ಬೇಕರಿ ವಹಿವಾಟಿಗೆ ಅವಕಾಶವಿಲ್ಲ: ಒಂದೇ ದಿನದಲ್ಲಿ ಪಾಲಿಕೆ `ಯು’ಟರ್ನ್!
ಮೈಸೂರು

ಬೇಕರಿ ವಹಿವಾಟಿಗೆ ಅವಕಾಶವಿಲ್ಲ: ಒಂದೇ ದಿನದಲ್ಲಿ ಪಾಲಿಕೆ `ಯು’ಟರ್ನ್!

April 3, 2020

ಬೇಕಿದ್ದರೆ ಬ್ರೆಡ್, ಬನ್ ತಯಾರಿಸಿ ಅಂಗಡಿ, ಸೂಪರ್ ಮಾರ್ಕೆಟ್‍ಗೆ ಸರಬರಾಜು ಮಾಡಬಹುದು

ಮೈಸೂರು, ಏ.2(ಪಿಎಂ)- ಬೇಕರಿ ಗಳಿಗಿಲ್ಲ ತೆರೆಯುವ ಭಾಗ್ಯ! ಬೇಕರಿಗಳ ಬಾಗಿಲು ತೆರೆದು ವ್ಯಾಪಾರ ಮಾಡುವ ವಿಚಾರದಲ್ಲಿ ಮಹಾನಗರ ಪಾಲಿಕೆಯ ನಡೆ, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಂಡಂತಾಗಿದೆ!

ಬೇಕರಿಗಳು ಬಾಗಿಲು ತೆರೆದು ಮಾರಾಟ ನಡೆಸಲು ಅವಕಾಶ ಮಾಡಿಕೊಡಲಾಗು ವುದು ಎಂದು ಬುಧವಾರ ಪ್ರಕಟಿಸಿದ್ದ ಪಾಲಿಕೆ ಒಂದೇ ದಿನದಲ್ಲಿ ಯುಟರ್ನ್ ಹೊಡೆದಿದೆ. ನಗರದಲ್ಲಿ ಸದ್ಯಕ್ಕೆ ಬೇಕರಿ ಗಳನ್ನು ತೆರೆಯುವುದು ಬೇಡ ಎಂದು ಗುರುವಾರ ಸಂಜೆ ಪ್ರಕಟಣೆ ಹೊರಡಿಸಿದೆ.

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದ ಪಾಲಿಕೆ ಆಯುಕ್ತರು, ಲಾಕ್‍ಡೌನ್‍ನಲ್ಲಿ ಮನೆಯೊಳಗೇ ಉಳಿದಿರುವ ಜನರಿಗೆ ಬೇಕರಿಗಳು ಬ್ರೆಡ್, ಬನ್ ಮೊದಲಾದ ತಿನಿಸುಗಳನ್ನು ಒದಗಿಸಬಹುದು ಎಂದಿ ದ್ದರು. ಹಾಗಾಗಿ ಗುರುವಾರ ನಗರದ ವಿವಿಧೆಡೆಯ ಬಹಳಷ್ಟು ಬೇಕರಿಗಳು ಬಾಗಿಲು ತೆರೆದಿದ್ದವು. ನಗರದ ಹೃದಯ ಭಾಗದ ಬೇಕರಿಗಳು ಮಾತ್ರ ಬಾಗಿಲು ತೆರೆದಿರಲಿಲ್ಲ. ಮಾ.24ರಂದು ದೇಶಾದ್ಯಂತ ಲಾಕ್‍ಡೌನ್ ಘೋಷಣೆಯಾದ ಬೆನ್ನಲ್ಲೇ ಬೇಕರಿಗಳೂ ಸಹ ಬಾಗಿಲು ಬಂದ್ ಮಾಡಿ ದವು. ಹೋಟೆಲ್‍ಗಳೆಲ್ಲವೂ ಬಂದ್ ಆಗಿರುವುದರಿಂದ ಬೇಕರಿಗಳು ಬಾಗಿಲು ತೆರೆದರೆ ಜನರ ಅನುಕೂಲವಾಗಲಿದೆ ಎಂಬುದು ಪಾಲಿಕೆಯ ಚಿಂತನೆಯಾಗಿತ್ತು.

1ನೇ ದಿನ ವಹಿವಾಟು: ಶಾರದಾದೇವಿ ನಗರ, ವಿಜಯನಗರ, ಟಿಕೆ ಲೇಔಟ್, ಸರಸ್ವತಿಪುರಂ, ಕುವೆಂಪುನಗರ ಮೊದಲಾದೆಡೆ ಹಲವು ಬೇಕರಿಗಳು ಗುರುವಾರ ವಹಿವಾಟು ಆರಂಭಿಸಿದವು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬೇಕರಿ ಮುಂದೆ ಚೌಕಟ್ಟು ರಚಿಸಿದ್ದವು. ಗ್ರಾಹಕರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು.

ಡಿ.ದೇವರಾಜ ಅರಸು ರಸ್ತೆ, ಚಾಮ ರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಅಗ್ರಹಾರದಲ್ಲಿ ಬೇಕರಿಗಳು ಬಂದ್ ಆಗಿದ್ದವು. ಸಂಸ್ಕøತ ಪಾಠಶಾಲಾ ವೃತ್ತದ ವಿಬಿ ಬೇಕರಿ ಸಹ ಬಾಗಿಲು ಮುಚ್ಚಿತ್ತು. ರಾಮಸ್ವಾಮಿ ವೃತ್ತ ಬಳಿಯ ಶ್ರೀಕೃಷ್ಣ ಬೇಕರಿ ಬಾಗಿಲು ತೆರೆಯಲು ಸಿದ್ಧತೆ ನಡೆಸಿ ಗುರುವಾರ ಶುಚಿಗೊಳಿಸುತ್ತಿತ್ತು. ಮಾಲೀಕ ಪ್ರದೀಪ್ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ವಾರದಿಂದ ಮುಚ್ಚಿದ್ದರಿಂದ ಸಂಗ್ರಹದಲ್ಲಿದ್ದ ಎಲ್ಲಾ ತಿನಿಸುವ ಹಾಳಾಗಿರುತ್ತವೆ. ಹಾಗಾಗಿ, ತಿನಿಸುಗಳನ್ನು ಹೊಸದಾಗಿ ತಯಾರಿಸ ಬೇಕಿದೆ. ಕೆಲಸಗಾರರಿಗೆ ರಜೆ ನೀಡಿದ್ದು, ಎಲ್ಲರೂ ಊರಿಗೆ ಹೋಗಿದ್ದಾರೆ. ನಾಳೆ ಬಾಗಿಲು ತೆರೆದರೂ ಪೂರ್ತಿ ದಿನ ವಹಿವಾಟು ಕಷ್ಟ ಎಂದಿದ್ದರು. ಆದರೆ ಪಾಲಿಕೆ ಬೇಕರಿಗಳು ಸದ್ಯಕ್ಕೆ ಬಾಗಿಲು ತೆರೆಯುವುದು ಬೇಡ ಎಂದಿರುವುದರಿಂದ ಇವರ ಸಿದ್ಧತೆಗೆ ಬ್ರೇಕ್ ಬಿದ್ದಿದೆ.

ಆಯುಕ್ತರ ಪ್ರತಿಕಾ ಪ್ರಕಟಣೆ
ಸಾರ್ವಜನಿಕರಿಗೆ ಅಗತ್ಯವಾದ ಬ್ರೆಡ್, ಬನ್, ಬಿಸ್ಕೆಟ್ ದೊರೆಯಲೆಂಬ ಉದ್ದೇಶದಿಂದ ಬೇಕರಿ ತೆರೆಯಬಹುದೆಂದು ಆದೇಶಿಸಲಾಯಿತು. ಆದರೆ ಮತ್ತೆ ಜನದಟ್ಟಣೆ ಉಂಟಾಗಲಿದೆ. ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಸದ್ಯಕ್ಕೆ ಬೇಕರಿ ತೆರೆಯುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು. ಬದಲಾಗಿ ಬ್ರೆಡ್, ಬನ್ ತಯಾರಿಸಿ ದಿನಸಿ ಅಂಗಡಿ, ಸೂಪರ್ ಮಾರ್ಕೆಟ್ ಹಾಗೂ ಮಿಲ್ಕ್ ಡೈರಿಗಳಿಗೆ ಪೂರೈಸಲು ಅವಕಾಶ ನೀಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆ ಆಯುಕ್ತರ ಬುಧವಾರದ ಪ್ರಕಟಣೆಯ ಮಾಹಿತಿಯನ್ನು ಹೋಟೆಲ್ ಮಾಲೀಕರ ಸಂಘದ ಸದಸ್ಯರಾದ ಮೈಸೂರು ನಗರ-ಜಿಲ್ಲೆಯ ಬೇಕರಿ ಮಾಲೀಕರಿಗೆ ನೀಡಿದ್ದೆವು. ಹಲವರು ಸಿದ್ಧತೆ ನಡೆಸಿದ್ದರು. ಈಗ ಅದೆಲ್ಲಾ ವ್ಯರ್ಥವಾಯಿತು. ಮಾಂಸ ಮಾರಾಟಕ್ಕೆ ವಾರದಲ್ಲಿ 3 ದಿನ ಅವಕಾಶ ನೀಡಿದಂತೆ ಬೇಕರಿಗಳಿಗೂ ಅವಕಾಶ ನೀಡುವುದು ಸೂಕ್ತ.
-ಸಿ.ನಾರಾಯಣಗೌಡ, ಅಧ್ಯಕ್ಷರು, ಹೋಟೆಲ್ ಮಾಲೀಕರ ಸಂಘ

Translate »