ನಕ್ಸಲ್ ಚಲನವಲನ: ಕೊಡಗು ಗಡಿಯಲ್ಲಿ ಕೂಂಬಿಂಗ್ ಚುರುಕು
ಕೊಡಗು

ನಕ್ಸಲ್ ಚಲನವಲನ: ಕೊಡಗು ಗಡಿಯಲ್ಲಿ ಕೂಂಬಿಂಗ್ ಚುರುಕು

March 10, 2019

ಮಡಿಕೇರಿ: ಕೇರಳದ ವಯನಾಡು, ಚಾಮರಾಜನಗರ ಗಡಿ ಸೇರಿದಂತೆ ಕೊಡಗು-ಕೇರಳ ಗಡಿಗಳಿಗೆ ಹೊಂದಿಕೊಂಡಂತಿರುವ ದಟ್ಟ ಅರಣ್ಯಗಳಲ್ಲಿ ನಕ್ಸಲರ ಚಲನ ವಲನ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.

ಕೇರಳದ ವಯನಾಡಿನ ಅರಣ್ಯದಲ್ಲಿ ಶಂಕಿತ ನಕ್ಸಲರು ಮತ್ತು ಕೇರಳ ನಕ್ಸಲ್ ನಿಗ್ರಹ ದಳದ ಥಂಡರ್ ಬೋಲ್ಟ್ ಕಮಾಂಡೊಗಳ ನಡುವೆ ಪರಸ್ಪರ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗುತ್ತಿದೆ. ಗುಂಡಿನ ಚಕಮಕಿಯ ಬಳಿಕ ನಕ್ಸಲರು ತಪ್ಪಿಸಿಕೊಂಡಿದ್ದು, ಕೊಡಗು ಜಿಲ್ಲೆಯ ಕಡೆ ನುಸುಳುವ ಸಾಧ್ಯತೆ ಇದೆ ಎಂದು ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ನಕ್ಸಲ್ ನಿಗ್ರಹ ದಳದ 2 ತಂಡಗಳ 60 ಶಸ್ತ್ರಸಜ್ಜಿತ ಸಿಬ್ಬಂದಿ ಮತ್ತು ಪೊಲೀಸ್ ಸಶಸ್ತ್ರ ದಳದ ಸಿಬ್ಬಂದಿ ಕೂಂಬಿಂಗ್ ನಡೆಸುತ್ತಿದ್ದು, ಜಿಲ್ಲೆಯ ಗಡಿ ಭಾಗಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದ ಬರುವ ವಾಹನಗಳನ್ನು ಕೂಡ ಚೆಕ್ ಪೋಸ್ಟ್‍ಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಭಾಗಮಂಡಲ, ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಗಳು ನೆರೆಯ ಕೇರಳ ರಾಜ್ಯ ದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಇಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಮಾತ್ರವ ಲ್ಲದೆ, ವಿರಾಜಪೇಟೆಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಕುಟ್ಟ ದಿಂದ ದಕ್ಷಿಣ ಕೊಡಗಿನ ಕುಟ್ಟದವರೆಗೆ ಕೂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಭಾಗಮಂಡಲ ಮತ್ತು ವಿರಾಜಪೇಟೆಯ ಆರ್ಜಿ ನಕ್ಸಲ್ ನಿಗ್ರಹ ದಳದ ಸಿಬ್ಬಂದಿಗಳು ನಾಪೋಕ್ಲುವಿನ ನಾಲಾಡಿ, ಕಕ್ಕಬ್ಬೆ, ಇರ್ಪು, ಚೇಲಾವರ, ಗಾಳಿಬೀಡು, ಸಂಪಾಜೆ, ಕರಿಕೆ, ಚೇಂಬೇರಿ, ಪಾಣತ್ತೂರು ಸೇರಿದಂತೆ ಕೊಡಗು ಗಡಿಯಲ್ಲಿ ಬಿರುಸಿನ ಶೋಧ ನಡೆಸುತ್ತಿದ್ದಾರೆ.

ಕೊಡಗು ಜಿಲ್ಲೆಯ ಸುಮಾರು 200 ಕಿಮೀ ವ್ಯಾಪ್ತಿಯಲ್ಲಿ ಸಮಾಜ ಘಾತುಕ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೂಂಬಿಂಗ್ ನಡೆಸಲಾಗುತ್ತಿದೆ.

Translate »