ಯಾರೇ ಪಕ್ಷ ಬಿಟ್ಟರೂ ನಮಗೆ ಹಿನ್ನಡೆಯಾಗಲ್ಲ…
ಮೈಸೂರು

ಯಾರೇ ಪಕ್ಷ ಬಿಟ್ಟರೂ ನಮಗೆ ಹಿನ್ನಡೆಯಾಗಲ್ಲ…

March 8, 2020

ಮೈಸೂರು,ಮಾ.7(ಎಸ್‍ಬಿಡಿ)-ಯಾರೇ ಪಕ್ಷ ಬಿಟ್ಟರೂ ನಮಗೆ ಹಿನ್ನಡೆಯಾಗುವುದಿಲ್ಲ. ನಮ್ಮೊಂದಿಗೆ ಬಲಿಷ್ಠ ಕಾರ್ಯಕರ್ತರ ಪಡೆ ಯಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಮಂಜುನಾಥಪುರದಲ್ಲಿ ರುವ ಕೆಂಪೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 2008 ರಲ್ಲಿ ಅನೇಕ ನಾಯಕರು ಪಕ್ಷದಿಂದ ಹೊರ ಹೋದಾಗ ನಮ್ಮ ಕಾರ್ಯಕರ್ತರು ಪಕ್ಷ ವನ್ನು ಉಳಿಸಿ, ಬೆಳೆಸಿದರು. ಈಗ ಜೆಡಿಎಸ್ ಪಕ್ಷಕ್ಕೆ ನೆಲೆ ಇಲ್ಲದಂತಾಗಿ, ಅನೇಕ ನಾಯ ಕರು ಪಕ್ಷ ಬಿಡಲು ಸಿದ್ಧರಾಗಿದ್ದಾರೆ ಎಂದು ಅನೇಕರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಸತ್ಯಕ್ಕೆ ದೂರವಾದ ಇಂತಹ ವಿಷಯ ಗಳಿಗೆ ಯಾರೂ ಕಿವಿಗೊಡಬೇಡಿ. ಜೆಡಿಎಸ್ ಉಳಿದಿರುವುದು ಲಕ್ಷಾಂತರ ಕಾರ್ಯಕರ್ತ ರಿಂದಲೇ ಹೊರತು, ಪಕ್ಷ ಬಿಡುವ ನಾಯಕ ರಿಂದಲ್ಲ. ಯಾರೇ ಪಕ್ಷ ಬಿಟ್ಟು ಹೋದರೂ ನಮಗೆ ಹಿನ್ನಡೆಯಾಗುವುದಿಲ್ಲ. ನಮ್ಮ ಪಕ್ಷದಲ್ಲಿ ಬಲಿಷ್ಠ ಕಾರ್ಯಕರ್ತರ ಪಡೆಯೇ ಇದೆ ಎಂದು ಹೇಳಿದರು.

ಜಿಟಿಡಿಗೆ ಮತ್ತೆ ಟಾಂಗ್: ಜೆಡಿಎಸ್ ನಲ್ಲೇ ಇದ್ದರೂ ದೂರ ಉಳಿದಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡರನ್ನು ಕುಟುಕಿದ ಕುಮಾರಸ್ವಾಮಿ, ರಾಜಕೀಯ ಬದಲಾ ವಣೆ ಬಗ್ಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಚರ್ಚೆಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳ ಬೇಡಿ. ಏನೇ ಆದರೂ ನಿಮ್ಮ ಜತೆ ನಾನು ಮತ್ತು ಎಚ್.ಡಿ.ದೇವೇಗೌಡರು ಇರುತ್ತೇವೆ. ಜಿ.ಟಿ.ದೇವೇಗೌಡರು ಆಗಾಗ್ಗೆ ಬಂದು ಹೋಗುತ್ತಾರೆ. ಅವರನ್ನು ಮೈತ್ರಿ ಸರ್ಕಾರ ದಲ್ಲಿ ಮಂತ್ರಿ ಮಾಡಿ ತಪ್ಪು ಮಾಡಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದ ರಾಮಯ್ಯ ಅವರನ್ನು ಸೋಲಿಸಿದರೆಂದು ಅವರನ್ನು `ಮುಖ್ಯಮಂತ್ರಿ’ ಮಾಡಬೇಕಿತ್ತು ಎಂದು ಮತ್ತೆ ವ್ಯಂಗ್ಯವಾಡಿದರು.

ಪುತ್ರನ ವಿವಾಹಕ್ಕೆ ಆಹ್ವಾನ: ಹಲವು ತಿಂಗಳ ಬಳಿಕ ಮೈಸೂರಲ್ಲಿ ಕಾರ್ಯಕರ್ತರ ಸಭೆ ಯಲ್ಲಿ ಪಾಲ್ಗೊಂಡ ಕುಮಾರಸ್ವಾಮಿ ಅವರು, ಸಂಘಟನೆ ಜೊತೆಗೆ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹಕ್ಕೆ ಎಲ್ಲರನ್ನೂ ಆಹ್ವಾ ನಿಸಿದರು. ಮೈಸೂರು ನನಗೆ ರಾಜಕೀಯ ವಾಗಿ ಶಕ್ತಿ ತುಂಬಿದ 2ನೇ ಜಿಲ್ಲೆ. ಇಲ್ಲಿನ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಜಿಲ್ಲಾ ಪಂಚಾಯಿತಿ ಹಾಗೂ ಪಾಲಿಕೆ ಅಧಿಕಾರ ವನ್ನು ಜೆಡಿಎಸ್ ಅನೇಕ ವರ್ಷಗಳಿಂದ ಉಳಿಸಿಕೊಂಡು ಬರುವಂತಾಗಿದೆ ಎಂದರ ಲ್ಲದೆ, ನಾನು ರಾಜಕೀಯಕ್ಕೆ ಬಂದ ನಂತರ ಮೊದಲ ಬಾರಿಗೆ ನಮ್ಮ ಮನೆಯಲ್ಲಿ ಒಂದು ಶುಭ ಕಾರ್ಯ ನಡೆಯುತ್ತಿದೆ. ಏ.17 ರಂದು ನೆರವೇರಲಿರುವ ನನ್ನ ಮಗನ ಮದುವೆಗೆ ನನ್ನನ್ನು ಬೆಳೆಸಿದ ಎಲ್ಲರನ್ನು ಆಹ್ವಾನಿಸಿ ಗೌರ ವಿಸಬೇಕು ಎಂಬ ಆಸೆಯಿಂದ ಬಂದಿದ್ದೇನೆ. ನಿಮ್ಮ ಮನೆಯ ಮದುವೆ ಎಂದು ಭಾವಿಸಿ, ಓಡಾಡಬೇಕು. ನಾವು ಜೆಡಿಎಸ್ ಕಾರ್ಯ ಕ್ರಮ ಎಂದು ತಿಳಿದುಕೊಂಡು ಸಹಕರಿಸುವ ಮೂಲಕ ಕೆಟ್ಟದಾಗಿ ಮಾತನಾಡುತ್ತಿರುವವ ರಿಗೆ ತಕ್ಕ ಉತ್ತರ ನೀಡಬೇಕೆಂದು ಮನವಿ ಮಾಡಿಕೊಂಡರು. ಸಭೆಯಲ್ಲಿ ಶಾಸಕರಾದ ಸಾ.ರಾ.ಮಹೇಶ್, ಅಶ್ವಿನ್‍ಕುಮಾರ್, ಮೇಯರ್ ತಸ್ನೀಂ, ಜಿಲ್ಲಾಧ್ಯಕ್ಷ ನರ ಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚೆಲುವೇ ಗೌಡ, ಮಾಜಿ ಮೇಯರ್‍ಗಳಾದ ಆರ್. ಲಿಂಗಪ್ಪ, ರವಿಕುಮಾರ್, ಕಾರ್ಪೊರೇಟರ್ ಪ್ರೇಮಾ ಶಂಕರೇಗೌಡ, ಮುಖಂಡರಾದ ಕೆ.ವಿ.ಮಲ್ಲೇಶ್, ಸೈಯದ್ ರಹಮತ್ ಉಲ್ಲಾ ಮತ್ತಿತರರು ಉಪಸ್ಥಿತರಿದ್ದರು.

ರಮೇಶ್‍ಬಾಬು ರಾಜೀನಾಮೆಯಿಂದ  ಏನೂ ತೊಂದರೆ ಇಲ್ಲ: ಹೆಚ್‍ಡಿಕೆ
ಮೈಸೂರು, ಮಾ.7- ಮಾಜಿ ಎಂಎಲ್‍ಸಿ ರಮೇಶ್ ಬಾಬು ರಾಜೀನಾಮೆ ಯಿಂದ ಏನು ತೊಂದರೆಯಾಗಿದೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾಧ್ಯಮದವರನ್ನೇ ಪ್ರಶ್ನಿಸಿದರು.

ಮೈಸೂರಿನಲ್ಲಿ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಮೇಶ್ ಬಾಬು ರಾಜೀನಾಮೆಯಿಂದ ಏನು ತೊಂದರೆ ಆಗಿದೆ? ಅವರಿಗೆ ಅಧಿಕಾರಿ ಕೊಟ್ಟರೆ ಎಲ್ಲವೂ ಸರಿಯಾಗಿರುತ್ತದೆ. ಅಧಿಕಾರ ಕೊಡದಿದ್ದಾಗ ವರಿಷ್ಠರ ನಡೆ ಚೆನ್ನಾಗಿ ಇರಲ್ಲ. ಇದು ಸರ್ವೆ ಸಾಮಾನ್ಯ ಅಲ್ಲವೇ?. ಚೌಡನಹಳ್ಳಿಯ ಹಾಲಿ ವಿಧಾನ ಪರಿಷತ್ ಸದಸ್ಯರನ್ನು ತೆಗೆದುಹಾಕಿ ಇವರಿಗೆ ಟಿಕೆಟ್ ಕೊಡಲು ಆಗುತ್ತದೆಯೇ?. ಈಗಾಗಲೇ ಒಂದು ಚುನಾವಣೆಯಲ್ಲಿ ನಿಂತು ಸೋತಿದ್ದಾರೆ. ಮತ್ತೆ ಆ ಚುನಾವಣೆ ಬರುವವರೆಗೆ ಕಾಯಬೇಕು. ಯಾರೋ ಒಬ್ಬ ವ್ಯಕ್ತಿ ಪಕ್ಷ ಬಿಟ್ಟು ಹೋಗುವುದರಿಂದ ಪಕ್ಷಕ್ಕೆ ತೊಂದರೆ ಇಲ್ಲ ಎಂದರು.

ಜಿಟಿಡಿ ವಿಚಾರದಲ್ಲಿ ಆತುರವಿಲ್ಲ: ಶಾಸಕ ಜಿ.ಟಿ.ದೇವೇಗೌಡರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಿಟಿಡಿ ವಿಚಾರದಲ್ಲಿ ಆತುರ ಬೇಡ. ಅವರು ಅಧಿಕಾರ ಇದ್ದ ಕಡೆ ಇರುತ್ತಾರೆ. ಇಂದು ಬಿಜೆಪಿ ಸರ್ಕಾರ ಬಿದ್ದು ನಾಳೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮತ್ತೆ ಇಲ್ಲಿಗೆ ಬರುತ್ತಾರೆ. ಅವರ ವಿಚಾರದಲ್ಲಿ ನನಗೇ ಇಲ್ಲದ ಆತುರ ನಿಮಗೇಕೆ? ಎಂದು ಪ್ರಶ್ನಿಸಿದರು.

ವಿಶ್ವನಾಥ್‍ಗೆ ತಿರುಗೇಟು: ಪುತ್ರ ನಿಖಿಲ್ ಅವರ ಅದ್ದೂರಿ ವಿವಾಹದ ವಿಚಾರವಾಗಿ ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್‍ಡಿಕೆ, ನನ್ನ ಕುಟುಂಬದ ಮದುವೆ ವಿಚಾರದಲ್ಲಿ ಇವರಿಗೇಕೆ ಚಿಂತೆ. ಇವರು ಉಪ ಚುನಾವಣೆಯಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿದ್ದರು. ಆ ಪರಿಸ್ಥಿತಿಯಲ್ಲಿ ಅದೆಲ್ಲಾ ಬೇಕಿತ್ತಾ?. ಚುನಾವಣೆಗೆ ಯಾರಪ್ಪನ ಮನೆ ದುಡ್ಡು ಖರ್ಚು ಮಾಡಿದ್ದರು. ಯಾರು ಬಂಡವಾಳ ನೀಡಿದ್ದರು. ಒಂದೊಂದು ಕ್ಷೇತ್ರಕ್ಕೆ 60ರಿಂದ 100 ಕೋಟಿ ರೂ. ಖರ್ಚು ಮಾಡುವಾಗ ಪರಿಸ್ಥಿತಿ ಗೊತ್ತಿರಲಿಲ್ಲವಾ?. ಅವರಿಂದ ನಾನು ಹೇಳಿಸಿಕೊಳ್ಳಬೇಕಾ? ನನ್ನ ಕುಟುಂಬ ಹಾಗೂ ನಮ್ಮನ್ನು ಬೆಳೆಸಿದವರಿಗೆ ಊಟ ಹಾಕಿಸೋದು ಒಂದು ದೊಡ್ಡ ಕಾರ್ಯಕ್ರಮನಾ? ಅದೆಲ್ಲಾ ದುಂದು ವೆಚ್ಚನಾ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ನೀಡಿದ ಆಶ್ವಾಸನೆಗಳನ್ನು ಈಡೇರಿಸುವುದರಲ್ಲೇ ಯಡಿಯೂರಪ್ಪ ಅವರಿಗೆ ಸಾಕಾಗಿದೆ ಎಂಬ ಸಚಿವ ಬಿಸಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಅಂದು ನೀಡಿದ ಕಾರ್ಯಕ್ರಮಗಳಿಗೆ ಇಂದು ಯಡಿಯೂರಪ್ಪರನ್ನ ಕರೆದು ಕೊಂಡು ಹೋಗಿ ಗುದ್ದಲಿ ಪೂಜೆ ಮಾಡಿಸುತ್ತಿದ್ದಾರೆ. ನಾನು ಬಜೆಟ್‍ನಲ್ಲಿ ಇಟ್ಟಿದ್ದ ಹಣದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಆ ವ್ಯಕ್ತಿಯ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

Translate »