ನೆಲ್ಯಹುದಿಕೇರಿ ಗ್ರಾಪಂ ಉಪ ಚುನಾವಣೆ: ಶಾಂತಿಯುತ ಮತದಾನ
ಕೊಡಗು

ನೆಲ್ಯಹುದಿಕೇರಿ ಗ್ರಾಪಂ ಉಪ ಚುನಾವಣೆ: ಶಾಂತಿಯುತ ಮತದಾನ

January 3, 2019

ಸಿದ್ದಾಪುರ, ಜ.2- ಕಾರಣಾಂತರಗಳಿಂದ ತೆರವಾಗಿದ್ದ ನೆಲ್ಯಹುದಿಕೇರಿ ಗ್ರಾಪಂನ ಎರಡು ಸದಸ್ಯ ಸ್ಥಾನಗಳಿಗಾಗಿ ಉಪ ಚುನಾವಣೆ ಬುಧವಾರ ನಡೆಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದೆ ಮತ ದಾನವು ಶಾಂತಿಯುತವಾಗಿತ್ತು. ನಲ್ವತ್ತೇ ಕರೆಯ ಬರಡಿ 1ನೇ ವಾರ್ಡ್‍ಗೆ ಬರಡಿ ಅಂಗನವಾಡಿ ಕೇಂದ್ರ ಹಾಗೂ ಕುಂಬಾರಗುಂಡಿ 3ನೇ ವಾರ್ಡಿಗೆ ನೆಲ್ಯಹುದಿಕೇರಿ ಸರ್ಕಾರಿ ಶಾಲೆಯಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿ ಸಲಾಗಿತ್ತು. ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಎರಡೂ ವಾರ್ಡಿನಲ್ಲೂ ಬೆಳಗ್ಗೆ 7ಗಂಟೆಯಿಂದಲೇ ಮತದಾರರು ಮತ ಚಲಾಯಿಸಲು ತೆರಳಿ ದ್ದರು. 1ನೇ ವಾರ್ಡಿನ 930 ಮತದಾರರ ಪೈಕಿ 379 ಮಹಿಳೆ ಯರು ಮತ್ತು 354 ಪುರುಷರು ಸೇರಿ 733 ಮತಗಳೊಂದಿಗೆ ಶೇ.79 ಮತಗಳು ಚಲಾವಣೆಗೊಂಡಿದೆ. 3ನೇ ವಾರ್ಡಿನಲ್ಲಿ 276 ಮಹಿಳೆ ಯರು ಮತ್ತು 220 ಪುರುಷರು ಸೇರಿ 496 ಮಂದಿ ಪಾಲ್ಗೊಂ ಡಿದ್ದು, ಶೇ.61 ಮತಗಳು ಚಲಾವಣೆಯಾಗಿದೆ.

ನೆಲ್ಯಹುದಿಕೇರಿ ಗ್ರಾಪಂ ಸದಸ್ಯ ಬಾಪುಟ್ಟಿ ಅವರು ಮರಣ ಹೊಂದಿದ ಕಾರಣ 1ನೇ ವಾರ್ಡಿನ ಸಾಮಾನ್ಯ ಪುರುಷ ಕ್ಷೇತ್ರ ತೆರವಾಗಿತ್ತು. ಆ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಮಣಿ, ಕಾಂಗ್ರೆಸ್ ಸಕೀರ್ ಹಾಗೂ ಸಿಪಿಎಂ ಪಕ್ಷದ ಮೋನಪ್ಪ ಸ್ಪರ್ಧೆ ಮಾಡಿದ್ದಾರೆ. 3ನೇ ವಾರ್ಡಿನ ಸದಸ್ಯೆ ಶ್ರುತಿ ಸರ್ಕಾರದ ಉದ್ಯೋಗಿಯಾಗಿ ನೇಮಕಗೊಂಡ ಬಳಿಕ ತೆರವಾದ ಪರಿಶಿಷ್ಠ ಪಂಗಡ (ಮಹಿಳೆ) ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಮಂಗಳಾ ಹಾಗೂ ಬಿಜೆಪಿ ಬೆಂಬಲಿತ ಮಲ್ಲಿ ಸ್ಪರ್ಧೆಯಲ್ಲಿದ್ದಾರೆ. ಮತದಾನಕ್ಕೆ ಬ್ಯಾಲೆಟ್ ಪೇಪರ್ ಬಳಕೆ ಮಾಡಲಾಗಿದ್ದು, ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಜ.4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣಾ ಅಧಿಕಾರಿ ಆಗಿ ಎಚ್.ಬಿ ಗಣೇಶ್ ಮತ್ತು ಎಚ್.ಟಿ ರಾಜೇಶ್ ಕರ್ತವ್ಯ ನಿರ್ವಹಿಸಿದರು.

Translate »