಾರ್ಯಪ್ಪ

February 20, 2020

ಮೈಸೂರು,ಫೆ.19(ವೈಡಿಎಸ್)-ರಂಗಾಯಣದಲ್ಲಿ ಬಿಜೆಪಿ ಅಥವಾ ಇನ್ಯಾವುದೋ ಸಂಘದ ಬಾವುಟ ಹಾರಿಸಲು ಸರ್ಕಾರ ನನ್ನನ್ನು ಕಳಿಸಿಲ್ಲ. ರಂಗಭೂಮಿ ಕಟ್ಟಲು ಬಂದಿದ್ದೇನೆ. ರಂಗಭೂಮಿಯೇ ನನ್ನ ಅಜೆಂಡಾ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.

40 ವರ್ಷ ರಂಗಭೂಮಿ ಕ್ಷೇತ್ರದಲ್ಲಿನ ನನ್ನ ಅನುಭವ ಅರಿತು ಸರ್ಕಾರ ಈ ಹುದ್ದೆಗೆ ಆಯ್ಕೆ ಮಾಡಿದೆ ಎಂದರು. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಕಡೆಯ ದಿನವಾದ ಬುಧವಾರ ಸಂಜೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೈಸೂರಿನ ಜನರ ಹೃದಯ ಗೆಲ್ಲುವ ವಿಶ್ವಾಸದಿಂದ ಬಂದಿದ್ದೇನೆ. ಬಂದಿರುವುದೇ ರಂಗಭೂಮಿ ಕಟ್ಟಲು. ಜನರಿಗೆ ಒಳ್ಳೆ ನಾಟಕಗಳನ್ನು ನೀಡಿದರೆ ಬಂದು ನೋಡುತ್ತಾರೆ. ಇಂದು ಮೈಸೂರಿಗರ ಹೃದಯ ಗೆಲ್ಲುವಂತೆ ಕಾರ್ಯ ಕ್ರಮ ನಡೆದಿದೆ. ಇಲ್ಲಿ ವೈಯಕ್ತಿಕ ವಿಚಾರಗಳನ್ನು ತರುವುದು ಬೇಡ. ನಾನು ಸ್ಪಷ್ಟವಾಗಿದ್ದೇನೆ. ನನಗೆ ಒಳಗೊಂದು, ಹೊರಗೊಂದು ಮಾತನಾಡುವುದು ಗೊತ್ತಿಲ್ಲ. ನಾನೇ ಖುದ್ದು ಪ.ಮಲ್ಲೇಶ್ ಅವರ ಮನೆಗೆ ಹೋಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ ಎಂದು ಹೇಳಿದರು.

ಯಾರೋ ಬೆದರಿಸುತ್ತಾರೆಂದು ನಾನು ಓಡಿ ಹೋಗಲೇನು? ಹಲವರು ನನ್ನನ್ನು ನಂಬಿದ್ದಾರೆ. ನಾನು ತಪ್ಪು ಮಾಡಿದ್ದರೆ ಟೀಕಿಸಲಿ. ಆದರೆ, ನಾನು ಯಾವ ತಪ್ಪನ್ನೂ ಮಾಡಿಲ್ಲ. ಹಾಗಾಗಿ ಭಯಪಡುವ ಅಗತ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಇಸಂಗಳು ಇರಬೇಕು. ಅದೇ ಪ್ರಜಾಪ್ರಭುತ್ವ. ನಾನೊಬ್ಬ ಕೊಡವ. ನಿಜ ಹೇಳುವುದೇ ಕೊಡವರ ಲಕ್ಷಣ. ಅದನ್ನೇ ನಾನು ಮಾಡಿದ್ದೇನೆ. ಪ್ರಾಮಾಣಿಕತೆಯಿಂದ ನಡೆದುಕೊಂಡಿದ್ದೇನೆ ಎಂದರು.

Translate »