ಮೈಸೂರು ಸಂಸ್ಥಾನ ಆಸ್ಥಾನ್ ವಿದ್ವಾನ್  ಪ್ರೊ.ವಿ.ನಾಗಭೂಷಣಾಚಾರ್ ನಿಧನ
ಮೈಸೂರು

ಮೈಸೂರು ಸಂಸ್ಥಾನ ಆಸ್ಥಾನ್ ವಿದ್ವಾನ್ ಪ್ರೊ.ವಿ.ನಾಗಭೂಷಣಾಚಾರ್ ನಿಧನ

March 17, 2020

ಮೈಸೂರು, ಮಾ.16- ಮೈಸೂರಿನ ಕೆ.ಟಿ.ಸ್ಟ್ರೀಟ್ ನಿವಾಸಿಯೂ ಆದ ಮೈಸೂರು ಸಂಸ್ಥಾನದ ಆಸ್ಥಾನ್ ವಿದ್ವಾನ್ ಆಗಿದ್ದ ಪ್ರೊ.ವಿ. ನಾಗಭೂಷಣಾಚಾರ್ ಅವರು ನಿನ್ನೆ (ಭಾನುವಾರ) ಧಾರವಾಡದ ತಮ್ಮ ಮೊಮ್ಮಗಳ ಮನೆಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಕೆ.ವೀರಪ್ಪಚಾರ್ ಮತ್ತು ಚೆನ್ನಾಜಮ್ಮ ಅವರ ಪುತ್ರರೂ, ನಾದ ಪ್ರವೀಣ ಎಂ.ವೆಂಕಟೇಶ ದೇವರ್ ಅವರ ಅಚ್ಚುಮೆಚ್ಚಿನ ಶಿಷ್ಯರೂ ಆಗಿದ್ದ ಪ್ರೊ.ನಾಗಭೂಷಣಾಚಾರ್ ಅವರು 1956 ರಿಂದ 1967ರವರೆಗೆ ಮೈಸೂರು ಸಂಸ್ಥಾನದ ‘ಆಸ್ಥಾನ್ ವಿದ್ವಾನ್’ ಆಗಿದ್ದರು. 1967ರಿಂದ 1992ರವರೆಗೆ ಮೈಸೂರು ವಿಶ್ವವಿದ್ಯಾನಿಲ ಯದ ಲಲಿತಕಲಾ ಕಾಲೇಜಿನಲ್ಲಿ ಉಪನ್ಯಾಸಕ, ಪ್ರವಾಚಕ, ಪ್ರಾಧ್ಯಾಪಕರಾಗಿದ್ದರಲ್ಲದೆ, ಕೊನೆಗೆ ಅದರ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಶುದ್ಧ ತಂಜಾವೂರು ಶೈಲಿಯ ಮೃದಂಗ ವಾದನದ ಜೊತೆಗೆ ಕೊನಕೋಲ್, ಖಂಜಿರ ಹಾಗೂ ಮೋರ್ಚಿಂಗ್‍ನಲ್ಲಿ ಪ್ರಾವೀಣ್ಯತೆ ಪಡೆದಿದ್ದರು.

ಶಾಸ್ತ್ರೀಯ ಸಂಗೀತವಲ್ಲದೆ, ನಾಟ್ಯಕ್ಕೂ ಮೃದಂಗ ಪಕ್ಕ ವಾದ್ಯವನ್ನು ನುಡಿಸುವಲ್ಲಿ ಸಿದ್ಧಹಸ್ತ ರಾಗಿದ್ದರು. ಸಂಗೀತ ದಿಗ್ಗಜರಾದ ಟಿ.ಚೌಡಯ್ಯ, ಮಹಾಲಿಂಗಂ, ಪಲ್ಲವಿ ಚಂದ್ರಪ್ಪ, ಡಿ.ಕೆ.ಪಟ್ಟಮ್ಮಾಳ್, ದಂಡಪಾಣಿ ದೇಶಿಕರ್, ಅಲತ್ತೂರು ಸಹೋದರರು, ದೊರೆಸ್ವಾಮಿ ಅಯ್ಯಂಗಾರ್ ಮುಂತಾದವರಿಗೆ ಪಕ್ಕ ವಾದ್ಯ ನುಡಿಸಿದ್ದರು. ನಾಟ್ಯ ಕ್ಷೇತ್ರದಲ್ಲಿ ಕೆ.ವೆಂಕಟ ಲಕ್ಷ್ಮಮ್ಮ, ನಂದಿನಿ ಈಶ್ವರ್, ಉಮಾರಾವ್ ಮುಂತಾದವರಿಗೂ ಪಕ್ಕ ವಾದ್ಯ ನುಡಿಸಿದ್ದರು.

1966ರಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯಲ್ಲಿ ತಮ್ಮ ಗುರುಗಳೊಂದಿಗೆ ಅವಧಾನ ಪ್ರಾತ್ಯಕ್ಷಿಕೆ ನೀಡಿರುವುದು ಉಲ್ಲೇಖಾರ್ಹ. ಶ್ರೀಯುತರು ಕರ್ನಾಟಕ ಕಲಾಶ್ರೀ, ಮೃದಂಗ ಕಲಾ ಸಿಂಧು ಅಲ್ಲದೆ, ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್, ಚೆನ್ನೈನ ಶೃತಿಲಯ ಸಂಸ್ಥೆಗಳಿಂದ ಸಮ್ಮಾನಿತರಾಗಿದ್ದರು. ಇವರ ನಿಧನದೊಂದಿಗೆ ಮೈಸೂರಿನ ಹಳೇ ತಲೆಮಾರಿನ ಶಾಸ್ತ್ರೀಯ ಪರಂಪರೆಯ ಕೊಂಡಿಯೊಂದು ಕಳಚಿದೆ. ಇವರ ಪತ್ನಿ ಹಿಂದೆಯೇ ಕಾಲವಾಗಿದ್ದರು. ಶ್ರೀಯುತರ ಪಾರ್ಥಿವ ಶರೀರವನ್ನು ಧಾರವಾಡ ದಿಂದ ಇಂದು ಮೈಸೂರಿಗೆ ತಂದು, ಮಧ್ಯಾಹ್ನ ಚಾಮುಂಡಿಬೆಟ್ಟ ತಪ್ಪಲಿನ ರುದ್ರಭೂಮಿ ಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Translate »