3ಕ್ಕಿಂತ ಹೆಚ್ಚು ನಾಯಿ ಸಾಕಬಾರದೇಕೆ?
ಮೈಸೂರು

3ಕ್ಕಿಂತ ಹೆಚ್ಚು ನಾಯಿ ಸಾಕಬಾರದೇಕೆ?

June 16, 2018

ಮೈಸೂರು: ನಾವು ಪ್ರಾಣಿಪ್ರಿಯರು. ಮೂರಕ್ಕಿಂತ ಹೆಚ್ಚು ನಾಯಿಗಳನ್ನು ಸಾಕಬಾರದೆಂದರೆ ಹೇಗೆ? ಎಂದು ಎನ್‍ಜಿಓ ಪ್ರಮುಖರು ಇಂದಿಲ್ಲಿ ಮೈಸೂರು ಮಹಾನಗರ ಪಾಲಿಕೆ ಪಶು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

ಮನೆಗಳಲ್ಲಿ ನಾಯಿಗಳನ್ನು ಸಾಕಲು ಪಾಲಿಕೆಯಿಂದ ಪೂರ್ವಾನುಮತಿ ಪಡೆಯ ಬೇಕೆಂಬ ನಿಯಮ ಜಾರಿಗೆ ತರಲು ಮುಂದಾ ಗಿರುವ ಹಿನ್ನೆಲೆಯಲ್ಲಿ ಮೈಸೂರಿನ ಬೋಗಾದಿ ಬಳಿ ಇರುವ ಪೀಪಲ್ ಫಾರ್ ಅನಿಮಲ್ (ಪಿಎಫ್‍ಎ) ಸಂಸ್ಥೆ ಆವರಣದಲ್ಲಿ ಏರ್ಪ ಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪ್ರಾಣಿಪ್ರಿಯ ಸರ್ಕಾರೇತರ ಸಂಘ-ಸಂಸ್ಥೆ ಪ್ರಮುಖರು ಪಾಲ್ಗೊಂಡು ನಾಯಿ ಗಳ ಸಾಗಾಣಿಕೆಗೆ ನಿಯಂತ್ರಣ ಹೇರು ವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ಸಮಜಾಯಿಷಿ ನೀಡಿದ ಮೈಸೂರು ಮಹಾನಗರ ಪಾಲಿಕೆ ಪಶು ವೈದ್ಯ ವಿಭಾಗದ ಸಹಾಯಕ ನಿರ್ದೇಶಕ ಡಾ. ಸುರೇಶ, ನಾಯಿಗಳನ್ನು ಸಾಕಲು ಅಭ್ಯಂತರವಿಲ್ಲ. ಆದರೆ ಅವುಗಳಿಗೆ ಅಗತ್ಯ ಸ್ಥಳಾವಕಾಶವಿರಬೇಕು. ಸಾರ್ವಜನಿಕರ ಮೇಲೆ ದಾಳಿ ನಡೆಸದಂತೆ ಎಚ್ಚರ ವಹಿಸ ಬೇಕು. ಸೂಕ್ತ ಆರೋಗ್ಯ ಚಿಕಿತ್ಸಾ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದರು.

ಮೂರು ಅಥವಾ ಹೆಚ್ಚು ನಾಯಿಗಳನ್ನು ಒಂದೇ ಮನೆಯಲ್ಲಿ ಸಾಕಬೇಕೆಂದರೆ ಕಟ್ಟಡ ನಿರ್ಮಿಸುವಾಗಲೇ ಅವುಗಳಿಗೆ ಸೂಕ್ತ ಸ್ಥಳಾವಕಾಶ ಒದಗಿಸಿ ನಕ್ಷೆ ಅನುಮೋದಿಸಿ ಕೊಳ್ಳುವುದು ಸೂಕ್ತ. ಗಾಳಿ, ಬೆಳಕು ಇರುವಂತೆ ಸೌಲಭ್ಯ ಒದಗಿಸಬೇಕು. ಈ ಹಿನ್ನೆಲೆಯಲ್ಲಿ ಪರವಾನಗಿ ಪಡೆದುಕೊಳ್ಳ ಬೇಕೆಂಬ ನಿಯಮ ಹೇರಲು ಮುಂದಾ ಗಿರುವುದಾಗಿ ಅವರು ತಿಳಿಸಿದರು.

ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದುಕೊಂಡ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಆದರೆ ಈ ಪ್ರಕ್ರಿಯೆ ಇನ್ನೂ ಪ್ರಾಥಮಿಕ ಹಂತದಲ್ಲಿರುವುದರಿಂದ ನಿಮ್ಮದೇ ನಾದರೂ ತಕರಾರುಗಳಿದ್ದರೆ, ಈಗಲೇ ಲಿಖಿತ ರೂಪದಲ್ಲಿ ಕೊಡಿ ಎಂದೂ ಡಾ. ಸುರೇಶ ತಿಳಿಸಿದರು.

ಪಿಎಫ್‍ಎ ಟ್ರಸ್ಟಿ ಸವಿತಾ ನಾಗ ಭೂಷಣ್, ಕಾರ್ಯಕರ್ತೆ ನಮಿತಾ ಸೇರಿದಂತೆ 10 ಮಂದಿ ಪ್ರಾಣಿ ಪ್ರಿಯ ಎನ್‍ಜಿಓಗಳ ಪ್ರಮುಖರು ಈ ವೇಳೆ ಭಾಗವಹಿಸಿದ್ದರು.

Translate »