ಕೇರಳದ ಬೇಕಲ್ ಬೀಚ್‍ನಲ್ಲಿ ಪೂರ್ಣ ಗ್ರಹಣ ವೀಕ್ಷಿಸಿದ ಮೈಸೂರು ಕುಟುಂಬ
ಮೈಸೂರು

ಕೇರಳದ ಬೇಕಲ್ ಬೀಚ್‍ನಲ್ಲಿ ಪೂರ್ಣ ಗ್ರಹಣ ವೀಕ್ಷಿಸಿದ ಮೈಸೂರು ಕುಟುಂಬ

December 27, 2019

ಮೈಸೂರು, ಡಿ.26(ಎಂಟಿವೈ)- ಬಹುತೇಕ ಕಡೆ ಮೋಡ ಕವಿದ ವಾತಾವರಣದಿಂದ ಪೂರ್ಣ ಗ್ರಹಣ ವೀಕ್ಷಿಸಲು ಸಾಧ್ಯ ವಾಗದೆ ಸಾಕಷ್ಟು ಮಂದಿ ನಿರಾಸೆಗೊಂಡರೆ, ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ಕುಟುಂಬದ 12 ಮಂದಿ ಕೇರಳದ ಬೇಕಲ್ ಬೀಚ್‍ನಲ್ಲಿ ಪೂರ್ಣ ಪ್ರಮಾಣದ ಕಂಕಣ ಸೂರ್ಯ ಗ್ರಹಣ ವೀಕ್ಷಿಸಿ, ಭಾಗ್ಯಶಾಲಿಗಳಾದರು.

ಮುಂಜಾನೆಯಷ್ಟೇ ಕೇರಳ ಪ್ರವಾಸಕ್ಕೆ ಕುಟುಂಬ ಸದಸ್ಯರೊಂದಿಗೆ ತೆರಳಿದ್ದ ಪ್ರಾದೇಶಿಕ ಶಿಕ್ಷಣ ಸಂಸ್ಥೆ(ಆರ್‍ಐಇ) ಯ ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಎನ್.ಪ್ರಸಾದ್, ಗ್ರಹಣ ವೇಳೆಗೆ ಬೇಕಲ್ ಬೀಚ್ ತಲುಪಿದ್ದರು. ಗ್ರಹಣ ಆರಂಭಕ್ಕೂ ಮುನ್ನ ಸೌರ ಕನ್ನಡಕ ಧರಿಸಿ, ಗ್ರಹಣ ವೀಕ್ಷಣೆಗೆ ಅಗತ್ಯ ಉಪಕರಣ ಅಳವಡಿಸಿದ್ದರು. ಗ್ರಹಣ ಆರಂಭವಾಗುತ್ತಿದ್ದಂತೆ ಆಗಸ ಶುಭ್ರವಾಗಿ ದ್ದರಿಂದ ಸಾಕಷ್ಟು ಸಮಯ ಪೂರ್ಣಗ್ರಹಣ ವೀಕ್ಷಿಸಿದ್ದಾರೆ. ಅಲ್ಲದೆ ಗ್ರಹಣದ ದೃಶ್ಯವನ್ನು ಕ್ಯಾಮರಾದಲ್ಲಿ ಸುದೀರ್ಘ ಸೆರೆ ಹಿಡಿದಿದ್ದಾರೆ.

ಈ ಕುರಿತಂತೆ ಡಾ.ಪ್ರಸಾದ್ ಮತ್ತು ಎಂ.ಬಿ.ಮಹೇಶ್, ಬೇಕಲ್ ಬೀಚ್‍ನಿಂದಲೇ `ಮೈಸೂರು ಮಿತ್ರ’ನ ಸಂಪರ್ಕಿಸಿ, ಎರಡು ಕಾರಿನಲ್ಲಿ ಮೈಸೂರಿನಿಂದ ಕೇರಳದ ಬೇಕಲ್ ಬೀಚ್‍ಗೆ ಗ್ರಹಣ ಆರಂಭಕ್ಕೂ ಮುನ್ನ ತಲುಪಿದೆವು. ಆ ವೇಳೆ ಆಕಾಶ ಶುಭ್ರವಾಗಿತ್ತು ಬೆಳಿಗ್ಗೆ 8ರ ನಂತರ ಗ್ರಹಣ ಆರಂಭವಾದಾಗ ಪೂರ್ಣ ಪ್ರಮಾಣದಲ್ಲಿ ವೀಕ್ಷಿಸಿದೆವು ಎಂದು ಹರ್ಷ ವ್ಯಕ್ತಪಡಿಸಿ ದರು. ಡಾ. ಪ್ರಸಾದ್ ಅವರು 1980, 2009ರಲ್ಲಿ ಚೀನಾ 2016 ರಲ್ಲಿ ಇಂಡೋನೇಷ್ಯಾ, 2017ರಲ್ಲಿ ಅಮೇರಿಕಾದಲ್ಲಿ ಹಾಗೂ ಈಗ ಕೇರಳ ಸೇರಿದಂತೆ ಆರು ಬಾರಿ ಗ್ರಹಣ ವೀಕ್ಷಿಸಿದ್ದಾರೆ.

Translate »