ರೆವಿನ್ಯೂ ಸೈಟ್‍ನಲ್ಲಿ ಮನೆ ನಿರ್ಮಾಣಕ್ಕೆ ಪಾಲಿಕೆ ಯಾವುದೇ ಅನುದಾನ ನೀಡಲಾಗದು
ಮೈಸೂರು

ರೆವಿನ್ಯೂ ಸೈಟ್‍ನಲ್ಲಿ ಮನೆ ನಿರ್ಮಾಣಕ್ಕೆ ಪಾಲಿಕೆ ಯಾವುದೇ ಅನುದಾನ ನೀಡಲಾಗದು

December 28, 2018

ಮೈಸೂರು: ಕಂದಾಯ ನಿವೇಶನದಲ್ಲಿ (ರೆವಿನ್ಯೂ ಸೈಟ್) ಮನೆ ನಿರ್ಮಿಸುವವರಿಗೆ ಸರ್ಕಾರದ ವಿವಿಧ ಯೋಜನೆ ಗಳಲ್ಲಿ ಅನುದಾನ ನೀಡುವ ಸಂಬಂಧ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪವಾದ ವಿಷಯದ ಬಗ್ಗೆ ಗೊಂದಲ ಉಂಟಾದ ಕಾರಣ ಈ ಪ್ರಸ್ತಾ ವನೆಯನ್ನು ಮುಂದೂಡಲಾಯಿತು.

ವಸತಿ ಯೋಜನೆಯಡಿ ಫಲಾನುಭವಿಗಳಿಗೆ ನಗರ ಪಾಲಿಕೆ ವತಿಯಿಂದ ಆರ್ಥಿಕ ನೆರವು ಕೋರಿ ಶೇ.24.10, ಶೇ.7.25 ಹಾಗೂ ಶೇ.3ರ ಅನು ದಾನದಡಿ ರೆವಿನ್ಯೂ ಸೈಟ್‍ಗಳಲ್ಲಿ ಮನೆ ನಿರ್ಮಿಸಿ ಕೊಳ್ಳಲು 50 ಹೊಸ ಅರ್ಜಿಗಳು ಬಂದಿದ್ದು, ಇದರ ಜೊತೆಗೆ ಹಾಲಿ 30 ಅರ್ಜಿಗಳು ಚಾಲ್ತಿಯ ಲ್ಲಿವೆ. ಈ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು 50 ಲಕ್ಷ ರೂ. ಅನುದಾನ ಬೇಕಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಈ ಪ್ರಸ್ತಾವನೆ ಮೇಲೆ ಮಾತನಾಡಿದ ಮಾಜಿ ಮೇಯರ್ ಅಯೂಬ್ ಖಾನ್, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ವಿಕಲಚೇತನರು ಸ್ವಂತ ಮನೆ ನಿರ್ಮಿಸಿಕೊಳ್ಳಲು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ರೆವಿನ್ಯೂ ಸೈಟ್‍ನಲ್ಲಿ ಮನೆ ನಿರ್ಮಿಸಲು ಅನುದಾನ ನೀಡಬೇಕೇ? ಅಥವಾ ಬೇಡವೇ ಎಂಬುದರ ಬಗ್ಗೆ ಗೊಂದಲ ಕಾಡುತ್ತಿದೆ. ರೆವಿನ್ಯೂ ಸೈಟ್‍ನಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವವರಿಗೆ ಪಾಲಿಕೆಯಿಂದ ಈಗಾಗಲೇ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮುಂತಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೀಗಿರುವಾಗ ರೆವಿನ್ಯೂ ಸೈಟ್ ನಲ್ಲಿ ಸ್ವಂತ ಮನೆ ನಿರ್ಮಿಸಿಕೊಳ್ಳಲು ವಸತಿ ಯೋಜನೆಯಡಿ ಆರ್ಥಿಕ ನೆರವನ್ನೂ ಕೂಡ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿ ಸಿದರು. ಅಲ್ಲದೇ ರೆವಿನ್ಯೂ ಸೈಟ್‍ನಲ್ಲಿ ವಾಸ ಮಾಡುತ್ತಿರುವವ ರಿಂದ ಅಭಿವೃದ್ಧಿ ಶುಲ್ಕ ಪಡೆದು ಕೊಂಡು ಆಸ್ತಿ ದಾಖಲೆ ಮಾಡಿದ ನಂತರ ಮನೆ ನಿರ್ಮಾಣಕ್ಕೆ ಅನುದಾನ ನೀಡ ಬಹುದು ಎಂದು ಸರ್ಕಾರದ ಅದೇಶವೂ ಇರುವುದರಿಂದ ಈ ಆದೇಶವನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಕುಡಿಯುವ ನೀರು ಹಾಗೂ ವಿದ್ಯುತ್ ಸೌಲಭ್ಯಗಳನ್ನು ನೀಡಬಹುದು. ಆದರೆ ಇದು ಭೂಮಿಗೆ ಸಂಬಂಧಪಟ್ಟ ವಿಚಾರವಾಗಿರು ವುದರಿಂದ ಸಾಕಷ್ಟು ಆಲೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಸದ್ಯಕ್ಕೆ ರೆವಿನ್ಯೂ ಸೈಟ್‍ನಲ್ಲಿ ಮನೆ ನಿರ್ಮಿಸಿಕೊಳ್ಳಲು ಅನುದಾನ ನೀಡಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಪ್ರಸ್ತಾವನೆ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳುವುದು ಎಂದು ಸಭೆ ನಿರ್ಧರಿಸಿ ಪ್ರಸ್ತಾವನೆಯನ್ನು ಮುಂದೂಡಿತು.

ವಕೀಲರ ಬದಲಾವಣೆ: ನಗರ ಪಾಲಿಕೆಯ ವಕೀಲರಾದ ಹೆಚ್.ಸಿ. ಶಿವರಾಮ್ ಅವರು ಹೈಕೋರ್ಟ್ ನಲ್ಲಿ ಸರಿಯಾಗಿ ವಾದ ಮಂಡಿಸದ ಕಾರಣ ಪಾಲಿಕೆಗೆ ಹಿನ್ನಡೆಯಾಗಿದೆ. ಅವರು ಅಧಿಕಾರಿಗಳ ಮಾತಿಗೂ ಮನ್ನಣೆ ನೀಡುತ್ತಿಲ್ಲ. ಪ್ರಕರಣ ಗಳನ್ನು ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಇವರನ್ನು ಬದಲಾಯಿಸಬೇಕು ಎಂದು ಈ ಹಿಂದೆಯೇ ನಿರ್ಣಯ ಕೈಗೊಳ್ಳಲಾಗಿ ತ್ತಾದರೂ, ಅದನ್ನು ಅನು ಷ್ಠಾನಕ್ಕೆ ತರದೇ ಅವರನ್ನೇ ಮುಂದುವರೆಸಲಾಗಿದೆ ಎಂದು ಕೆಲವು ಸದಸ್ಯರು ಅಸಮಾಧಾನ ಹೊರ ಹಾಕಿದರು. ಈ ವೇಳೆ ಮಾತನಾಡಿದ ಸದಸ್ಯ ಶಿವಕುಮಾರ್, ಪಾಲಿಕೆ ವಕೀಲರಾಗಿರುವ ಶಿವರಾಮು ಅವರು ಕೆಲವೊಂದು ಪ್ರಕರಣಗಳಲ್ಲಿ ಪಾಲಿಕೆಗೆ ವಿರುದ್ಧವಾಗಿಯೇ ವಾದ ಮಂಡಿಸಿದ್ದಾರೆ. ಇಂತಹ ವಕೀಲರನ್ನು ಯಾಕೆ ಮುಂದುವರೆಸಬೇಕು ಎಂದು ಪ್ರಶ್ನಿಸಿದರು. ವಕೀಲರೂ ಆದ ಕಾರ್ಪೊರೇಟರ್ ಸುಬ್ಬಯ್ಯ ಮಾತನಾಡುತ್ತಾ, ಪಾಲಿಕೆಯ ವಕೀಲರಿಗೆ ಅಧಿ ಕಾರಿಗಳು ಪ್ರಕರಣದ ದಾಖಲೆಗಳನ್ನು ಸಕಾಲಕ್ಕೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇದರಿಂದಾಗಿಯೇ ಹಿರಿಯ ವಕೀಲರುಗಳು ಪಾಲಿಕೆ ಪ್ರಕರಣಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಪಾಲಿಕೆಯಿಂದ ಪ್ರಕರಣಗಳಿಗೆ ಅನುಗುಣವಾಗಿ ಶುಲ್ಕ ನೀಡುವುದರಿಂದ ಐದು ಅಥವಾ ಆರು ವಕೀಲರನ್ನು ನೇಮಿಸಿಕೊಳ್ಳು ವುದು ಸೂಕ್ತ ಎಂದು ಸಲಹೆ ನೀಡಿದರು.

ಚರ್ಚೆಯ ನಂತರ ರೂಲಿಂಗ್ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಸದಸ್ಯರ ಒಕ್ಕೊರಲಿನ ಅಭಿಪ್ರಾಯದಂತೆ ವಕೀಲ ಶಿವರಾಮ್ ಅವರನ್ನು ಬದಲಾಯಿಸಲು ತೀರ್ಮಾನಿಸ ಲಾಗಿದೆ. ಅಲ್ಲದೇ ಹೊಸದಾಗಿ ವಕೀಲರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಇನ್ನು ಮುಂದೆ ಅಧಿಕಾರಿಗಳು ಆಯಾ ಪ್ರಕರಣದ ದಾಖಲೆಗಳನ್ನು ನಿಗದಿತ ಸಮ ಯದೊಳಗೇ ವಕೀಲರಿಗೇ ಸಲ್ಲಿಸಬೇಕು. ಅಧಿಕಾರಿಗಳೇನಾದರೂ ನಿಗದಿತ ಸಮಯದಲ್ಲಿ ವಕೀಲರಿಗೆ ಸೂಕ್ತ ಮಾಹಿತಿ ನೀಡದಿದ್ದಲ್ಲಿ ಅವರನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Translate »