ಆ.31ಕ್ಕೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಮೈಸೂರು

ಆ.31ಕ್ಕೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

August 28, 2018
  • ಆ.29ರ ಬೆಳಿಗ್ಗೆ 7 ಗಂಟೆಗೆ ಚುನಾವಣಾ ಬಹಿರಂಗ ಪ್ರಚಾರ ಅಂತ್ಯ
  • ಆ.30ರಂದು ಮೈಸೂರಿನ 4 ಕೇಂದ್ರಗಳಲ್ಲಿ ಮಸ್ಟರಿಂಗ್
  • ಆ.31ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ
  • ಸೆ.3ರಂದು ಮಹಾರಾಣಿ ವಾಣಿಜ್ಯ ಕಾಲೇಜು ಕಟ್ಟಡದಲ್ಲಿ ಮತ ಎಣಿಕೆ
  • ಮೈಸೂರು ನಗರದಲ್ಲಿ 815 ಮತಗಟ್ಟೆ, 7,98,673 ಮತದಾರರು

ಮೈಸೂರು: ಆಗಸ್ಟ್ 31ರಂದು ನಡೆಯಲಿರುವ ಮೈಸೂರು ಮಹಾ ನಗರ ಪಾಲಿಕೆ ಚುನಾವಣೆಗೆ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ.

ಕಳೆದ ಬಾರಿಯಂತೆ ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸುತ್ತಿದ್ದು, ಅಭ್ಯರ್ಥಿಗಳ ಹೆಸರಿನ ಜೊತೆಗೆ ಭಾವಚಿತ್ರಗಳನ್ನು ಅಳವಡಿಸುವುದು ಈ ಬಾರಿಯ ವಿಶೇಷ. ‘ನೋಟಾ’ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ವಿವಿ ಪ್ಯಾಟ್ ಯಂತ್ರವನ್ನು ಪಾಲಿಕೆ ಚುನಾವಣೆಯಲ್ಲಿ ಬಳಸುತ್ತಿಲ್ಲ.

ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್‍ಗಳಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಬಿಎಸ್‍ಪಿ, ಎಸ್‍ಡಿಪಿಐ ಸೇರಿದಂತೆ ವಿವಿಧ ಪಕ್ಷಗಳು ಹಾಗೂ ಪಕ್ಷೇತರ ಸೇರಿ ಒಟ್ಟು 393 ಅಭ್ಯರ್ಥಿಗಳು ಕಣದಲ್ಲಿದ್ದು, ಭಾರೀ ಚುನಾವಣಾ ಪ್ರಚಾರದ ಮೂಲಕ ಗೆಲುವಿಗೆ ಪಣತೊಟ್ಟು, ಮತದಾರನ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಮತದಾನ ಆರಂಭವಾಗುವ 48 ಗಂಟೆ ಮುಂಚೆ ಅಂದರೆ, ಆಗಸ್ಟ್ 29ರಂದು ಬೆಳಿಗ್ಗೆ 7 ಗಂಟೆಗೆ ಚುನಾವಣಾ ಬಹಿರಂಗ ಪ್ರಚಾರ ಅಂತ್ಯಗೊಳಿಸುವಂತೆ ಚುನಾ ವಣಾ ಆಯೋಗವು ಆದೇಶಿಸಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಆಗಸ್ಟ್ 30ರಂದು ಮೈಸೂ ರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವ ಹಣಾ ಕಾಲೇಜು ಹೊಸ ಕಟ್ಟಡ(ಪಡು ವಾರಹಳ್ಳಿ ಬಳಿ), ಜೆಎಲ್‍ಬಿ ರಸ್ತೆಯ ಮಹಾರಾಣಿ ಕಲಾ ಕಾಲೇಜು, ಮಹಾ ರಾಜ ಕಾಲೇಜು ಶತಮಾನೋತ್ಸವ ಭವನ ಹಾಗೂ ಸಿದ್ದಾರ್ಥನಗರದ ಟೆರಿಷಿಯನ್ ಕಾಲೇಜು ಕಟ್ಟಡಗಳಲ್ಲಿ ಮಸ್ಟರಿಂಗ್ ಮತ್ತು ಡೀಮಸ್ಟರಿಂಗ್ ಕಾರ್ಯ ನಡೆಯಲಿದೆ. ಆಗಸ್ಟ್ 31ರಂದು ಮೈಸೂರಿನ 725 ಮತ ಗಟ್ಟೆ, 90 ಆಕ್ಸಿಲರಿ ಮತಗಟ್ಟೆ ಸೇರಿ ಒಟ್ಟು 815 ಕೇಂದ್ರಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, 4,01,395 ಮಹಿಳೆಯರು, 98 ಇತರರು ಸೇರಿ 2018ರ ಆಗಸ್ಟ್ 20 ಪಟ್ಟಿಯನ್ವಯ ಒಟ್ಟು 7,98,673 ಮಂದಿ ತಮ್ಮ ಹಕ್ಕು ಚಲಾಯಿಸಬೇಕಾಗಿದೆ. ಸೆಪ್ಟೆಂಬರ್ 3ರಂದು ಬೆಳಿಗ್ಗೆ 8 ಗಂಟೆಯಿಂದ ಮೈಸೂರಿನ ಪಡು ವಾರಹಳ್ಳಿ ಬಳಿ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಸರ್ಕಾರಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹೊಸ ಕಟ್ಟಡ ದಲ್ಲಿ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಎಲ್ಲಾ 65 ವಾರ್ಡು ಗಳ ಪೂರ್ಣ ಫಲಿತಾಂಶದ ಪ್ರಕಟವಾ ಗುವ ನಿರೀಕ್ಷೆ ಇದೆ.

13 ಮಂದಿ ಚುನಾವಣಾಧಿಕಾರಿಗಳು, 13 ಮಂದಿ ಸಹಾಯಕ ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತೀ ಮತಗಟ್ಟೆಗೆ ಒಬ್ಬರು ಅಧ್ಯಕ್ಷಾಧಿಕಾರಿ (ಪ್ರಿಸೈಡಿಂಗ್ ಆಫೀಸರ್) ಹಾಗೂ ಮೂವರು ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾ ಗಿದೆ. ಈಗಾಗಲೇ ಅವರಿಗೆ ಎರಡು ಹಂತ ಗಳಲ್ಲಿ ತರಬೇತಿ ನೀಡಲಾಗಿದೆ ಎಂದು ಕೆ.ಹೆಚ್.ಜಗದೀಶ್ ತಿಳಿಸಿದರು. ಈಗಾ ಗಲೇ ವಿದ್ಯುನ್ಮಾನ ಮತಯಂತ್ರಗಳನ್ನು ಪರಿಶೀಲಿಸಿ ಕಾರ್ಯ ಕ್ಷಮತೆಯನ್ನು ಖಾತರಿಪಡಿಸಿಕೊಳ್ಳಲಾಗಿದ್ದು, ಆಯಾ ಚುನಾವಣಾಧಿಕಾರಿಗಳ ಸುಪರ್ದಿಗೆ ಒಪ್ಪಿಸಲಾಗಿದೆ. ಅಭ್ಯರ್ಥಿಗಳ ಹೆಸರು, ಚಿಹ್ನೆ, ಕ್ರಮಸಂಖ್ಯೆ ಹಾಗೂ ಭಾವಚಿತ್ರ ಸೆಟ್ ಮಾಡುವ ಕಾರ್ಯ ಮುಗಿದಿದೆ.

ಆ.31ರಂದು ಸಾರ್ವತ್ರಿಕ ರಜೆ ಘೋಷಣೆ

ಮೈಸೂರು: ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಆ.31ರಂದು ತುರ್ತು ಸೇವೆಗಳ ಹೊರತಾಗಿ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆಗಳು ಸೇರಿದಂತೆ ರಾಜ್ಯದ 21 ಜಿಲ್ಲೆಗಳ ಒಟ್ಟು 102 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಆ.31ರಂದು ನಡೆಯಲಿದ್ದು, ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಮತದಾರರು, ಮತ ಚಲಾಯಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ, ಅಂದು ಸಾರ್ವತ್ರಿಕ ರಜೆ ಘೋಷಿಸಿ, ಆದೇಶಿಸಿದೆ. ಹಾಗೆಯೇ ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಸರ್ಕಾರಿ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆಯೂ ಸೂಚಿಸಲಾಗಿದೆ.ಕಾರ್ಮಿಕ ಇಲಾಖೆ

ಸುತ್ತೋಲೆ: ಮತದಾನ ನಡೆಯಲಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೋಂದಾಯಿತ ಅರ್ಹ ಮತದಾರರಾಗಿರುವ ಎಲ್ಲಾ
ಕಾರ್ಮಿಕರಿಗೆ ಆ.31ರಂದು ವೇತನ ಸಹಿತ ರಜೆ ನೀಡುವಂತೆ ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ. ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಇತರೆ ಸಂಸ್ಥೆಗಳ ಕಾರ್ಮಿಕರಿಗೆ ಮತದಾನದ ದಿನದಂದು ವೇತನ ಸಹಿತ ರಜೆ ನೀಡುವ ಮೂಲಕ ಸಾಂವಿಧಾನಿಕ ಹಕ್ಕು ಚಲಾಯಿಸಲು ಅನುಕೂಲ ಮಾಡಿಕೊಡಬೇಕು. ಸೂಚನೆಯನ್ನು ದಿಕ್ಕರಿಸಿ, ಕಾರ್ಮಿಕರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

ಆಡಳಿತ ವರ್ಗದ ಕರ್ತವ್ಯ: ಚುನಾವಣೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಎಲ್ಲಾ ನೋಂದಾಯಿತ ಕಾರ್ಖಾನೆ, ಕೈಗಾರಿಕಾ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆಗಳು, ಖಾಸಗಿ ಕಂಪನಿಗಳಲ್ಲಿರುವ ಮತದಾರರಿಗೆ ಆ.31ರಂದು ವೇತನ ಸಹಿತ ರಜೆ ಮಂಜೂರು ಮಾಡುವುದು ಸಂಸ್ಥೆಯ ಆಡಳಿತ ವರ್ಗದ ಕರ್ತವ್ಯವಾಗಿದೆ. ನಿರಂತರ ಉತ್ಪಾದನೆ ಅನಿವಾರ್ಯವಾದರೆ ಪರ್ಯಾಯ ವ್ಯವಸ್ಥೆ ರೂಪಿಸಿಕೊಂಡು, ಕಾರ್ಮಿಕರಿಗೆ ಮತದಾನಕ್ಕೆ ಸಾಕಷ್ಟು ಸಮಯಾವಕಾಶ ಮಾಡಿಕೊಡಬೇಕೆಂದು ಕಾರ್ಖಾನೆಗಳು, ಬಾಯ್ಲರ್‍ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

Translate »