ವನ್ಯ ಜೀವಿಗಳ ಮಾದರಿ ಪ್ರದರ್ಶನ `ಮೈಸೂರು ಉತ್ಸವ’ಕ್ಕೆ ಚಾಲನೆ
ಮೈಸೂರು

ವನ್ಯ ಜೀವಿಗಳ ಮಾದರಿ ಪ್ರದರ್ಶನ `ಮೈಸೂರು ಉತ್ಸವ’ಕ್ಕೆ ಚಾಲನೆ

June 16, 2018

ಮೈಸೂರು: ಕಾಡು ಪ್ರಾಣಿಗಳನ್ನು ನೋಡಲೆಂದು ಮೃಗಾಲ ಯಕ್ಕೆ ಹೋದರೂ ಅವುಗಳ ಗೀಳನ್ನು ಕೇಳುವುದು ಅಪರೂಪ. ಆದರೆ, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಿದ ರೋಬೋಟಿಕ್ ವನ್ಯ ಮೃಗಗಳ ಮೃಗಾಲಯವನ್ನೇ ನಿರ್ಮಿಸಿದ್ದು ಪ್ರಾಣಿಗಳ ಚಲನೆ, ಗೀಳಿನ ಅನುಭವ ಪಡೆಯಬಹುದು.

ಹೌದು! ಮಕ್ಕಳಲ್ಲಿ ನಿಸರ್ಗದ ಬಗ್ಗೆ ಅರಿವು ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಮೆ.ಫನ್‍ವಲ್ರ್ಡ್ ಅಂಡ್ ರೆಸಾಟ್ರ್ಸ್ ಇಂಡಿಯಾ ಪ್ರೈ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ವಿನೋದ್‍ಕುಮಾರ್ ಸಬರ್‍ವಾಲ್, ಇಂದಿನಿಂದ ಮೈಸೂರು ಉತ್ಸವ ವಸ್ತು ಪ್ರದರ್ಶನವನ್ನು ಆಯೋಜಿಸಿದ್ದು, ಇಲ್ಲಿ ಅತ್ಯಾಧುನಿಕ ರೊಬೋಟಿಕ್ ಯಂತ್ರಗಳಿಂದ ನಿರ್ಮಿಸಲಾದ ಆನೆಗಳು ತಲೆಯಾಡಿಸುತ್ತ ಘೀಳಿಸಿದರೆ, ಗೋರಿಲ್ಲಾ ಕಣ್ಣು ಮಿಟಕಿಸುತ್ತದೆ. ನಾಯಿ ಬೊಗಳುತ್ತದೆ. ಹ್ಞೂಂಕರಿಸುವ ಘೇಂಡಾಮೃಗ, ಬಂಗಾಳದ ಬಿಳಿ ಹುಲಿ, ನೀರಾನೆ, ಸಿಂಹ, ಕರಡಿ, ಮೊಸಳೆ ಮತ್ತಿತರೆ ಕಲಾಕೃತಿಗಳನ್ನು ಸುಂದರವಾಗಿ ರಚಿಸಿದ್ದು, ಪ್ರಕೃತಿಯ ಸಹಜ ಅನುಭವವನ್ನು ನೀಡುತ್ತವೆ.

ಜತೆಗೆ ವಿಶ್ವದ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾ ಗೋಪುರ ಮಾದರಿ, ಮದರ್ ತೆರೆಸಾ ಆಶೀರ್ವದಿಸುತ್ತಿರುವುದು, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸೇರಿದಂತೆ ನಾನಾ ಬಗೆಗಳಲ್ಲಿ 3ಡಿ ಚಿತ್ರಗಳನ್ನು ರಚಿಸಲಾಗಿದ್ದು, ಸೆಲ್ಫಿ ಫೋಟೊಗಳನ್ನು ನೈಜ ಚಿತ್ರಗಳಂತೆ ತೆಗೆದುಕೊಳ್ಳಬಹುದಾಗಿದೆ. ಜತೆಗೆ ಮಕ್ಕಳಿಗೆ ವಿವಿಧ ಬಗೆಯ ಆಟದ ವಸ್ತುಗಳೂ, ಹ್ಯಾಂಡ್‍ಲೂಮ್ಸ್, ಹ್ಯಾಂಡಿಕ್ರಾಫ್ಟ್, ಫುಡ್ ಕೋರ್ಟ್ ಸೇರಿದಂತೆ ಮತ್ತಿತರೆ ಮಳಿಗೆಗಳನ್ನು ತೆರೆಯಲಾಗಿದೆ. ಇಂದಿನಿಂದ ಆ.12ವರೆಗೆ ಅಂದರೆ 60 ದಿನಗಳ ಕಾಲ ಆಯೋಜಿಸಿದ್ದು, ಪ್ರತಿದಿನ ಸಂಜೆ 4ರಿಂದ ರಾತ್ರಿ 9.30ರವರೆಗೆ ವೀಕ್ಷಣೆಗೆ ಲಭ್ಯವಿದ್ದು, ಪ್ರವೇಶ ದರ 50 ರೂ. ನಿಗದಿಪಡಿಸಲಾಗಿದೆ.

ಈ ಮೈಸೂರು ಉತ್ಸವ ವಸ್ತು ಪ್ರದರ್ಶನಕ್ಕೆ ಪ್ರವಾಸೋಧ್ಯಮ ಸಚಿವ ಸಾರಾ ಮಹೇಶ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ವರ್ಷ ಪೂರ್ತಿ ವಸ್ತು ಪ್ರದರ್ಶನವನ್ನು ಆಯೋಜಿಸುವ ಜತೆಗೆ ಶ್ರೀ ಸುತ್ತೂರು, ಆದಿಚುಂಚನಗಿರಿ ಕ್ಷೇತ್ರ ಮತ್ತು ರಾಜ್ಯದಲ್ಲೇ ಹೆಸರುವಾಸಿಯಾದ ಸಿಲ್ಕ್ ಫ್ಯಾಕ್ಟರಿ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.

ಫನ್‍ವಲ್ರ್ಡ್ ಅಂಡ್ ರೆಸಾಟ್ರ್ಸ್ ಇಂಡಿಯಾ ಪ್ರೈ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಕುಮಾರ್ ಸಬರ್‍ವಾಲ್, ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಓ ಶಶಿಕುಮಾರ್, ಮೇಯರ್ ಭಾಗ್ಯವತಿ, ಮಾಜಿ ಉಪ ಮೇಯರ್ ವನಿತಾಪ್ರಸನ್ನ, ನಗರಪಾಲಿಕೆ ಸದಸ್ಯ ಮಾ.ವಿ.ರಾಮ್‍ಪ್ರಸಾದ್, ಮುತ್ತುರಾಜ್ ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.

Translate »