ಲಕ್ಷಾಂತರ ಭಕ್ತಾದಿಗಳ ಜಯ ಘೋಷದೊಂದಿಗೆ ವೈಭವದ ನಂಜನಗೂಡು ರಥೋತ್ಸವ
ಮೈಸೂರು

ಲಕ್ಷಾಂತರ ಭಕ್ತಾದಿಗಳ ಜಯ ಘೋಷದೊಂದಿಗೆ ವೈಭವದ ನಂಜನಗೂಡು ರಥೋತ್ಸವ

March 20, 2019

ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನಲ್ಲಿ ಮಂಗಳವಾರ ಜರುಗಿದ ಶ್ರೀಕಂಠೇಶ್ವರಸ್ವಾಮಿಯ ಗೌತಮ ಪಂಚಮಹಾರಥೋತ್ಸವ ಅದ್ಧೂರಿಯಾಗಿ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳು ರಥೋತ್ಸ ವದಲ್ಲಿ ಪಾಲ್ಗೊಂಡು, ತಮ್ಮ ಭಕ್ತಿಭಾವ ಮೆರೆದರು. ರಥದ ಹಗ್ಗ ಕಿತ್ತು ಕೆಲಕಾಲ ರಥೋತ್ಸವಕ್ಕೆ ಅಡಚಣೆಯಾದರೂ ಯಾವುದೇ ಅಹಿತಕರ ಘಟನೆ ಸಂಭವಿಸ ಲಿಲ್ಲ. ರಥ ಚಲನೆಯಲ್ಲಿ ವಿಳಂಬ ವಾದರೂ ಭಕ್ತರ ಹರ್ಷೋದ್ಘಾರ ದೊಂದಿಗೆ ಗೌತಮ ರಥ ಸೇರಿ ದಂತೆ ಪಂಚ ರಥಗಳು 11.35 ಗಂಟೆ ಸುಮಾರಿಗೆ ಸ್ವಸ್ಥಾನ ತಲುಪಿದವು. ಬೆಳಿಗ್ಗೆ 6.40 ರಿಂದ 7 ಗಂಟೆಯೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ದೇಗು ಲದ ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತ್ ನೇತೃತ್ವ ದಲ್ಲಿ ಆರ್ಚಕರ ವೃಂದ ಧಾರ್ಮಿಕ ವಿಧಿ-ವಿಧಾನವನ್ನು ಪೂರೈಸಿ ರಥಗಳಿಗೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಿ, ರಥದ ಚಾಲನೆಗೆ ಅನುವು ಮಾಡಿಕೊಟ್ಟರು. ಮೊದಲು ಗಣಪತಿ ರಥ ಚಾಲನೆ ಪಡೆಯಿತಾದರೂ ಅದರ ಬೆನ್ನ ಹಿಂದೆಯೇ ಆಗಮಿಸುವ ಶ್ರೀಸ್ವಾಮಿಯವರ ಗೌತಮ ಮಹಾ ರಥವು ಅಡಚಣೆಯೊಂದಿಗೆ ಎರಡು ಗಂಟೆ ವಿಳಂಬವಾಗಿ 9.20ರ ಸುಮಾರಿಗೆ ನಿಧಾನವಾಗಿ ಮುಂದೆ ಸಾಗಿತು.

ಗೌತಮ ರಥ ಚಲನೆಗೆ ಎರಡು ಜೆಸಿಬಿ ಬಳಕೆ: ಪ್ರತಿವರ್ಷ 8.30ರೊಳಗೆ ಸ್ವಸ್ಥಾನಕ್ಕೆ ತಲುಪುತ್ತಿದ್ದ ಪಂಚ ರಥಗಳು ಈ ಬಾರಿ ಹಗ್ಗ ತುಂಡಾಗಿ ವಿಳಂಬವಾಯಿತು. ಇದರಿಂದ ಬಿಸಿಲಿನ ತಾಪ ತಾಳದೆ ಪರಸ್ಥಳದಿಂದ ರಥ ಎಳೆಯಲು ಬಂದ ಭಕ್ತಾದಿಗಳು ಮರಳುತ್ತಿದ್ದರು. ಕೊನೆಗೆ ಸ್ಥಳೀಯ ಭಕ್ತಾದಿಗಳೇ ರಥ ಎಳೆಯುವ ಪರಿಸ್ಥಿತಿ ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ಎರಡು ಜೆಸಿಬಿ ಯಂತ್ರವನ್ನು ತರಿಸಿ, ರಥದ ಹಿಂಭಾಗದ ಗಾಲಿಗಳನ್ನು ನೂಕುತ್ತ ರಥದ ಮುಂಭಾಗ ಕಟ್ಟಿದ್ದ 17 ಇಂಚು ವ್ಯಾಸವುಳ್ಳ ಹಗ್ಗ ವನ್ನು ಜೈ ಶ್ರೀಕಂಠೇಶ್ವರ ಮಹಾರಾಜ್, ಜೈ ನಂಜುಂಡ, ಜೈ ಶ್ರೀಕಂಠ ಘೋಷಣೆಗಳನ್ನು ಕೂಗುತ್ತ ಎಳೆದು ಸ್ವಸ್ಥಾನಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು.

ಜಾತ್ರೆಯಲ್ಲಿ ದೇಗುಲದ ಆನೆ ಅನುಪಸ್ಥಿತಿ: ಸಂಪ್ರದಾಯದಂತೆ ಪ್ರತಿ ವರ್ಷ ಗೌತಮ ರಥದ ಹಿಂಭಾಗ ದೇಗುಲದ ಗೌರಿ ಆನೆ ಸಾಗುತ್ತಾ, ರಥವನ್ನು ನೂಕುತ್ತಿತ್ತು. ಭಕ್ತಾಧಿಗಳು ಹರ್ಷೋದ್ಘಾರದಿಂದ ಎಳೆಯುತ್ತಿದ್ದರು. ಆದರೆ ಈ ಬಾರಿ ಗೌರಿಗೆ ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ದೇಗುಲದ ಆಡಳಿತ ಮಂಡಳಿ ಬೇರೆಡೆಗೆ ಸ್ಥಳಾಂತರಿಸಿದೆ. ಗೌರಿ ಅನುಪಸ್ಥಿತಿಯೇ ರಥ ಚಲಿಸದಿರಲು ಕಾರಣ ಎಂದು ಭಕ್ತಾದಿಗಳು ಮಾತನಾಡಿಕೊಳ್ಳುತ್ತಿದ್ದರು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ಭಕ್ತರಲ್ಲದೆ, ನವ ದಂಪತಿಗಳು ಭಕ್ತಿ ಪೂರ್ವಕವಾಗಿ ನಮಿಸಿ ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಮೆರೆದರು.

ಜಾತ್ರೆಗೆ ಆಗಮಿಸಿದ ಪ್ರಮೋದಾದೇವಿ ಒಡೆಯರ್: ಪ್ರತಿ ವರ್ಷದಂತೆ ಈ ಬಾರಿಯೂ ದೊಡ್ಡ ಜಾತ್ರೆ ಹಿನ್ನಲೆಯಲ್ಲಿ ನಂಜುಂಡೇಶ್ವರಸ್ವಾಮಿ ದೇವಾಲಯದ ಮೇಲ್ಭಾಗದಲ್ಲಿರುವ ಬಿಲ್ವ ಪತ್ರೆ ಮರಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಪೂಜೆ ಸಲ್ಲಿಸಿ ನಾಡಿನ ಜನರಿಗೆ ಆರೋಗ್ಯ, ಆಯಸ್ಸು, ನೆಮ್ಮದಿ ಹಾಗೂ ಉತ್ತಮ ಮಳೆ ಬೆಳೆ ನೀಡಿ ಸಮೃದ್ಧಿ ನೀಡಲೆಂದು ಪ್ರಾರ್ಥಿಸಿ, ಪೂಜೆ ಸಲ್ಲಿಸಿದರು.

ಭಕ್ತರಿಗೆ ಪ್ರಸಾದ ವಿನಿಯೋಗ: ಬೆಂಗಳೂರಿನ ನಂಜುಂಡೇಶ್ವರ ಸೇವಾಸಂಘ, ಕಂದಾಯ ನೌಕರರ ಸಂಘ, ಬ್ರಾಹ್ಮಣರ ಯುವಕರ ಸಮಿತಿ, ನಂಜಂಡೇಶ್ವರ ಎಂಟರ್ ಪ್ರೈಸಸ್, ನೆಸ್ಲೆ ನೌಕರರು ಸೇರಿದಂತೆ ಅನೇಕ ಸಂಘಸಂಸ್ಥೆಗಳು ಬಿಸಿಲಿನ ಝಳಕ್ಕೆ ತತ್ತರಿಸಿದ ಭಕ್ತಾಧಿಗಳಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ಮೊಸರನ್ನ ಹಾಗೂ ಅನ್ನಸಂತರ್ಪಣೆ ಏರ್ಪಡಿಸಿದ್ದರು. ಜಾತ್ರೆಯಲ್ಲಿ ರಾಜಮಾತೆ ಶ್ರೀ ಪ್ರಮೋದಾದೇವಿ ಒಡೆಯರ್, ಶಾಸಕ ಬಿ.ಹರ್ಷವರ್ಧನ್, ದೇಗುಲದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಪುಟ್ಟನಿಂಗಶೆಟ್ಟಿ, ಸಮಿತಿಯ ಸದಸ್ಯರಾದ ಇಂದನ್ ಬಾಬು, ಗಿರೀಶ್, ಶಶಿರೇಖಾ, ಶ್ರೀಧರ್, ಮಂಜುಳಾಮಧು, ಜೆಡಿಎಸ್ ಮುಖಂಡ ನರಸಿಂಹ ಸ್ವಾಮಿ, ಆರ್.ವಿ.ಮಹದೇವಸ್ವಾಮಿ, ಉಪವಿಭಾಗಾಧಿಕಾರಿ ಶಿವೇಗೌಡ, ತಹಶೀಲ್ದಾರ್ ಮಹೇಶ್, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ, ಸಹಾಯಕ ಅಧಿಕಾರಿ ಗಂಗಯ್ಯ, ಮೈಸೂರು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಅಮಿತ್ ಸಿಂಗ್, ಡಿವೈಎಸ್‍ಪಿ ವೈದ್ಯನಾಥ್, ಸಿಪಿಐ ಶೇಖರ್, ಪಿಸಿಐಗಳಾದ ಶಿವಣ್ಣ, ಪುನೀತ್, ಸಂದೀಪ್, ನಗರಸಭಾ ಆಯುಕ್ತ ವಿಜಯ್, ಪಿಡಬ್ಲ್ಯಡಿ ಎ.ಇ.ಮಧನ್ ಮೋಹನ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

ಮೂರು ಬಾರಿ ತುಂಡಾದ ಗೌತಮ ರಥದ ಹಗ್ಗ
ಭಕ್ತರಲ್ಲಿ ಮನೆ ಮಾಡಿದ್ದ ಆತಂಕ
ಶ್ರೀಕಂಠೇಶ್ವರಸ್ವಾಮಿಯ ಗೌತಮ ಪಂಚ ಮಹಾರಥೋತ್ಸವಕ್ಕೆ ಆರಂಭ ದಲ್ಲೇ ವಿಘ್ನ ಎದುರಾಗಿ ಭಕ್ತಾದಿಗಳು ಆತಂಕಕ್ಕೀಡಾದ ಪ್ರಸಂಗವೂ ನಡೆಯಿತು.

ನಿಗದಿಯಂತೆ ಬೆಳಿಗ್ಗೆ 6.40 ಸುಮಾ ರಿಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯ ಗಳನ್ನು ನೆರವೇರಿಸಿ 7 ಗಂಟೆಯ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗೌತಮ ರಥ (ದೊಡ್ಡರಥ) ಸ್ವಲ್ಪ ದೂರ ಸಾಗುತ್ತಿದ್ದಂತೆ ಹಗ್ಗ ತುಂಡಾಗಿ ರಥ ಎಳೆಯುತ್ತಿದ್ದ ಭಕ್ತಾದಿಗಳು ಒಬ್ಬರ ಮೇಲೊಬ್ಬರು ಬಿದ್ದರು. ಈ ವೇಳೆ ಭಕ್ತಾದಿ ಗಳ ಕೆಳಗೆ ಸಿಲುಕಿದ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ
ಗಂಗಯ್ಯ ಅವರಿಗೆ ಸಣ್ಣ ಪುಟ್ಟ ಗಾಯಗಳಾದವು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಈ ವೇಳೆ ಸ್ಥಳದಲ್ಲೇ ಇದ್ದ ಶಾಸಕ ಹರ್ಷವರ್ಧನ್ ಅದೃಷ್ಟವಶಾತ್ ಅಪಾಯದಿಂದ ಪಾರಾದರು.

ನಂತರ ಹಗ್ಗ ಸರಿಪಡಿಸಿ ಒಂದು ಗಂಟೆ ವಿಳಂಬವಾಯಿತು. ಮತ್ತೆ ರಥ ಎಳೆಯಲಾರಂಭಿಸುತ್ತಿದ್ದಂತೆ ಮತ್ತೆ ಹಗ್ಗ ತುಂಡಾಯಿತು. ಇದರಿಂದ ಭಕ್ತಾದಿಗಳಲ್ಲದೆ, ಅಧಿಕಾರಿಗಳೂ ಗೊಂದಲಕ್ಕೀಡಾದರು. ಮತ್ತೆ ಹಗ್ಗ ಸರಿಪಡಿಸುವ ಕಾರ್ಯ ಮುಂದುವರಿಸಿದರು. ಆನಂತರವೂ ಮೂರನೇ ಬಾರಿಯೂ ಹಗ್ಗ ತುಂಡಾದಾಗ ಭಕ್ತಾದಿಗಳು ಆತಂಕ, ಗಾಬರಿಗೊಂಡರು. ದೇವಸ್ಥಾನ ಪೂಜಾ ಕಾರ್ಯಗಳಲ್ಲಿ ಲೋಪವುಂಟಾಗಿರಬಹುದು ಎಂದು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡ ಲಾರಂಭಿಸಿದರು. ಅಲ್ಲದೇ ಆಡಳಿತ ಮಂಡಳಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ಗೊಂಡು ಮಳೆ ಇಲ್ಲದೆ ಜನತೆ ತತ್ತರಿಸಿರುವ ಈ ವೇಳೆಯಲ್ಲೂ ದೇವರಿಗೆ ಅಪಚಾರವಾಗಿ ರಥ ಚಲಿಸುತ್ತಿಲ್ಲ. ಮತ್ತಿನ್ನೇನು ಗ್ರಹಚಾರ ಕಾದಿದೆಯೋ ಎಂಬ ಮಾತು ಭಕ್ತವೃಂದದಲ್ಲಿ ಕೇಳಿಬಂತು. ಈ ವೇಳೆ ದೂರದ ಊರಿನಿಂದ ಬಂದಿದ್ದ ಬಹುತೇಕ ಭಕ್ತಾದಿಗಳು ಜಾಗ ಖಾಲಿ ಮಾಡಿದರು. ಕೊನೆಗೆ ಸ್ಥಳೀಯ ಭಕ್ತಾದಿಗಳೇ ರಥವನ್ನು ಜೆಸಿಬಿ ಸಹಾಯದಿಂದ ಸ್ವಸ್ಥಾನ ಸೇರಿಸುವಲ್ಲಿ ಯಶಸ್ವಿಯಾದರು.

Translate »