ಕೊಡವರ ಕುರಿತ `ನಾವ್ಯಾರು ಕೊಡವರು’ ಕೃತಿ ಬಿಡುಗಡೆ
ಮೈಸೂರು

ಕೊಡವರ ಕುರಿತ `ನಾವ್ಯಾರು ಕೊಡವರು’ ಕೃತಿ ಬಿಡುಗಡೆ

November 26, 2018

ಮೈಸೂರು: ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಅಮೇರಿಕಾ ನಿವಾಸಿ ಮಾಳೇಟಿರ ಬಿ.ತಿಮ್ಮಯ್ಯ ಅವರು ರಚಿಸಿರುವ `ನಾವ್ಯಾರು ಕೊಡವರು’ (ಕನ್ನಡ) ಮತ್ತು `ಹು ಆರ್ ವಿ ಕೊಡವಾಸ್’(ಇಂಗ್ಲಿಷ್) ಕೃತಿಗಳನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.

ಡಿ.ಎಂ.ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಅವರು ಕೃತಿಗಳನ್ನು ಬಿಡುಗಡೆಗೊಳಿಸಿದರು.

ನಂತರ ಕೆ.ಬಿ.ಗಣಪತಿ ಅವರು ಮಾತನಾಡಿ, ಕೊಡವರಿಗೆ ಸಂಬಂಧಿಸಿದಂತೆ ಪುಸ್ತಕ ಬರೆಯುವುದು ಸಾಮಾನ್ಯದ ಕೆಲಸವಲ್ಲ. ಅನೇಕರು ಕೊಡವರ ಸಾಮಾಜಿಕ ಜೀವನ, ಕಲೆ, ಸಂಸ್ಕøತಿ, ಭಾಷೆ ಕುರಿತು ಬರೆದಿದ್ದಾರೆ. ಆದರೆ, ಕೊಡವರ ಮೂಲವನ್ನು ನಿಖರವಾಗಿ ತಿಳಿಯಲು ಇದುವರೆಗೂ ಸಾಧ್ಯವಾಗಿಲ್ಲ ಎಂದರು. ಕೊಡವರ ಚರಿತ್ರೆ, ಕಲೆ, ಸಂಸ್ಕøತಿಯ ಜತೆಗೆ ಒಬ್ಬ ವ್ಯಕ್ತಿಯನ್ನು ತೆಗೆದುಕೊಂಡರೂ ವಿಶೇಷತೆ ಕಾಣಿಸುತ್ತದೆ. ಅಲ್ಲದೆ, ಸುತ್ತಮುತ್ತಲಿನ ಜನರಿಗೆ ಕೊಡವರನ್ನು ಹೋಲಿಸಿದರೆ ಶಾರೀರಿಕವಾಗಿ, ನಡೆ-ನುಡಿ, ಹಾವ-ಭಾವ ಎಲ್ಲದರಲ್ಲಿಯೂ ವಿಶೇಷವಾಗಿ ಗುರುತಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಕೊಡವರು ಯಾರು. ಮೂಲ ಯಾವುದು. ಎಲ್ಲಿಂದ ಬಂದರು. ಜೀವಿಸಲು ಕಷ್ಟವಾಗುವ ಗುಡ್ಡಗಾಡು ಪ್ರದೇಶಗಳಲ್ಲಿ ಯಾಕೆ ನೆಲೆಸಿದ್ದಾರೆ ಎಂಬ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿದ್ದರಿಂದ ಅನೇಕ ವಿದ್ವಾಂಸರು, ಸಂಶೋಧಕರು ಸರ್ವಪ್ರಯತ್ನ ನಡೆಸಿ ಸಂಶೋಧನೆ ಮಾಡಿದ್ದಾರೆ. ಎ.ಕೆ.ಸುಬ್ಬಯ್ಯ ಅವರು ಶ್ರಮಪಟ್ಟು ಕೊಡವರ ಕುರಿತು ಪುಸ್ತಕವನ್ನು ಬರೆದಿದ್ದಾರೆ. ಆದರೂ ಇದುವರೆಗೂ ಕೊಡವರ ಮೂಲದ ಬಗ್ಗೆ ತಿಳಿಸಲು ಸಾಧ್ಯ ವಾಗಿಲ್ಲ. ಇದು ಪ್ರಶ್ನೆಯಾಗೆ ಉಳಿದಿದೆ. ಇಂತಹ ಕಠಿಣ ಪ್ರಶ್ನೆಗೆ ಉತ್ತರಿಸುವ ಕೆಲಸಕ್ಕೆ ಲೇಖಕ ಮಾಳೇಟಿರ ಬಿ. ತಿಮ್ಮಯ್ಯ ಅವರು ಕೈ ಹಾಕಿದ್ದು, `ಗಂಗಾನದಿಯ ಪರಿಸರ’ದಿಂದ ಬಂದವರೆಂದು ಉಲ್ಲೇಖಿಸಿದ್ದಾರೆ. ಇದೊಂದು ಹೊಸ ಚಿಂತನೆ. ನಿಜವೂ ಇರಬಹುದು ಅನಿಸುತ್ತದೆ ಎಂದರು. ಏಕೆಂದರೆ, ಕೊಡಗಿನ ಪವಿತ್ರವಾದ ನದಿ ಕಾವೇರಿ. ನಾವು ಒಳ್ಳೆದು-ಕೆಟ್ಟದ್ದಕ್ಕೂ ಹೋಗೋದು ತಲಕಾವೇರಿಗೆ. ಹಾಗಾಗಿ ತಿಮ್ಮಯ್ಯ ಅವರದ್ದು ಇದೊಂದು ವಿಶೇಷ ಚಿಂತನೆ. ಇದರ ಬಗ್ಗೆ ಮತ್ತಷ್ಟು ಸಂಶೋಧನೆ ಮಾಡುವುದು ಒಳ್ಳೆಯದು ಎಂದು ಹೇಳಿದರು.

ಕಥೆಗಳನ್ನು ಕಲ್ಪನೆ ಮಾಡಿಕೊಂಡೇ ಬರೆಯಬಹುದು. ಆದರೆ, ಪುಸ್ತಕ ಬರೆಯುವುದು ಅಷ್ಟು ಸುಲಭವಲ್ಲ. ಆದರೆ, ಲೇಖಕ ತಿಮ್ಮಯ್ಯ ಅವರು ಅಧ್ಯಯನ ಮಾಡಿ ಪುಸ್ತಕ ಬರೆದಿದ್ದು, ಚಿಕ್ಕದಾದರೂ ಅದರಲ್ಲಿ ಅಡಗಿರುವ ವಿಷಯಗಳು ಸ್ಫೋಟಕವಾದವುಗಳಾಗಿವೆ. ತಿಮ್ಮಯ್ಯ ಅವರು 30-40ವರ್ಷದಿಂದ ವಿದೇಶದಲ್ಲಿ ನೆಲೆಸಿದ್ದರೂ ಮೂಲ ಸಂಸ್ಕøತಿ, ತಾಯ್ನಾಡು ಮರೆಯದೆ ಪ್ರೀತಿ ಇಟ್ಟುಕೊಂಡಿದ್ದಾರೆ. ಹಾಗಾಗಿಯೇ ಈ ಪುಸ್ತಕ ಬರೆದಿದ್ದಾರೆ. ಹಾಗೆಯೇ ಕೊಡವರು ದೇಶ, ವಿದೇಶಗಳಲ್ಲೇ ನೆಲೆಸಿದ್ದರೂ ತಾಯ್ನಾಡಿನ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಕೀಲ ಜೆ.ಎಂ.ಅಯ್ಯಣ್ಣ ಅಧ್ಯಕ್ಷತೆ ವಹಿಸಿದ್ದರು. ಅಮೇರಿಕಾ ನಿವಾಸಿ, ಲೇಖಕ ಮಾಳೇಟಿರ ಬಿ.ತಿಮ್ಮಯ್ಯ, ಡಿ.ಎಂ.ಟ್ರಸ್ಟ್ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ, ವೈದ್ಯ ವಾರ್ತಾ ಪ್ರಕಾಶನ ಸ್ಥಾಪಕ ನಿರ್ದೇಶಕ ಡಾ.ಎಂ.ಜಿ.ಆರ್.ಅರಸ್ ಮತ್ತಿತರರು ಉಪಸ್ಥಿತರಿದ್ದರು.

Translate »