ಮಡಿಕೇರಿಯಲ್ಲಿ ಬಾಲಕಿಗೆ ಜನಿಸಿದ ಮಗು ಮಾರಾಟ
ಮೈಸೂರು

ಮಡಿಕೇರಿಯಲ್ಲಿ ಬಾಲಕಿಗೆ ಜನಿಸಿದ ಮಗು ಮಾರಾಟ

January 6, 2020

ಮಡಿಕೇರಿ, ಜ.5- ಖಾಸಗಿ ಆಸ್ಪತ್ರೆ ಯೊಂದರಲ್ಲಿ ಅಪ್ರಾಪ್ತೆಗೆ ಜನಿಸಿದ ಗಂಡು ಮಗುವನ್ನು 1.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಮಡಿಕೇರಿ ಜಿಲ್ಲಾಸ್ಪತ್ರೆಯ ಮಹಿಳಾ ವೈದ್ಯೆ ಸೇರಿದಂತೆ ಇತರ 7 ಮಂದಿಯ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಟಿ.ಎಸ್.ಅರುಂದತಿ ಅವರು ನೀಡಿದ ದೂರನ್ನು ಆಧರಿಸಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ರಾಜೇಶ್ವರಿ, ಅವರ ಪತಿ ಡಾ.ನವೀನ್, ಖಾಸಗಿ ಆಸ್ಪತ್ರೆಯ ಗ್ರೂಪ್ ಡಿ ನೌಕರ ಸೆಲಿನಾ, ನರ್ಸ್‍ಗಳಾದ ರಮ್ಯ, ಕವಿತಾ ಹಾಗೂ ಮಗುವನ್ನು ಖರೀದಿಸಿದ ಪಿ.ಎಂ.ರಾಬಿನ್, ಸರಳಾ ಮೇರಿ ಅವರುಗಳ ವಿರುದ್ಧ ‘ಕಲಂ 370(4)(6), 465, 468, 471 ರೆ/ವಿ 34 ಐಪಿಸಿ ಮತ್ತು 80, 81 ಜೆ.ಜೆ. ಆಕ್ಟ್-2015 ಮತ್ತು 21(1) ಪೋಕ್ಸೋ ಕಾಯ್ದೆ-2012’ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ನಾಲ್ವರು ಆರೋಪಿಗಳು ಪ್ರಸ್ತುತ ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ಪ್ರಕರಣ ಹಿನ್ನೆಲೆ: 2019ರ ಡಿಸೆಂಬರ್ 22ರಂದು ಅಪ್ರಾಪ್ತೆಯೊಬ್ಬಳು ತನ್ನ ತಾಯಿ ಯೊಂದಿಗೆ ನಗರದ ಖಾಸಗಿ ಆಸ್ಪತ್ರೆಗೆ ಬಂದಿ ದ್ದಳು. ಈ ಸಂದರ್ಭ ಮಡಿಕೇರಿ ಜಿಲ್ಲಾ ಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ರಾಜೇಶ್ವರಿ ತನ್ನ ಪತಿ ಸರ್ಕಾರಿ ಆಸ್ಪತ್ರೆಯ ವೈದ್ಯ, ಮಕ್ಕಳ ತಜ್ಞ ಡಾ. ನವೀನ್ ಅವರು ಖಾಸಗಿ ಆಸ್ಪ ತ್ರೆಯ ನರ್ಸ್‍ಗಳಾದ ರಮ್ಯ ಮತ್ತು ಕವಿತಾ, ಡಿ ಗ್ರೂಪ್ ಸಿಬ್ಬಂದಿ ಸೆಲಿನಾ ಅವರ ಸಹಾಯದೊಂದಿಗೆ ಆಕೆಗೆ ಅಕ್ರಮವಾಗಿ ಹೆರಿಗೆ ಮಾಡಿಸಿದ್ದರು. ಹೆರಿಗೆಯಾದ ಬಳಿಕ ಅಪ್ರಾಪ್ತ ಬಾಲಕಿ ತನಗೆ ಮಗು ಬೇಡವೆಂದು ಹೇಳಿದ್ದಳು ಎನ್ನಲಾಗಿದೆ.

ಇದರಿಂದ ಡಾ.ರಾಜೇಶ್ವರಿ ಮತ್ತು ಡಾ.ನವೀನ್ ಅವರು ಆಕೆಗೆ ಜನಿಸಿದ ಗಂಡು ಮಗುವನ್ನು ಹೆರಿಗೆಯಾದ ಖಾಸಗಿ ಆಸ್ಪತ್ರೆಯ ಡಿ-ಗ್ರೂಪ್ ನೌಕರರಾದ ಸೆಲಿನಾ ಎಂಬು ವವರ ಮಗ ಪಿ.ಎಂ.ರಾಬಿನ್, ಸರಳಾ ಮೇರಿ ದಂಪತಿಗೆ 1.50ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದರು. ಮಾತ್ರವಲ್ಲದೇ, ಮಗುವಿನ ಜನನದ ದಾಖಲಾತಿಯಲ್ಲಿ ಮಗುವಿನ ನೈಜ್ಯ ತಂದೆ ತಾಯಿ ರಾಬಿನ್ ಮತ್ತು ಸರಳಾ ಮೇರಿ ಎಂದು ಬದಲಿಸಿ, ಮಗುವಿನ ಜನನ ಪ್ರಮಾಣ ಪತ್ರವನ್ನು ಮಡಿಕೇರಿ ನಗರ ಸಭೆಯಿಂದ ಪಡೆದುಕೊಂಡಿದ್ದರು. ಅಷ್ಟು ಮಾತ್ರವಲ್ಲದೇ, ಮಗುವಿನ ತಾಯಿ ಅಪ್ರಾಪ್ತ ಬಾಲಕಿಯ ಅಸಲಿ ಹೆಸರನ್ನು ಆಸ್ಪತ್ರೆಯ ದಾಖಲಾತಿ ಪುಸ್ತಕದಲ್ಲಿ ತಿದ್ದಿ, ನಕಲಿ ಹೆಸರನ್ನು ದಾಖಲು ಮಾಡಿದ್ದರು.

ಪ್ರಕರಣ ಬೆಳಕಿಗೆ: ಅಪ್ರಾಪ್ತೆಗೆ ಹೆರಿಗೆ ಮಾಡಿಸಿ, ಆಕೆಗೆ ಜನಿಸಿದ ಗಂಡು ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಖಾಸಗಿ ಆಸ್ಪತ್ರೆಯ ಪ್ರಶಾಂತ್ ಮತ್ತು ವಿಶ್ವ ಹಿಂದೂ ಪರಿಷದ್‍ನ ಜಿಲ್ಲಾ ಸಂಚಾಲಕ ಕುಶಾಲಪ್ಪ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಟಿ.ಎಸ್.ಅರುಂದÀತಿ ಡಿ.27ರಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಕರಣವನ್ನು ತನಿಖೆ ಮಾಡಬೇಕು ಎಂದು ಸೂಚಿಸಿದ್ದರು.

ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ ವ್ಯಕ್ತಿಗಳ ಜಾಡು ಅರಸಿ, ಅಪ್ರಾಪ್ತೆಗೆ ಹೆರಿಗೆ ಮಾಡಿಸಲಾದ ಖಾಸಗಿ ಆಸ್ಪತೆಯ ಡಿ ಗ್ರೂಪ್ ನೌಕರರಾದ ಸೆಲಿನಾ ಎಂಬುವವರ ಮನೆಗೆ ತೆರಳಿ ಪರಿಶೀಲಿಸಿದಾಗ ಅವರ ಮನೆಯಲ್ಲಿ 4 ತಿಂಗಳ ಗಂಡು ಮಗುವಿರುವುದು ಪತ್ತೆಯಾಗಿದೆ. ಸೆಲಿನಾ ಅವರನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಅಪ್ರಾಪ್ತೆಗೆ ಹೆರಿಗೆ ಮಾಡಿಸಿರುವುದು, ಬಳಿಕ ಮಗುವನ್ನು ಮಾರಾಟ ಮಾಡಿರುವುದು, ದಾಖಲೆಗಳನ್ನು ತಿದ್ದಿರುವ ಘಟನೆಗಳ ರಹಸ್ಯಗಳು ಒಂದೊಂದಾಗಿ ಬಯಲಾಗಿದೆ. ಈ ಬಗ್ಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪ್ರಕರಣದ ಬಗ್ಗೆ ವರದಿ ನೀಡಿದ್ದರು. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅರುಂದÀತಿ 2020ರ ಜ.3ರಂದು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುವಿನ ಜೈವಿಕ ತಾಯಿ ಮತ್ತು ಜೈವಿಕ ತಂದೆ ಯಾರೆಂದು ಪತ್ತೆಯಾಗಬೇಕಾಗಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗಳು ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತೆಗೆ ಹೆರಿಗೆ ಮಾಡಿಸಿರುವುದು, ಮಗುವನ್ನು ಅಕ್ರಮ ವಾಗಿ ಮಾರಾಟ ಮಾಡಿರುವುದು, ದಾಖಲೆಗಳನ್ನು ತಿದ್ದಿರುವುದು ಸೇರಿದಂತೆ ವಿವಿಧ ಕಾನೂನು ವಿರೋಧಿ ಕೃತ್ಯ ಎಸಗಿದ ಆರೋಪಿಗಳ ವಿರುದ್ದ ಪೊಲೀಸರು ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

 

Translate »