ಮೈಸೂರು: ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ `ಮಂಗಳೂರು ಇನ್ಸ್‍ಟಿಟ್ಯೂಟ್ ಆಫ್ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್’ (ಎಂಐಎಫ್‍ಎಸ್‍ಇ) ಸಂಸ್ಥೆಯ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಬುಧವಾರ 47ನೇ ರಾಷ್ಟ್ರೀಯ ಸುರಕ್ಷತಾ ದಿನ ಅಂಗವಾಗಿ ಮೈಸೂರಿನಲ್ಲಿ ರ್ಯಾಲಿ ನಡೆಸಿದರು.
`ಸುರಕ್ಷಿತ ಮತ್ತು ಆರೋಗ್ಯಕರ ವಾತಾವರಣ ಖಾತ್ರಿಪಡಿಸಲು ಒಟ್ಟಾಗಿ ಕೆಲಸ ಮಾಡಿ’ ಎಂಬ ವಿಷಯದ ಮೇಲೆ ನಡೆದ ರ್ಯಾಲಿಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಗುರುರಾಜ್ ಚಾಲನೆ ನೀಡಿದರು. ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಸಂಸ್ಥೆಯ ಆವರಣದಿಂದ ಹೊರಟ ರ್ಯಾಲಿ ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ ಮೂಲಕ ಮತ್ತೆ ಸಂಸ್ಥೆಯ ಆವರಣ ತಲುಪಿತು.
ಸುರಕ್ಷತೆ ನಮ್ಮ ಯೋಗಕ್ಷೇಮದ ಒಂದು ಭಾಗ ಎಂಬ ಉದ್ದೇಶ ಹೊಂದಿರುವ ರಾಷ್ಟ್ರೀಯ ಸುರಕ್ಷತಾ ದಿನ. ಸುರಕ್ಷತೆ ಮತ್ತು ಅಪಘಾತ ಕುರಿತು ಅರಿವು ಮೂಡಿಸುವ ವಿವಿಧ ಘೋಷ ವಾಕ್ಯಗಳಿರುವ ಕೈ ಫಲಕಗಳನ್ನು ವಿದ್ಯಾರ್ಥಿಗಳು ಹಿಡಿದಿದ್ದರು.
ಮಾ.4ರಿಂದ ಮಾ.11ರವರೆಗೆ ರಾಷ್ಟ್ರೀಯ ಸುರಕ್ಷತಾ ದಿನ ಸಪ್ತಾಹವನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಎಂಐಎಫ್‍ಎಸ್‍ಇ ಮುಖ್ಯಸ್ಥ ಸೈಯ್ಯದ್ ಅಬ್ದುಲ್ ಲತೀಫ್, ಬಿ.ಎಸ್.ಮುರಳಿ, ಅಂತೋಣಿ ಪ್ರವೀಣ್‍ಕುಮಾರ್, ಇ.ಕವಿತಾ, ಎಂ.ಎಸ್.ಮಾನಸ, ವಿನೋದ್‍ಕುಮಾರ್ ಇನ್ನಿತರರು ಭಾಗವಹಿಸಿದ್ದರು.