ಮೈಸೂರು ಜನರ ಹಿತದೃಷ್ಟಿಯಿಂದ  ರೇಸ್ ಕ್ಲಬ್ ಸ್ಥಳಾಂತರ: ಸಚಿವ ಸಾ.ರಾ.ಮಹೇಶ್ ಪುನರುಚ್ಚಾರ
ಮೈಸೂರು

ಮೈಸೂರು ಜನರ ಹಿತದೃಷ್ಟಿಯಿಂದ  ರೇಸ್ ಕ್ಲಬ್ ಸ್ಥಳಾಂತರ: ಸಚಿವ ಸಾ.ರಾ.ಮಹೇಶ್ ಪುನರುಚ್ಚಾರ

July 17, 2018

ಮೈಸೂರು:  ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ಮೈಸೂರಿನ ಜನರ ಹಿತದೃಷ್ಟಿಯಿಂದ ರೇಸ್‍ಕೋರ್ಸ್ ಕ್ಲಬ್ ಅನ್ನು ಸ್ಥಳಾಂತರ ಮಾಡುವುದಕ್ಕೆ ಮುಂದಾಗಿದ್ದೇನೆ. ಅನಧಿಕೃತ ಕಟ್ಟಡಗಳ ತೆರವಿಗೆ ಮೂರು ತಿಂಗಳು ಗಡುವು ನೀಡಲಾಗಿದ್ದು, ಗಡುವು ಪೂರ್ಣ ಗೊಂಡರೂ ತೆರವು ಮಾಡದೆ ಇದ್ದರೆ ಜಿಲ್ಲಾಡಳಿತದೊಂದಿಗೆ ಅಕ್ರಮ ಕಟ್ಟಡಗಳ ನೆಲಸಮ ಮಾಡಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಪುನರುಚ್ಚರಿಸಿದ್ದಾರೆ.

ಹೊಟೇಲ್ ಮಾಲೀಕರ ಸಂಘದ ಆವರಣದಲ್ಲಿ ಭಾನುವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ರೇಸ್‍ಕೋರ್ಸ್ ಸ್ಥಳಾಂತರ ಮಾಡುವ ವಿಷಯದಲ್ಲಿ ನನ್ನ ಹಿತಾಸಕ್ತಿ ಅಡಗಿಲ್ಲ. ಮೈಸೂರಿನ ಜನರ ಒಳಿತಿಗಾಗಿ ಸರ್ಕಾರಿ ಭೂಮಿ ಯನ್ನು ಪ್ರವಾಸೋಧ್ಯಮದ ಅಭಿವೃದ್ಧಿಗೆ ಬಳಸಿಕೊಳ್ಳಲು ಬಯಸಿದ್ದೇವೆ. 139 ಎಕರೆ ಸರ್ಕಾರಿ ಭೂಮಿಯಲ್ಲಿ ರೇಸ್ ಕ್ಲಬ್ ನಡೆಸಲಾಗುತ್ತಿದೆ. ಅನಧಿಕೃತವಾಗಿ 600 ಟೆಂಟ್ ಗಳನ್ನು ನಿರ್ಮಾಣ ಮಾಡಲಾಗಿದೆ. 1800 ಮಂದಿ ವಾಸ ಮಾಡುತ್ತಿದ್ದಾರೆ. ಅಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲ, ಶೌಚಾಲಯ, ಒಳ ಚರಂಡಿ ವ್ಯವಸ್ಥೆ ಇಲ್ಲ. ಹೊರ ರಾಜ್ಯದಿಂದ ಬಂದಿರುವವರು ಇಲ್ಲಿ ನೆಲೆಸಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ ಯಾರಿಗೂ ತಿಳಿಯುವುದಿಲ್ಲ ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ತೆರವುಗೊಳಿಸುವುದಾಗಿ ಅವರು ಹೇಳಿದರು.

ಮೈಸೂರು ರಾಜವಂಶಸ್ಥರು ರೇಸ್ ಕ್ಲಬ್ ಸ್ಥಳಾಂತರ ಮಾಡುವುದು ಬೇಡ ಎಂದು ಹೇಳಿದ್ದಾರೆ. ಮಹಾರಾಜರು ರೇಸ್ ಕ್ಲಬ್‍ಗೆ ಒಮ್ಮೆ ಭೇಟಿ ಪರಿಶೀಲಿಸಿ ಅಲ್ಲಿನ ಪರಿಸ್ಥಿತಿ ತಿಳಿದುಕೊಂಡು ರೇಸ್‍ಕ್ಲಬ್ ಸ್ಥಳಾಂತರ ಬೇಡ ಎನ್ನಲಿ, ನಾವು ಸುಮ್ಮನಾಗುತ್ತೇವೆ ಎಂದು ಯದುವೀರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ನನ್ನ ಅವಧಿಯಲ್ಲಿ ಮೈಸೂರನ್ನು ಪ್ರವಾಸಿ ಕೇಂದ್ರ ಮಾಡಬೇಕೆಂಬ ಕನಸು ಕಂಡಿದ್ದೇನೆ. ಹೋಟೆಲ್ ಉದ್ಯಮಿ ಗಳು, ಕಾರ್ಮಿಕರು ಹಾಗೂ ಅವರ ಹಾಸ್ಪಿಟಾಲಿಟಿ ನೋಡಿಕೊಳ್ಳುವವರಿಗೆ ದೇಶ ವಿದೇಶದಿಂದ ಬರುವ ಪ್ರವಾಸಿಗರೊಡನೆ ಹೇಗೆ ನಡೆದುಕೊಳ್ಳಬೇಕೆಂದು ತರಬೇತಿ ನೀಡುವ ಕಡೆ ಗಮನ ಹರಿಸಬೇಕು. ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಎರಡು ದಿನ ಉಳಿದುಕೊಳ್ಳ ಬೇಕು. ಕನಿಷ್ಠ ಪಕ್ಷ ಒಂದು ದಿನವಾದರೂ ತಂಗಬೇಕು. ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹೊಂದಿz್ದÉೀನೆ. ಇದರಿಂದ ಉದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಮೈಸೂರು ಮತ್ತು ಕೊಡಗು ನಡುವೆ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

Translate »