ಕೋರಂ ಕೊರತೆ ಹಿನ್ನಲೆಮೈಸೂರು ಡೈರಿ ಅಧ್ಯಕ್ಷರ ಚುನಾವಣೆ ಆ.14ಕ್ಕೆ ಮುಂದೂಡಿಕೆ
ಮೈಸೂರು

ಕೋರಂ ಕೊರತೆ ಹಿನ್ನಲೆಮೈಸೂರು ಡೈರಿ ಅಧ್ಯಕ್ಷರ ಚುನಾವಣೆ ಆ.14ಕ್ಕೆ ಮುಂದೂಡಿಕೆ

August 10, 2019

ಮೈಸೂರು, ಆ.9(ಎಸ್‍ಬಿಡಿ)- ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಮೈಮುಲ್) ಅಧ್ಯಕ್ಷ ಚುನಾವಣೆ ಕೋರಂ ಕೊರತೆ ಯಿಂದಾಗಿ ಮುಂದೂಡಲ್ಪಟ್ಟಿದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ವಿದೆ ಎಂಬ ಆರೋಪ ಕೇಳಿ ಬಂದಿದೆ. ಮೈಸೂರಿನ ಸಿದ್ದಾರ್ಥನಗರದಲ್ಲಿ ರುವ ಮೈಮುಲ್ ಕಚೇರಿಯಲ್ಲಿ ಶುಕ್ರ ವಾರ ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಿಗದಿಯಾಗಿತ್ತು. ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಕೆಲ ದಿನಗಳ ಹಿಂದೆ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ನಿರ್ದೇಶಕ, ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಬಂಧಿ ಎಸ್.ಸಿ.ಅಶೋಕ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರ ಸಲ್ಲಿಸಿದ್ದ ಅಶೋಕ್, ಅವರ ಹೆಸರು ಸೂಚಿಸಿದ್ದ ಎ.ಟಿ. ಸೋಮಶೇಖರ್, ಅನುಮೋದಿಸಿದ್ದ ಮಹೇಶ್ ಸೇರಿದಂತೆ ಒಟ್ಟು 14ರಲ್ಲಿ 7 ನಿರ್ದೇಶಕರು ಹಾಗೂ ಅಧಿಕಾರಿಗಳು ಚುನಾವಣೆಗೆ ಗೈರಾಗಿದ್ದರು. ಇದರಿಂದ ಕೋರಂ ಕೊರತೆ ಉಂಟಾಗಿ ಚುನಾವಣಾಧಿಕಾರಿ ಉಮೇಶ್ ಅವರು, ಚುನಾವಣೆಯನ್ನು ಆ.14ಕ್ಕೆ ಮುಂದೂಡಿದರು.

ಆದರೆ ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಒಂದು ಬಣದವರು ಆರೋಪಿಸಿದ್ದಾರೆ. ನಿರ್ದೇಶಕರು ಹಾಗೂ ಅಧಿಕಾರಿಗಳು ಮುಖ್ಯಮಂತ್ರಿಗಳ ಕಛೇರಿ ನಿರ್ದೇಶನದಂತೆ ಚುನಾವಣೆಗೆ ಗೈರಾಗಿದ್ದಾರೆ. ಪ್ರವಾಹದ ನಡುವೆಯೂ ಮುಖ್ಯ ಮಂತ್ರಿಗಳು ಮೈಮುಲ್ ಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಆಡಳಿತ ಮಂಡಳಿ ಚುನಾವಣೆಯಲ್ಲಿ ಸಿದ್ದೇಗೌಡರ ಎದುರು ಸೋತಿದ್ದ ತಮ್ಮ ತಂಗಿಯ ಮಗ ಅಶೋಕ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಚುನಾವಣೆ ಮುಂದೂಡುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕಾರಣ ಅವರು ಇಂದಿನ ಚುನಾವಣೆಗೆ ಹಾಜ ರಾಗಲು ಸಾಧ್ಯವಾಗಿಲ್ಲ ಎಂಬುದು ಮತ್ತೊಂದು ಬಣದ ಸ್ಪಷ್ಟನೆಯಾಗಿದೆ.

ಸಿದ್ದು ಟ್ವೀಟ್: ಮೈಮುಲ್ ಚುನಾವಣೆ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮಂತ್ರಿಮಂಡಲ ವಿಸ್ತರಣೆ ಮಾಡದಿದ್ದರೂ ಹಾಲು ಒಕ್ಕೂಟ(ಕೆಎಂಎಫ್)ಕ್ಕೆ ತಮ್ಮ ಸಂಬಂಧಿಕರನ್ನು ನೇಮಿಸಲು ಹಾತೊರೆಯುತ್ತಿದ್ದಾರೆ. ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಕ್ಕೆ ಅಧಿಕಾರೇತರ ಸದಸ್ಯರನ್ನಾಗಿ ನೇಮಿಸಿರುವ ತಮ್ಮ ಸಂಬಂಧಿ ಎಸ್.ಸಿ.ಅಶೋಕ್ ಅವರನ್ನೇ ಕೆಎಂಎಫ್ ಅಧ್ಯಕ್ಷರನ್ನಾಗಿ ನೇಮಿಸಲು ತರಾತುರಿ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ಟ್ವಿಟರ್‍ನಲ್ಲಿ ಅಶೋಕ್ ನೇಮಕಾತಿ ಆದೇಶವನ್ನು ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Translate »