ಮೈಸೂರು ವಿವಿ ಅಂತರ ಕಾಲೇಜುಗಳ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ
ಮೈಸೂರು

ಮೈಸೂರು ವಿವಿ ಅಂತರ ಕಾಲೇಜುಗಳ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ

September 6, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಹಮ್ಮಿಕೊಂಡಿರುವ ವಿವಿಯ ಅಂತರ ಕಾಲೇಜುಗಳ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಬುಧವಾರ ಚಾಲನೆ ದೊರೆಯಿತು. ಮೈಸೂರಿನ ಸ್ಪೋಟ್ರ್ಸ್ ಪೆವಿಲಿಯನ್ ಮೈದಾನದಲ್ಲಿರುವ ದೈಹಿಕ ಶಿಕ್ಷಣ ವಿಭಾಗದ ಜಿಮ್ನಾಷಿಯಂ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಸ್ಪರ್ಧೆಗಳಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಂದು ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಮಹಾನ್ ತತ್ವಜ್ಞಾನಿಯಾದ ದೇಶದ ಮೊದಲ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನವನ್ನು ದೇಶದಲ್ಲಿ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ. ವ್ಯಕ್ತಿತ್ವ ವಿಕಸನಕ್ಕೆ ಹಾಗೂ ದೈಹಿಕ-ಮಾನಸಿಕ ಆರೋಗ್ಯಕ್ಕೆ ದೈಹಿಕ ಚಟುವಟಿಕೆ ಅಗತ್ಯ. ಇಂತಹ ಅಗತ್ಯತೆ ಪೂರೈಸುವ ಕ್ರೀಡಾ ಚಟುವಟಿಕೆಗಳು ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯ ವೃದ್ಧಿಸಲು ಪೂರಕವಾಗಲಿವೆ ಎಂದು ಹೇಳಿದರು.

ಪ್ರಸ್ತುತ ಬಹುತೇಕ ಮಂದಿ ಸ್ಮಾರ್ಟ್ ಫೋನ್‍ನಲ್ಲೇ ತಲ್ಲೀನರಾಗುತ್ತಿದ್ದಾರೆ. ಆ ಮೂಲಕ ದೈಹಿಕ ವ್ಯಾಯಾಮ ನೀಡುವ ಕ್ರೀಡೆಗಳಿಂದ ದೂರಾಗುತ್ತಿದ್ದಾರೆ. ಕ್ರೀಡೆಯಲ್ಲಿ ಭಾಗವಹಿಸುವುದು ಕೇವಲ ಬಹುಮಾನಕ್ಕೆ ಎಂದುಕೊಳ್ಳಬಾರದು. ಇದಕ್ಕಿಂತಲೂ ಮಿಗಿಲಾಗಿ ಕ್ರೀಡೆಗಳು ನಮ್ಮಲ್ಲಿ ಜೀವನೋತ್ಸಾಹ ನೀಡುತ್ತವೆ ಎಂಬ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಬೇಕಿದೆ ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಪಾತಂಜಲಿ ಯೋಗ ಶಿಕ್ಷಣ ಕೇಂದ್ರ ಹಾಗೂ ಭಾರತೀಯ ಸಂಸ್ಕøತಿ ವಿದ್ಯಾಕೇಂದ್ರದ ಪ್ರಾಂಶುಪಾಲರೂ ಆದ ಯೋಗಾಚಾರ್ಯ ಪ್ರೊ.ಕೆ.ಕೇಶವ ಮೂರ್ತಿ ಮಾತನಾಡಿ, ಪ್ರತಿ ದಿನ ಒಂದು ಗಂಟೆ ಯೋಗಾಸನ ಮಾಡುವ ಮೂಲಕ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಯ್ದುಕೊಳ್ಳಬಹುದು. ಕ್ರೀಡೆಯಲ್ಲಿ ಸೋಲು-ಗೆಲುವು ಎಂಬುದನ್ನು ಬದಿಗೊತ್ತಿ ಉತ್ತಮ ಪ್ರದರ್ಶನ ನೀಡಲು ಆದ್ಯತೆ ನೀಡಿ ಎಂದು ಸಲಹೆ ನೀಡಿದರು.

ಸ್ಪರ್ಧೆಗಳು: ಕುಸ್ತಿ, ದೇಹದಾಢ್ರ್ಯ ಸ್ಪರ್ಧೆ, ಭಾರ ಎತ್ತುವ ಸ್ಪರ್ಧೆ, ಯೋಗಾಸನ, ಈಜು ಹಾಗೂ ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳು ನಡೆಯಲಿದ್ದು, ಮೈಸೂರು ವಿವಿಯ ವ್ಯಾಪ್ತಿಯ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ವಿವಿಧ ಕಾಲೇಜುಗಳ ಒಟ್ಟು 597 ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.

ಕುಸ್ತಿಯಲ್ಲಿ 179 ವಿದ್ಯಾರ್ಥಿಗಳು, 83 ವಿದ್ಯಾರ್ಥಿನಿಯರು, ದೇಹದಾಢ್ರ್ಯ ಸ್ಪರ್ಧೆಯಲ್ಲಿ 72 ವಿದ್ಯಾರ್ಥಿಗಳು, ಭಾರ ಎತ್ತುವ ಸ್ಪರ್ಧೆಯಲ್ಲಿ 112 ವಿದ್ಯಾರ್ಥಿಗಳು, ಯೋಗಾಸನ ಸ್ಪರ್ಧೆಯಲ್ಲಿ 31 ವಿದ್ಯಾರ್ಥಿಗಳು, 35 ವಿದ್ಯಾರ್ಥಿನಿಯರು, ಈಜು ಸ್ಪರ್ಧೆಯಲ್ಲಿ 51 ವಿದ್ಯಾರ್ಥಿಗಳು, 5 ವಿದ್ಯಾರ್ಥಿನಿಯರು ಹಾಗೂ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ 29 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ (ಕೆಲವು ಸ್ಪರ್ಧೆಗಳಲ್ಲಿ ವಿದ್ಯಾರ್ಥಿನಿಯರ ಪಾಲ್ಗೊಳ್ಳುವಿಕೆ ಇಲ್ಲ). ಈಜು ಸ್ಪರ್ಧೆ ಮೈಸೂರಿನ ಸರಸ್ವತಿಪುರಂನಲ್ಲಿರುವ ವಿವಿಯ ಈಜು ಕೋಳದಲ್ಲಿ ನಡೆಯಲಿದ್ದು, ಉಳಿದಂತೆ ಎಲ್ಲಾ ಸ್ಪರ್ಧೆಗಳು ಜಿಮ್ನಾಷಿಯಂ ಹಾಲ್ ಹಾಗೂ ದೈಹಿಕ ಶಿಕ್ಷಣ ವಿಭಾಗದ ಆವರಣದಲ್ಲಿ ನಡೆಯಲಿವೆ.

ಸೆ.7ರವರೆಗೆ ಸ್ಪರ್ಧೆಗಳು ನಡೆಯಲಿದ್ದು, ಅಂದು ಮಧ್ಯಾಹ್ನ 3.30ಕ್ಕೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಯೋಗಾಚಾರ್ಯ ಪ್ರೊ.ಕೆ.ಕೇಶವಮೂರ್ತಿ ತಮ್ಮ ಭಾಷಣದಲ್ಲಿ ಹಾಸ್ಯದ ಸನ್ನಿವೇಶವೊಂದನ್ನು ಪ್ರಸ್ತಾಪಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
`ಒಮ್ಮೆ ಕಾರ್ಯಕ್ರಮವೊಂದರ ಅತಿಥಿಯಾಗಿ ಭಾಗವಹಿಸಿದ್ದೆ. ಈ ವೇಳೆ ಭಾಷಣ ಮಾಡಲು ಆಹ್ವಾನಿಸಲಾಯಿತು. ಆಗ ಎಷ್ಟು ಸಮಯ ಮಾತನಾಡಬಹುದು ಎಂದು ಆಯೋಜಕರನ್ನು ಕೇಳಿದೆ. ಅದಕ್ಕೆ ಅವರು, ನಿಮಗೆ ನಾವು ಸಮಯ ನಿಗದಿ ಮಾಡಲಾದೀತೇ? ನೀವು ಯೋಗಾಚಾರ್ಯರು, ಹಲವು ಗ್ರಂಥಗಳ ಕರ್ತೃಗಳು ನೀವು ಎಂದೆಲ್ಲಾ ಗುಣಗಾನ ಮಾಡಿದರು. ಕೊನೆಗೆ ಐದು ನಿಮಿಷ ಕೊಡುತ್ತೇವೆ, ಮಾತನಾಡಿ ಎಂದರು’ ಎನ್ನುತ್ತಿದ್ದಂತೆ ಸಭಿಕರ ಸಾಲಿನಲ್ಲಿ ನಗೆ ಅಲೆ ಎದ್ದಿತು.

Translate »