ದಕ್ಷಿಣ ಭಾರತದ ಮೇಲೆ ಗಾಂಧಿ ಪ್ರಭಾವ  ಮೈಸೂರು ಗಾಂಧಿ ಅಧ್ಯಯನ ಕೇಂದ್ರದಿಂದ   ಫೆ.25ಕ್ಕೆ ರಾಷ್ಟ್ರೀಯ ವಿಚಾರ ಸಂಕಿರಣ
ಮೈಸೂರು

ದಕ್ಷಿಣ ಭಾರತದ ಮೇಲೆ ಗಾಂಧಿ ಪ್ರಭಾವ ಮೈಸೂರು ಗಾಂಧಿ ಅಧ್ಯಯನ ಕೇಂದ್ರದಿಂದ  ಫೆ.25ಕ್ಕೆ ರಾಷ್ಟ್ರೀಯ ವಿಚಾರ ಸಂಕಿರಣ

February 23, 2020

ಮೈಸೂರು, ಫೆ.22(ಆರ್‍ಕೆಬಿ)- ಮಹಾತ್ಮ ಗಾಂಧಿ ಅವರ 150ನೇ ವರ್ಷದ ಜಯಂತಿ ಪ್ರಯುಕ್ತ ಫೆ.25ರಂದು ಬೆಳಿಗ್ಗೆ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ `ದಕ್ಷಿಣ ಭಾರತದ ಮೇಲೆ ಗಾಂಧೀಜಿ ಪ್ರಭಾವ’ ಕುರಿತು ರಾಷ್ಟ್ರೀಯ ವಿಚಾರ ಸಂಕಿ ರಣ ಆಯೋಜಿಸಲಾಗಿದೆ ಎಂದು ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ ಮತ್ತು ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಕಾಲೇಜ್ ಆಫ್ ಎಜುಕೇಷನ್ ಜಂಟಿ ಆಶ್ರಯದ ವಿಚಾರಗೋಷ್ಠಿಯಲ್ಲಿ 6 ಪ್ರಬಂಧಗಳು ಮಂಡನೆಯಾಗಲಿವೆ. ದ್ರಾವಿಡರ ನೆಲೆಯಾದ ದಕ್ಷಿಣ ಭಾರತಕ್ಕೆ ಗಾಂಧಿ 80ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ. ಕರ್ನಾಟಕಕ್ಕೆ 16, ತಮಿಳುನಾಡಿಗೆ 20, ಕೇರಳಕ್ಕೆ 7, ಅವಿಭಜಿತ ಆಂಧ್ರಪ್ರದೇಶಕ್ಕೆ 20ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ. ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ, ಧಾರ್ಮಿಕ, ಆಧ್ಯಾತ್ಮಿಕ ನೆಲೆಯ ಭೇಟಿಗಳಲ್ಲಿ ಗಾಂಧೀಜಿ ಗ್ರಾಮೀಣ ಪ್ರದೇಶಗಳಿಗೂ ಭೇಟಿ ನೀಡಿದ್ದಾರೆ. ಲಕ್ಷಾಂತರ ಜನರ ಮೇಲೆ ತಮ್ಮ ಸರಳ ಜೀವನ, ಸತ್ಯಾಗ್ರಹ, ಅಹಿಂಸೆ, ಪ್ರೀತಿ ಸಂಬಂಧದ ಪ್ರಭಾವ ಬೀರಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸುವ, ಅಧ್ಯಕ್ಷತೆ ವಹಿಸುವ, ಪ್ರತಿಕ್ರಿಯೆಯಲ್ಲಿ ಭಾಗಿಯಾಗುವ ಹಿರಿ-ಕಿರಿಯ ತಲೆಮಾರಿನ ವಿದ್ವಾಂಸರುಗಳಿಂದ ಗಾಂಧಿ ಕುರಿತು ಹೊಸ ವಿಚಾರಗಳು ಬೆಳಕಿಗೆ ಬರಲಿವೆ ಎಂದು ನಿರೀಕ್ಷೆ ಹೆಚ್ಚಿಸಿದರು.

ಅಂದು ಗಾಂಧಿಮಾರ್ಗಿ ಸರೋಜಮ್ಮ ತುಳಸಿದಾಸಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರಗೋಷ್ಠಿಗೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಬೆಳಿಗ್ಗೆ 10 ಗಂಟೆಗೆ ಚಾಲನೆ ನೀಡುವರು. ಕಾಗಿನೆಲೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಂ.ಪುಟ್ಟಬಸವೇಗೌಡ, ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ ಕಾಲೇಜ್ ಆಫ್ ಎಜುಕೇಷನ್ ಪ್ರಾಂಶುಪಾಲರಾದ ಕೆ.ಕೆ.ವಿಶಾಲಾಕ್ಷಿ ಉಪಸ್ಥಿತರಿರುವರು ಎಂದರು.

ಬೆಳಿಗ್ಗೆ 10.45ಕ್ಕೆ ಗಾಂಧಿಮಾರ್ಗಿ ಪ್ರೊ.ಜಿ.ಬಿ.ಶಿವರಾಜು ಅಧ್ಯಕ್ಷತೆಯ ಮೊದಲ ಗೋಷ್ಠಿಯಲ್ಲಿ ನಿವೃತ್ತ ಪ್ರಾಧ್ಯಾಪಕ ಎನ್.ಎಸ್.ರಂಗರಾಜು `ಕರ್ನಾಟಕದಲ್ಲಿ ಗಾಂಧಿ ಪ್ರಭಾವ’ ಕುರಿತು ಹಾಗೂ ಚೆನ್ನೈ ವಿವಿ ಸಹ ಪ್ರಾಧ್ಯಾಪಕ ಎಂ.ರಂಗಸ್ವಾಮಿ `ತಮಿಳು ನಾಡು ಮತ್ತು ಪುದುಚೆರಿಯಲ್ಲಿ ಗಾಂಧೀಜಿ ಪ್ರವಾಸ ಕುರಿತು ವಿಷಯ ಮಂಡಿಸುವರು. ಮಧ್ಯಾಹ್ನ 2.30ಕ್ಕೆ ಎರಡನೇ ಗೋಷ್ಠಿಯಲ್ಲಿ `ತೆಲಂಗಾಣದಲ್ಲಿ ಗಾಂಧೀಜಿ ಪ್ರಭಾವ’ ಕುರಿತು ತೆಲಂಗಾಣ ಉಸ್ಮಾನಿಯ ವಿವಿ ಪ್ರಾಧ್ಯಾಪಕ ಲಿಂಗಣ್ಣ ಗೋನಾಳ್, `ಆಂಧ್ರಪ್ರದೇಶ ದಲ್ಲಿ ಗಾಂಧೀಜಿ ಪ್ರಭಾವ’ ಕುರಿತು ಕುಪ್ಪಂ ದ್ರಾವಿಡ ವಿವಿ ಪ್ರಾಧ್ಯಾಪಕ ಎನ್.ಸುನೀಲ, ಕೇರಳದ ಕಾಸರಗೋಡು ಸರ್ಕಾರಿ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ರತ್ನಾಕರ ಮಲ್ಲಮೂಲೆ ಅವರು `ಕೇರಳದಲ್ಲಿ ಗಾಂಧೀಜಿ ಪ್ರಭಾವ’ ಕುರಿತು ವಿಚಾರ ಮಂಡಿಸುವರು. ಪ್ರಗತಿಪರ ಚಿಂತಕ ಪ್ರೊ.ಕೆ.ಸಿ.ಬಸವರಾಜು ಅಧ್ಯಕ್ಷತೆ ವಹಿಸುವರು. ಸಂಜೆ 4.45ಕ್ಕೆ ಗಾಂಧಿಮಾರ್ಗಿ ಕೆ.ಟಿ.ವೀರಪ್ಪ ಸಮಾರೋಪ ಭಾಷಣ ಮಾಡುವರು. ಪ್ರಗತಿಪರ ಚಿಂತಕ ಹೆಚ್.ಎಂ.ರುದ್ರಸ್ವಾಮಿ ಅತಿಥಿಯಾಗಿದ್ದರೆ, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಅಧ್ಯಕ್ಷತೆ ವಹಿಸುವರು ಎಂದರು. ಕೆ.ಟಿ.ವೀರಪ್ಪ, ಕೆ.ಕೆ.ಮೀನಾಕ್ಷಿದೇವಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Translate »