ಮೈಸೂರು, ಮಾ.17(ಪಿಎಂ)- ಮೈಸೂರಿನ ಸಾಂಸ್ಕೃತಿಕ ಕೇಂದ್ರಬಿಂದು ವಾದ ಕಲಾಮಂದಿರಕ್ಕೆ ಹೊಸತನದ ಸ್ಪರ್ಶ ದೊರೆಯುತ್ತಿದ್ದು, ವಿಸ್ತೃತ ಅಭಿವೃದ್ಧಿ ಕಾಮಗಾರಿಗಳನ್ನು ಕನ್ನಡ-ಸಂಸ್ಕೃತಿ ಇಲಾಖೆ ಕೈಗೆತ್ತಿಕೊಂಡಿದೆ.
ಕನ್ನಡ-ಸಂಸ್ಕೃತಿ ಇಲಾಖೆ ಅಧೀನದ ಕಲಾಮಂದಿರ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ವೇದಿಕೆ. ಸರ್ಕಾರದ ಹಲವು ಕಾರ್ಯಕ್ರಮ ಗಳಿಗೂ ಸೂಕ್ತ ವೇದಿಕೆ ಒದಗಿಸುತ್ತಿದೆ. ಇದೀಗ `ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ.’ ಮೈಸೂರು ಶಾಖೆಯ 80 ಲಕ್ಷ ರೂ. ಸಿಎಸ್‍ಆರ್ (ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ) ಅನುದಾನದಲ್ಲಿ ವಿಸ್ತೃತ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ.
ಧ್ವನಿ, ಬೆಳಕು ಸೇರಿದಂತೆ ವಿವಿಧ ರೀತಿಯ ತಾಂತ್ರಿಕತೆಯಲ್ಲಿ ಕಲಾಮಂದಿರ ಸಭಾಂಗಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಭರದಿಂದ ಸಾಗಿದೆ. ಏಪ್ರಿಲ್ ಅಂತ್ಯದೊಳಗೆ ಬಹುತೇಕ ಕಾಮಗಾರಿ ಪೂರ್ಣಗೊಳ್ಳಲಿವೆ. ಹೈಟೆಕ್ ಸ್ಪರ್ಶದಲ್ಲಿ ಹೊಸ ಅನುಭವ ನೀಡುವ ವ್ಯವಸ್ಥೆ ಇಲ್ಲಿ ನಿರ್ಮಾಣವಾಗಲಿದೆ.
ಈಗಾಗಲೇ ಹೆಚ್ಚುವರಿಯಾಗಿ 28 ಫ್ಯಾನ್ ಗಳನ್ನು ಅಳವಡಿಸಿದ್ದು, 40 `ಪಾತ್‍ವೇ ಲೈಟ್’ಗಳನ್ನು ಆಸನಗಳಿಗೆ ಜೋಡಿಸ ಲಾಗಿದೆ. ಮೆಟ್ಟಿಲುಗಳಿಗೆ ನೆಲಹಾಸು ಹಾಕಿದ್ದು, ಕಲಾಮಂದಿರದ ವೇದಿಕೆ ಎದುರಿಗೆ ಮೊದಲ ಸಾಲಿನಲ್ಲಿ ವಿಐಪಿ (ಗಣ್ಯರ) ಗ್ಯಾಲರಿ ಮಾಡಲಾಗಿದೆ. ಇಲ್ಲಿ 44 ವಿಐಪಿ ಆಸನ ಗಳ ವ್ಯವಸ್ಥೆ ಮಾಡಲಾಗಿದೆ. ಗ್ಯಾಲರಿಗೆ 3 ಗೇಟ್‍ಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ತಾಲೀಮು ಕೊಠಡಿ: ನಾಟಕ, ನೃತ್ಯ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಇಲ್ಲಿನ ಧ್ವನಿ ವ್ಯವಸ್ಥೆ ಬಹುಮುಖ್ಯ. ಹೀಗಾಗಿ 32 ಡಿಜಿಟಲ್ ಚಾನಲ್ ಸೌಂಡ್ ಸಿಸ್ಟಂ ಅಳವಡಿಸಲಾಗುತ್ತಿದೆ. ಅಲ್ಲದೆ, ಕಲಾ ಮಂದಿರ ಹಾಗೂ ಕಿರುರಂಗಮಂದಿರ ಎರಡಕ್ಕೂ ಎಸಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ರಂಗ ಕಲಾವಿದರ ಬಹು ದಿನಗಳ ಬೇಡಿಕೆ ಯಂತೆ ಕಲಾಮಂದಿರದ ಹೊರಾವರಣ ದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ತಾಲೀಮು ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ.
ತಲಾ 3 ಲಕ್ಷ ರೂ. ವೆಚ್ಚದಲ್ಲಿ 2 ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿ ಸಲಾಗುತ್ತಿದೆ. ಸಂಗ್ರಹವಾಗುವ ನೀರನ್ನು ಉದ್ಯಾನವನಕ್ಕೆ ಬಳಸಲು ಇಲಾಖೆ ಉದ್ದೇಶಿಸಿದೆ. ಅಲ್ಲದೆ, ಕಲಾಮಂದಿರದ ಶೌಚಾಲಯಗಳನ್ನು ದುರಸ್ತಿಗೊಳಿಸಲಾ ಗುತ್ತಿದೆ. ಪುರುಷರು ಹಾಗೂ ಮಹಿಳೆ ಯರ ಶೌಚಾಲಯಗಳನ್ನು ನವೀಕರಿಸ ಲಾಗುತ್ತಿದೆ. ಜೊತೆಗೆ ಕರ್ಟನ್‍ಗಳನ್ನು ಹಾಕಲಾಗುತ್ತಿದ್ದು, ಕಲಾಮಂದಿರ ಆವರಣದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಪೇಂಟಿಂಗ್ ಮಾಡಲಾಗುತ್ತಿದೆ.
ಕಲಾಮಂದಿರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಇದ್ದುದರಿಂದ ಅತಿಥಿಗಳಿಗೆ ಬಾಟಲಿ ನೀರಿನ ವ್ಯವಸ್ಥೆಯನ್ನೇ ಮಾಡಬೇಕಿತ್ತು. ಈ ಸಮಸ್ಯೆ ಪರಿಹರಿಸುವ ಸಲುವಾಗಿ `ಆರ್‍ಓ ಅಂಡ್ ಯುವಿ ವಾಟರ್ ಫ್ಯೂರಿಪೈ’ ವ್ಯವಸ್ಥೆ ಕಲ್ಪಿಸಿ ಕುಡಿಯಲು ಬಿಸಿ ಹಾಗೂ ತಣ್ಣೀರು ದೊರೆಯುವಂತೆ ಮಾಡಲಾಗುತ್ತಿದೆ.
ಸಿಸಿಟಿವಿ ಕ್ಯಾಮರಾ: ಕಲಾಮಂದಿರದ ಆವರಣದಲ್ಲಿ ಇದ್ದ 16 ಸಿಸಿಟಿವಿ ಕ್ಯಾಮರಗಳ ಜೊತೆಗೆ ಇದೀಗ ಮತ್ತೆ 12 ಕ್ಯಾಮರಾಗಳನ್ನು ಅಳವಡಿಸಲಾ ಗಿದೆ. ಕಲಾಮಂದಿರಕ್ಕೆ ಪ್ರವೇಶ ಕಲ್ಪಿಸುವ 2 ಪ್ರಮುಖ ಗೇಟ್‍ಗಳಿಗೂ ಸಿಸಿಟಿವಿ ಕ್ಯಾಮರಾ ಕಣ್ಗಾವಲು ಇರಲಿದೆ.