ಮೈಸೂರು ಪಾಲಿಕೆ ಚುನಾವಣೆ : ಕೆಆರ್ ಕ್ಷೇತ್ರದಲ್ಲಿ ಬಿಜೆಪಿ ಎಲ್ಲಾ ವಾರ್ಡ್ ಗೆಲುವಿನ ಟಾರ್ಗೆಟ್-20
ಮೈಸೂರು

ಮೈಸೂರು ಪಾಲಿಕೆ ಚುನಾವಣೆ : ಕೆಆರ್ ಕ್ಷೇತ್ರದಲ್ಲಿ ಬಿಜೆಪಿ ಎಲ್ಲಾ ವಾರ್ಡ್ ಗೆಲುವಿನ ಟಾರ್ಗೆಟ್-20

August 15, 2018

ಮೈಸೂರು:  ಬಿಜೆಪಿ ಭದ್ರಕೋಟೆಯಾಗಿರುವ ಕೃಷ್ಣರಾಜ ಕ್ಷೇತ್ರದಲ್ಲಿ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಜಾತಿ ಮೀಸಲಾತಿಯ ಮೂಲಕ ಬಿಜೆಪಿಯನ್ನು ಕಟ್ಟಿ ಹಾಕಲು ಜೆಡಿಎಸ್ ಮತ್ತು ಕಾಂಗ್ರೆಸ್ ಸಂಚು ರೂಪಿಸಿದ್ದು, ಪಕ್ಷದ ಕಾರ್ಯಕರ್ತರು ಟಾರ್ಗೆಟ್-20 ಸೂತ್ರದೊಂದಿಗೆ ಅಭ್ಯರ್ಥಿಗಳ ಗೆಲುವಿಗೆ ಪಣ ತೊಡಬೇಕೆಂದು ಶಾಸಕ ಎಸ್.ಎ.ರಾಮದಾಸ್ ಸಲಹೆ ನೀಡಿದ್ದಾರೆ.

ಮೈಸೂರು ನಗರ ಪಾಲಿಕೆಯ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಗನ್‍ಹೌಸ್ ವೃತ್ತದ ಬಳಿ ಇರುವ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಕೃಷ್ಣರಾಜ ಕ್ಷೇತ್ರದ ವಿವಿಧ ವಾರ್ಡ್‍ಗಳಿಂದ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್. ಕ್ಷೇತ್ರದ ಜನತೆ ಇತಿಹಾಸದಲ್ಲೇ ಮೊದಲ ಬಾರಿಗೆ 26000 ಮತಗಳ ಅಂತರದಲ್ಲಿ ಗೆಲುವನ್ನು ಕೊಡುಗೆಯಾಗಿ ನೀಡುವ ಮೂಲಕ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಪಾಲಿಕೆ ಚುನಾವಣೆ ಸಮೀಪಿಸುತ್ತಿದೆ. ವಾರ್ಡ್ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಬದಲಾವಣೆಯ ನಂತರ ಕೆ.ಆರ್.ಕ್ಷೇತ್ರದಲ್ಲಿ 20 ವಾರ್ಡ್‍ಗಳಿವೆ. ಅವುಗಳಲ್ಲಿ 14 ವಾರ್ಡ್‍ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಅದರಲ್ಲಿ 7 ಹಿಂದುಳಿದ ವರ್ಗಕ್ಕೆ, 3 ಪರಿಶಿಷ್ಟ ಜಾತಿ ಹಾಗೂ 1 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಉಳಿದ 3 ವಾರ್ಡ್‍ಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಇದರಲ್ಲಿ ಬ್ರಾಹ್ಮಣ, ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಸ್ಪರ್ಧಿಸಬಹುದಾಗಿದೆ. ಇದನ್ನು ಗಮನಿಸಿದರೆ ಜಾತಿ ಮೀಸಲಾತಿಯ ಮೂಲಕ ಬಿಜೆಪಿಯನ್ನು ಟಾರ್ಗೆಟ್ ಮಾಡಿರುವುದು ಸಾಬೀತಾಗುತ್ತದೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ನಡೆಸಿರುವ ಹುನ್ನಾರವನ್ನು ಸವಾಲಾಗಿ ಸ್ವೀಕರಿಸಿ, ಟಾರ್ಗೆಟ್-20 (ಟಿ-20 ) ಪರಿಕಲ್ಪನೆಯೊಂದಿಗೆ ಎಲ್ಲಾ ವಾರ್ಡ್‍ಗಳಲ್ಲೂ ಗೆಲ್ಲುವ ಗುರಿಯೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಯಾರಿಗೆ ಟಿಕೆಟ್: ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವ ಆಕಾಂಕ್ಷಿಗಳ ಪೂರ್ವಪರಗಳನ್ನು ಗಮನಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಪಕ್ಷದಲ್ಲಿ ದುಡಿದಿರುವ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅಲ್ಲದೆ, ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಪ್ರತಿಯೊಂದು ವಾರ್ಡಿಗೆ 8 ಜನರ ಒಂದು ಸಮಿತಿ ಮಾಡಲಾಗಿದ್ದು, ಈ ಸಮಿತಿಯಲ್ಲಿ 4 ಜನ ಹಿರಿಯ ಮುಖಂಡರಿದ್ದು, ನಾಲ್ವರು ಸಂಘ ಸಂಸ್ಥೆಯ ಪ್ರತಿನಿಧಿಗಳಿರುತ್ತಾರೆ. ಈಗಾಗಲೇ ಸಮಿತಿಗಳ ಸಭೆ ನಡೆದಿದ್ದು, ಅಭ್ಯರ್ಥಿಗಳ ಪರಿಶೀಲಿಸಿದ ನಂತರ ಅಂತಿಮ ಪಟ್ಟಿ ನೀಡಲಿದ್ದಾರೆ. ನಾಳೆ ಸಂಜೆಯೊಳಗೆ ಒಂದು ವಾರ್ಡ್‍ಗೆ ಮೂವರು ಅಭ್ಯರ್ಥಿಗಳ ಹೆಸರನ್ನು ಸೂಚಿಸಲು ತಿಳಿಸಲಾಗಿದೆ. ಇದರಿಂದ ಸಾಮಾನ್ಯ ಕಾರ್ಯಕರ್ತನಿಗೂ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಲು ಅವಕಾಶ ದೊರೆಯಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ನಗರ ಪ್ರಧಾನ ಕಾರ್ಯದರ್ಶಿ ಮೈ.ಪು.ರಾಜೇಶ್, ಹಿರಿಯ ಮುಖಂಡರಾದ ಗೋಪಾಲ್‍ರಾವ್, ಸಂದೇಶ್ ಸ್ವಾಮಿ, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ನೂರ್ ಫಾತಿಮಾ, ಕೃಷ್ಣರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ವಿ.ಎನ್.ಕೃಷ್ಣ, ಪಾಲಿಕೆಯ ಮಾಜಿ ಸದಸ್ಯೆ ಎ.ವಿ.ವಿದ್ಯಾ ಅರಸ್, ರಾಜೇಶ್ ಜಾಧವ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Translate »