ಮೈಸೂರು,ಸೆ.13(ಆರ್‍ಕೆ)-ಗಣಪತಿ ವಿಸರ್ಜನೆ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿದ್ದ ಮೈಸೂರು ಸಿಸಿಬಿ ಕಾನ್‍ಸ್ಟೇಬಲ್ ಬೆಳ ಗಾವಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಮೈಸೂರಿನ ಸಿಸಿಬಿಯ ಆರ್ಥಿಕ ಅಪ ರಾಧ ಮತ್ತು ಮಾದಕ ದ್ರವ್ಯ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿ.ಪ್ರಮೋದ್(28) ನೇಣಿಗೆ ಶರ ಣಾದವರು. ಮೂಲತಃ ತಿ.ನರಸೀಪುರ ನಿವಾಸಿ ವೆಂಕಟೇಶ್ ಅವರ ಮಗನಾದ ವಿ.ಪ್ರಮೋದ್, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿಇ ಪದವಿ ಮಾಡಿದ್ದರು. ಮೂರು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ್ದ ಪ್ರಮೋದ್ ಸಿಸಿಬಿಯಲ್ಲಿ ಕಾನ್‍ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾಮೂಹಿಕ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಬಂದೋಬಸ್ತ್‍ಗಾಗಿ ಸಿಸಿಬಿಯ 6 ಮಂದಿ ಸೇರಿದಂತೆ ಮೈಸೂರಿನಿಂದ 50 ಮಂದಿ ಪೊಲೀಸರನ್ನು ಕಳುಹಿಸಲಾಗಿತ್ತು. ಸೆ.8ರಂದು ಪ್ರಮೋದ್ ಸೇರಿ ಎಲ್ಲರೂ ಮೈಸೂರಿನಿಂದ ಬೆಳಗಾವಿಗೆ ತೆರಳಿದ್ದರು. ನಾಳೆ (ಸೆ.14) ಅವರು ವಾಪಸಾಗಬೇಕಿತ್ತು. ಇಂದು ಮುಂಜಾನೆ 5 ಗಂಟೆ ವೇಳೆಗೆ ಪ್ರಮೋದ್ ತಾನು ವಾಸ್ತವ್ಯ ಹೂಡಿದ್ದ ಕಲ್ಯಾಣ ಮಂಟಪದ ಸ್ನಾನಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ತಿ.ನರಸೀಪುರದಿಂದ ಪೋಷಕರು ಹಾಗೂ ಸಂಬಂಧಿಕರು ಬೆಳಗಾವಿಗೆ ತೆರಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಾಲಮಾರುತಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವಿವಾಹಿತರಾದ ಪ್ರಮೋದ್ ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.