ಈ ಮಹನೀಯರ ಶ್ರೇಷ್ಠ ಸೇವೆಗಿಲ್ಲವೆ ಮನ್ನಣೆ!
ಮೈಸೂರು

ಈ ಮಹನೀಯರ ಶ್ರೇಷ್ಠ ಸೇವೆಗಿಲ್ಲವೆ ಮನ್ನಣೆ!

January 2, 2019

ಮೈಸೂರು: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಸ್ವಾತಂತ್ರ್ಯೋತ್ತರದ ವೇಳೆಯಲ್ಲಿ ಹಲವು ಪ್ರಮುಖ ಸ್ಥಾನ ಮಾನಗಳನ್ನು ಅಲಂಕರಿಸಿ ಮೈಸೂರು ನಗರದ ಅಭಿವೃದ್ಧಿಗೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ್ದರು ಆ ಮಹನೀಯರು. ಅವರೀಗ ನಮ್ಮ ನಡುವೆ ಇಲ್ಲವಾಗಿದ್ದಾರೆ. ಆದರೆ ಮೈಸೂರು ನಗರದಲ್ಲಿ ಒಂದು ರಸ್ತೆ ಇಲ್ಲವೇ ವೃತ್ತಕ್ಕೂ ಇವರ ಹೆಸರು ನಾಮಕರಣ ಮಾಡದೇ ಇರುವುದು ಅವರಿಗೆ ತೋರುವ ಅಗೌರವ ಅಲ್ಲವೇ ಎಂಬ ಪ್ರಶ್ನೆ ಕಾಡದಿರದು.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಅಪ್ಪಟ ಗಾಂಧಿವಾದಿ ದಿವಂಗತ ಬಿ.ನಾರಾಯಣಸ್ವಾಮಿ ಅವರ ಸ್ಮರಣಾರ್ಥ ಮೈಸೂರು ನಗರದಲ್ಲಿ ಯಾವುದೇ ರಸ್ತೆ ಅಥವಾ ವೃತ್ತಕ್ಕೆ ಅವರ ಹೆಸರು ನಾಮ ಕರಣ ಮಾಡಿಲ್ಲ. ಇದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಬಗ್ಗೆ ಸ್ಥಳೀಯ ಆಡಳಿತ ಯಾವ ರೀತಿಯಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮೈಸೂರು ನಗರಸಭೆ ಮತ್ತು ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯ (ಸಿಐಟಿಬಿ, ಈಗ ಇದನ್ನು ಮುಡಾ ಎಂದು ಮಾರ್ಪಡಿಸಲಾಗಿದೆ) ಅಧ್ಯ ಕ್ಷರು ಮಾತ್ರವಲ್ಲ, ಶಾಸಕರಾಗಿಯೂ ದಿವಂ ಗತ ಬಿ.ನಾರಾಯಣಸ್ವಾಮಿ ಸೇವೆ ಸಲ್ಲಿಸಿ ಮೈಸೂರು ನಗರದ ಸರ್ವ ತೋಮುಖ ಅಭಿವೃದ್ಧಿಗೆ ದುಡಿದಿದ್ದಾರೆ.

ಇವರು ಮೈಸೂರು ಆಕಾಶವಾಣಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅತ್ಯಂತ ಸರಳ-ಸಜ್ಜನಿಕೆ ರಾಜಕಾರಣಿ ಯಾಗಿ ಬದುಕು ಮಾಡಿದವರು. ಸಾರ್ವ ಜನಿಕ ಜೀವನದಲ್ಲಿ ಪ್ರಾಮಾಣಿಕತೆಗೆ ಬದ್ಧ ರಾಗಿ ಸೇವೆ ಸಲ್ಲಿಸಿದ ಧೀಮಂತ ವ್ಯಕ್ತಿತ್ವದ ಇವರ ಸ್ಮರಣೆ ಭವಿಷ್ಯದ ಪ್ರಜೆಗಳ ದಾರಿ ದೀಪ ಆಗಬಲ್ಲದು. ಆದರೆ ಅವರ ಸ್ಮರಣೆ ಗಾಗಿ ಮೈಸೂರಿನಲ್ಲಿ ಒಂದು ರಸ್ತೆ ಇಲ್ಲವೇ ವೃತ್ತಕ್ಕೂ ಹೆಸರು ನಾಮಕರಣ ಮಾಡದೇ ಇರುವುದು ನಿಜಕ್ಕೂ ಬೇಸರದ ಸಂಗತಿ.

4 ದಶಕಗಳ ರಾಜಕೀಯ ಜೀವನ: ಮೈಸೂರು ನಗರದ ಚಾಮರಾಜಪುರಂನ ದೇವಪಾರ್ಥೀವ ರಸ್ತೆಯ ನಿವಾಸದಲ್ಲಿ ವಾಸವಾಗಿದ್ದ ದಿವಂಗತ ಬಿ.ನಾರಾಯಣ ಸ್ವಾಮಿ ಅಪ್ರತಿಮ ದೇಶಪ್ರೇಮಿ. ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದ ರಲ್ಲದೆ, 1952ರ ವೇಳೆಯಲ್ಲಿ ವಿಧಾನ ಸಭಾ ಸದಸ್ಯರೂ (ಶಾಸಕರು) ಆಗಿದ್ದರು. ಹೀಗೆ ವಿವಿಧ ಸ್ಥಾನಮಾನಗಳನ್ನು ಅಲಂ ಕರಿಸಿ 4 ದಶಕಗಳು ತುಂಬು ರಾಜಕೀಯ ಜೀವನ ನಡೆಸಿದವರು ನಾರಾಯಣಸ್ವಾಮಿ.

1901ರಲ್ಲಿ ಶಿವಮೊಗ್ಗದ ಶಿಕಾರಿಪುರ ದಲ್ಲಿ ಜನಿಸಿದ ಬಿ.ನಾರಾಯಣಸ್ವಾಮಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶ್ರೀರಂಗ ಪಟ್ಟಣದಲ್ಲಿ ಪಡೆದರು. ಬಳಿಕ ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ ಶಿಕ್ಷಣ ಮುಂದು ವರೆಸುತ್ತಾರೆ. ಈ ಸಂದರ್ಭದಲ್ಲಿ ಬಿ.ವೆಂಕ ಟಕೃಷ್ಣಯ್ಯ (ತಾತಯ್ಯ) ಈ ಶಾಲೆ ಮುಖ್ಯಶಿಕ್ಷಕರಾಗಿದ್ದರು.

ತಮ್ಮ 15ನೇ ವಯಸ್ಸಿಗೆ 9ರ ಕನಕರನ್ನು ವಿವಾಹವಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಿದ ನಾರಾಯಣ ಸ್ವಾಮಿ, ಮಹಾರಾಜ ಕಾಲೇಜಿನಲ್ಲಿ ಬಿಎ ಶಿಕ್ಷಣ ಪೂರೈಸಿದರು. ಅಂದಿನ ಮದ್ರಾಸಿ ನಲ್ಲಿ ಕಾನೂನು ಅಧ್ಯಯನ ಮಾಡಿದ್ದು, 1927ರಲ್ಲಿ ಮದ್ರಾಸಿನಲ್ಲಿ ನಡೆದ ಕಾಂಗ್ರೆಸ್‍ನ ಸಮ್ಮೇಳನದ ವೇಳೆ ಮಹಾತ್ಮ ಗಾಂಧಿಯನ್ನು ಕಂಡಿದ್ದ ಇವರು, ಅವರ ತತ್ವ ಸಿದ್ಧಾಂತಗಳಿಂದ ಪ್ರಭಾವಿತರಾಗು ತ್ತಾರೆ. ಇದೇ ಸಂದರ್ಭದಲ್ಲಿಯೇ ಗಾಂಧಿ, ನೆಹರು, ಮೌಲಾನ ಅಬ್ದುಲ್ ಕಲಾಂ, ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್ ಅವರ ದೇಶಾಭಿಮಾನದ ನುಡಿ ಗಳಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕುತ್ತಾರೆ.

ಶಿವಪುರ ಸತ್ಯಾಗ್ರಹದಲ್ಲಿ ಭಾಗವಹಿ ಸಿದ್ದ ಇವರು ಮೈಸೂರು ನಗರ ಕಾಂಗ್ರೆಸ್‍ನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿ ದ್ದಾರೆ. ದೇಶದೆಲ್ಲೆಡೆ ಸ್ವಾತಂತ್ರ್ಯ ಚಳವಳಿ ಕಾವು ತೀವ್ರಗೊಂಡ ಸಂದರ್ಭದಲ್ಲಿ ಗಾಂಧಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳುವಳಿಗೆ ತಮ್ಮನ್ನು ತಾವೇ ಅರ್ಪಿಸಿ ಕೊಂಡು ಸೆರೆಮನೆ ವಾಸ ಅನುಭವಿಸಿದರು. ಇವರು ಗಾಂಧಿ ತತ್ವಗಳನ್ನು ತಮ್ಮ ಜೀವನ ದಲ್ಲಿ ಪಾಲಿಸಿಕೊಂಡು ಬಂದಿದ್ದು ಮಾತ್ರ ವಲ್ಲದೆ, ಕೊನೆಯುಸಿರು ಇರುವವ ರೆಗೂ ಗಾಂಧೀಜಿಗೆ ಅಪ್ಯಾಯಮಾನ ವಾಗಿದ್ದ ದೇಶಾಭಿಮಾನದ ಸಂಕೇತವಾದ ಖಾದಿ ಉಡುಪನ್ನೇ ಧರಿಸಿದ್ದ ದೇಶಪ್ರೇಮಿ. ಇಂತಹ ಮೇರು ವ್ಯಕ್ತಿತ್ವದ ಸ್ಮರಣಾರ್ಥ ಮೈಸೂರು ನಗರದಲ್ಲಿ ಎಲ್ಲಿಯೂ ಇವರ ಹೆಸರಿನಲ್ಲಿ ರಸ್ತೆಯಾಗಲೀ ಅಥವಾ ವೃತ್ತ ವಾಗಲೀ ಇಲ್ಲದೇ ಇರುವುದು ವಿಪರ್ಯಾಸ.

ಎಂ.ಬಿ.ಪವನ್‍ಮೂರ್ತಿ

Translate »