ಗೋಣಿಕೊಪ್ಪ: ದಕ್ಷಿಣ ಕೊಡಗಿನ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸಲು ನಡೆಸುತ್ತಿರುವ ರೈಲ್ವೆ ಮಾರ್ಗಕ್ಕೆ ಅಕ್ರಮವಾಗಿ ಸರ್ವೇ ನಡೆಸುತ್ತಿರುವ ಕಾರ್ಯದ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವಿರಾಜಪೇಟೆ ಕ್ಷೇತ್ರ ಬಿಜೆಪಿ ಎಚ್ಚರಿಕೆ ನೀಡಿದೆ.
ಕಾನೂರು, ಕೋತೂರು ಸುತ್ತಮುತ್ತ ಈಗಾಗಲೇ ಅನಧಿಕೃತ ವಾಗಿ ಸರ್ವೇ ನಡೆಸಲಾಗುತ್ತಿದ್ದು, ಬೆಳೆಗಾರರು ಕೃಷಿ ಭೂಮಿ ಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ವಿರಾಜಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕುಞಂಗಡ ಅರುಣ್ ಭೀಮಯ್ಯ ಸುದ್ದಿ ಗೋಷ್ಟಿಯಲ್ಲಿ ಆರೋಪಿಸಿದರು. ಮೈಸೂರು-ತಲಚೇರಿ ರೈಲ್ವೆ ಮಾರ್ಗ ಯೋಜನೆ ಬಗ್ಗೆ ಸಂಸತ್‍ನಲ್ಲಿ ಕೂಡ ಚರ್ಚೆಗೆ ಬಂದು ಅಂತಹ ಯೋಜನೆ ಇಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.
ವಿಧಾನಸಭೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಕೂಡ ಇದನ್ನು ವಿರೋಧಿಸಿದ್ದಾರೆ. ಆದರೂ ಇಂತಹ ಯೋಜನೆಯನ್ನು ಕೈಗೆತ್ತಿ ಕೊಂಡು ವಿರೋಧದ ನಡುವೆಯೂ ಕೃಷಿ ಭೂಮಿಯಲ್ಲಿ ಸರ್ವೇ ನಡೆಸುತ್ತಿರುವುದು ಖಂಡನೀಯ. ಜಿಲ್ಲಾಧಿಕಾರಿ ಮೌನ ಮುರಿದು ಕ್ರಮಕ್ಕೆ ಮುಂದಾಗಲಿ ಎಂದು ಆಗ್ರಹಿಸಿದರು. ಬಿಜೆಪಿ ರೈತ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಅಳಮೇಂಗಡ ವಿವೇಕ್ ಮಾತನಾಡಿ, ಸರ್ವೇ ನಡೆಸುತ್ತಿರುವ ಸಿಬ್ಬಂದಿಗೆ ಮಾಹಿತಿ ಕೊರತೆ ಇದೆ. ಅಕ್ರಮ ವಾಗಿ ಕಾಫಿ ತೋಟಕ್ಕೆ ನುಗ್ಗುವುದರ ವಿರುದ್ಧ ಕ್ರಮಕ್ಕೆ ಮುಂದಾ ಗಬೇಕಿದೆ. ಜಿಪಿಎಸ್ ಮೂಲಕ ಸರ್ವೇ ನಡೆಸುತ್ತಿರುವುದರಿಂದ ಯಾವ ಕಡೆಗಳಲ್ಲಿ ಸರ್ವೇ ನಡೆಯುತ್ತಿದೆ ಎಂಬುದು ಅರಿವಾಗು ತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಕಾಫಿ ಬೆಳೆಗಾರ ಮಾಚಿಮಾಡ ಸತೀಶ್ ಮಾತ ನಾಡಿ, ಹೈಟೆನ್ಷನ್ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ 15 ವರ್ಷ ಗಳ ಹಿಂದೆ ಕೂಡ ಇದೇ ರೀತಿ ಸರ್ವೇ ನಡೆಸಲಾಗಿತ್ತು. ಇದನ್ನೂ ಕೂಡ ಹೀಗೆ ಸರ್ವೇ ನಡೆಸಿ ಅನುಷ್ಠಾನಕ್ಕೆ ಮುಂದಾಗುವುದರಲ್ಲಿ ಅನುಮಾನವಿಲ್ಲ. ಖಾಸಗಿ ಜಾಗದಲ್ಲಿ ಸರ್ವೇಗೆ ಮುಂದಾದಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
1 ಕಿಮೀ ರೈಲ್ವೆ ಟ್ರ್ಯಾಕ್ ನಿರ್ಮಾಣಕ್ಕೆ 6.5 ಎಕರೆ ಜಾಗದ ಅವಶ್ಯಕತೆ ಇರುತ್ತದೆ. ಸಣ್ಣ ಬೆಳೆಗಾರರ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರದ ರೀತಿಯಲ್ಲಿ ಹಣ ನೀಡುವುದರಿಂದ ಜನರು ನಿರ್ಗತಿಕರಾಗುತ್ತಾರೆ ಎಂದು ನೋವು ತೋಡಿ ಕೊಂಡರು. ಗೋಷ್ಟಿಯಲ್ಲಿ ಕಾನೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಾಡ್ಯಮಾಡ ಭರತ್, ಬೆಳೆಗಾರ ಅಣ್ಣಳಮಾಡ ನವೀನ್ ಅಚ್ಚಯ್ಯ ಉಪಸ್ಥಿತರಿದ್ದರು.