ಮೈಸೂರು ದಸರಾ: 75 ಕಿ.ಮೀ ರಸ್ತೆ, 91 ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ
ಮೈಸೂರು

ಮೈಸೂರು ದಸರಾ: 75 ಕಿ.ಮೀ ರಸ್ತೆ, 91 ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ

September 13, 2019

ಮೈಸೂರು,ಸೆ.12(ವೈಡಿಎಸ್)-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಗುರು ವಾರ ನಡೆದ ದೀಪಾಲಂಕಾರ ಗುತ್ತಿಗೆದಾರರೊಂದಿ ಗಿನ ಸಭೆಯಲ್ಲಿ `ದಸರಾ ವಿದ್ಯುತ್ ದೀಪಾಲಂಕಾರ’ದ ಪೋಸ್ಟರ್ ಅನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿ, ಮೈಸೂರು ದಸರಾ ಮಹೋತ್ಸವದಲ್ಲಿ ಪ್ರವಾಸಿಗರ ಕಣ್ಮನ ಸೆಳೆಯು ವಂತೆ ಈ ಬಾರಿ ಹೊಸ ವಿನ್ಯಾಸದೊಂದಿಗೆ ದೀಪಾ ಲಂಕಾರ ವ್ಯವಸ್ಥೆ ರೂಪಿಸಲಾಗಿದ್ದು, ಕಾಮಗಾರಿ ಯನ್ನು ಸೆ.25 ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಕಳೆದ ಬಾರಿ 54 ಕಿ.ಮೀ ರಸ್ತೆ ಹಾಗೂ 49 ವೃತ್ತ ಗಳಿಗೆ ಮಾತ್ರ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ರಿಂಗ್ ರಸ್ತೆಯೊಳಗಿನ ಎಲ್ಲಾ ಮುಖ್ಯ ರಸ್ತೆಗಳು ಸೇರಿದಂತೆ ಸುಮಾರು 75 ಕಿ.ಮೀ ರಸ್ತೆ ಹಾಗೂ 91 ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಕಳೆದ ಬಾರಿ ವಿದ್ಯುತ್ ದೀಪ ಮಾಲೆಯಿಂದ 10 ಪ್ರತಿಕೃತಿಗಳನ್ನು ನಿರ್ಮಿಸಲಾಗಿತ್ತು. ಈ ಬಾರಿ 12 ವಿವಿಧ ರೀತಿಯ ವಿಶೇಷ ಪ್ರತಿಕೃತಿಗಳನ್ನು ಮಾಡ ಲಾಗುವುದು. ಅದರಲ್ಲೂ ಪಶ್ಚಿಮಬಂಗಾಳದ ದುರ್ಗಾದೇವಿ ಪೂಜೆಯ ಮಾದರಿ ಕಲಾಪ್ರತಿಕೃತಿ ಯನ್ನು 5 ಕಡೆಗಳಲ್ಲಿ ಹಾಕಲಾಗುವುದು ಎಂದರು.

ದಸರಾದಲ್ಲಿ ದೀಪಾಲಂಕಾರಕ್ಕಾಗಿ 1.5 ಮೆಗಾ ವ್ಯಾಟ್ ಬೇಡಿಕೆಯಿದ್ದು, 1 ಲಕ್ಷ ಯುನಿಟ್ ಬೇಕಾಗಲಿದೆ. ಹಾಗಾಗಿ ನಗರದ ರಾಜಮಾರ್ಗ ಹಾಗೂ ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ ವಿದ್ಯುತ್ ಉಳಿತಾಯದ ಉದ್ದೇಶದಿಂದ ಎಲ್.ಇ.ಡಿ ಬಲ್ಪ್ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದ ಅವರು, ಈ ಬಾರಿ ಎಲ್‍ಇಡಿ ದೀಪಗಳಿಗೇ ಆದ್ಯತೆ ನೀಡಿ, ಹೊಸ ಮಾದರಿಯ ಪ್ರತಿಕೃತಿಗಳು ಹಾಗೂ ಸಾಂಸ್ಕøತಿಕ ನಗರಿಯ ಪಾರಂಪರಿಕತೆ ಬಿಂಬಿಸುವ ದೀಪಾಲಂ ಕಾರಕ್ಕೆ ಆದ್ಯತೆ ನೀಡಲಾಗುವುದು ಎಂದರು.

ತೆಪ್ಪೋತ್ಸದವರೆಗೆ ದೀಪಾಲಂಕಾರ: ಕಳೆದ ಬಾರಿ ದಸರಾ ಮುಕ್ತಾಯವಾದ ದಿನವೇ ದೀಪಾಲಂ ಕಾರವೂ ಕೊನೆಗೊಂಡಿತು ಎಂಬ ಬೇಸರದ ಮಾತು ಗಳು ಕೇಳಿ ಬಂದಿವೆ. ಹಾಗಾಗಿ ಈ ಬಾರಿ ದಸರಾ ಮುಕ್ತಾಯವಾದ ನಂತರವೂ ಮೈಸೂರಿಗೆ ಆಗಮಿ ಸುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಚಾಮುಂಡಿಬೆಟ್ಟದ ತೆಪ್ಪೋತ್ಸವ ನಡೆಯುವವ ರೆಗೂ ದೀಪಾಲಂಕಾರ ಮುಂದುವರೆಸಲು ತೀರ್ಮಾನಿಸಿರುವುದಾಗಿ ತಿಳಿಸಿದರು.

ಇದೇ ಮೊದಲ ಬಾರಿಗೆ ಶ್ರೀರಂಗಪಟ್ಟಣದಲ್ಲಿ 10 ಲಕ್ಷ ರೂ. ಹಾಗೂ ಚಾಮರಾಜನಗರದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ದೀಪಾಲಂಕಾರ ವ್ಯವಸ್ಥೆ ಯನ್ನು ಸೆಸ್ಕ್ ವತಿಯಿಂದ ಮಾಡಲಾಗುತ್ತಿದೆ. ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ 3 ಕೋಟಿ ರೂ.ಗೂ ಮೇಲ್ಪಟ್ಟು ವೆಚ್ಚವಾಗಲಿದ್ದು, ಇದನ್ನು ಸೆಸ್ಕ್ ಭರಿಸುತ್ತಿದೆ ಎಂದು ತಿಳಿಸಿದರು.

ಗುತ್ತಿಗೆದಾರರು ಪರಸ್ಪರ ಒಗ್ಗೂಡಿ ಕೆಲಸ ನಿರ್ವ ಹಿಸಬೇಕು ಹಾಗೂ ಸಾರ್ವಜನಿಕರು ದೀಪಾ ಲಂಕಾರ ವ್ಯವಸ್ಥೆ ಸರಿಯಿಲ್ಲ ಎಂದು ಸರ್ಕಾರ ಮತ್ತು ಅಧಿಕಾರಿಗಳ ಬಗ್ಗೆ ಮಾತನಾಡುವ ಹಾಗೆ ಮಾಡಬೇಡಿ ಎಂದು ಹೇಳಿದರು.

ಹಳೆಯ ಪದಾರ್ಥ ಬಳಕೆ ಬೇಡ: ಸೆ.29ರಿಂದ ದಸರಾ ಆರಂಭಗೊಳ್ಳಲಿದ್ದು, ಸೆ.25ರೊಳಗೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳಬೇಕು. ಗುತ್ತಿಗೆದಾರರು ಹೊಸ ಉಪಕರಣಗಳನ್ನೇ ಬಳಸಬೇಕು. ಉತ್ತಮ ವಾಗಿ ಕೆಲಸ ಮಾಡಿದರೆ ಯಾರ ಟೇಬಲ್‍ಗೂ ಹಣ ಕೊಡದಂತೆ ಎರಡು ನಿಮಿಷದೊಳಗೆ ನಾನೇ ನಿಮಗೆ ಹಣ ಕೊಡಿಸುತ್ತೇನೆ. ಸರ್ಕಾರ ನಿಮ್ಮೊಂ ದಿಗಿದೆ ಎಂದು ಹೇಳಿದರು.

ವಿದ್ಯುತ್ ಸೌಲಭ್ಯ ಕಲ್ಪಿಸಿ: ನಗರದ ರಿಂಗ್ ರಸ್ತೆಯ ಸಮೀಪದಲ್ಲಿನ ಖಾಸಗಿ, ಮುಡಾ ಬಡಾ ವಣೆಗಳಿದ್ದು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಗಳ ಕೊರತೆಯಿದೆ ಎಂದು ಸಾರ್ವಜನಿಕರು ತಿಳಿಸಿದ್ದು, ಸೆಸ್ಕ್ ಅಧಿಕಾರಿಗಳು ಸಾಧ್ಯವಾದಷ್ಟು ವಿದ್ಯುತ್ ಸೌಲಭ್ಯ ಒದಗಿಸುವಂತೆ ಸೂಚಿಸಿದರು.

ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಡಾ. ಹೆಚ್.ಎನ್. ಗೋಪಾಲಕೃಷ್ಣ ಮಾತನಾಡಿ, ಸಾರ್ವಜನಿಕರು ದೀಪಾಲಂಕಾರ ನೋಡಿ ಆನಂದಿಸಬೇಕೇ ಹೊರತು ವಿದ್ಯುತ್ ದೀಪಗಳನ್ನು ಮುಟ್ಟಬಾರದು. ಯಾವುದೇ ತರಹದ ಅನಾಹುತಕ್ಕೆ ಎಡೆಮಾಡಿ ಕೊಡದೆ ಸಹ ಕರಿಸಬೇಕು ಎಂದು ಮನವಿ ಮಾಡಿದರು. ಪ್ರತಿ ವೃತ್ತಗಳಲ್ಲಿ ಎಇ ಮತ್ತು ಲೈನ್‍ಮನ್‍ಗಳನ್ನು ನಿಯೋ ಜಿಸಲಾಗುವುದು. ವಿದ್ಯುತ್ ಸೇವೆಯ ವಾಹನಗಳು ದಿನದ 24 ಗಂಟೆಯೂ ಸೇವೆಯಲ್ಲಿರುತ್ತವೆ ಎಂದರು. ಸಭೆಯಲ್ಲಿ ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Translate »